ಫ್ರೀಡಂ ಪಾರ್ಕ್ ಸಭಾಂಗಣಕ್ಕೆ ಪ್ರೋ ಎಚ್.ಎಸ್. ದೊರೆಸ್ವಾಮಿ ಹೆಸರಿಡಿ: ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ ಆಗ್ರಹ
ಫ್ರೀಡಂ ಪಾರ್ಕ್ ಸಭಾಂಗಣಕ್ಕೆ ಪ್ರೋ ಎಚ್.ಎಸ್. ದೊರೆಸ್ವಾಮಿ ಹೆಸರಿಡಿ: ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ ಆಗ್ರಹ
ಬೆಂಗಳೂರು,ಏ.15: ಸ್ವಾತಂತ್ರ್ಯ ಉದ್ಯಾನವದಲ್ಲಿ ನಿರ್ಮಾಣವಾಗಿರುವ ಫ್ರೀಡಂ ಪಾರ್ಕ್ ಸಭಾಂಗಣಕ್ಕೆ ನಾಡಿನ ಸಾಕ್ಷಿ ಪ್ರಜ್ಞೆ, ಮಹಾನ್ ಸ್ವಾತಂತ್ರ ಹೋರಾಟಗಾರರಲ್ಲಿ ಒಬ್ಬರಾದ ಪ್ರೋ ಎಚ್.ಎಸ್. ದೊರೆಸ್ವಾಮಿ ಹೆಸರನ್ನು ನಾಮಕರಣ ಮಾಡುವಂತೆ ಸ್ವಾತಂತ್ರ್ಯ ಉದ್ಯಾನ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ಗಂಡಸಿ ಸದಾನಂದ ಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಎಚ್.ಎಸ್. ದೊರೆಸ್ವಾಮಿ. ಅವರು ತಮ್ಮ ಜೀವನವನ್ನೇ ದೇಶದ ಸ್ವಾತಂತ್ರ್ಯಕ್ಕಾಗಿ ಸಮರ್ಪಿಸಿದ ಧೈರ್ಯಶಾಲಿಯಾಗಿದ್ದರು. ಅವರು ಪತ್ರಕರ್ತರಾಗಿ, ಸಾಹಿತಿಯಾಗಿ, ನಾಡು, ನುಡಿಗಾಗಿ ಟೊಂಕ ಕಟ್ಟಿ ನಿಂತು ಹೋರಾಟ ಮಾಡಿದ ಮಹಾನ್ ಚೇತನ. ದೇಶಕ್ಕಾಗಿ ಸೆರೆ ವಾಸ ಅನುಭವಿಸಿದ್ದರು. ಜೈಲಿನಲ್ಲಿದ್ದಾಗಲೂ ಅವರು ದೇಶಭಕ್ತಿಯ ಚಿಂತನೆಗಳನ್ನು ಮುಂದುವರಿಸಿದರು. ಅವರು ಸಹ ಹೋರಾಟಗಾರರಿಗೆ ಪ್ರೇರಣೆ ನೀಡುತ್ತಿದ್ದರು. ಸ್ವಾತಂತ್ರ್ಯಕ್ಕಾಗಿ ಅವರು ಅನುಭವಿಸಿದ ಕಷ್ಟಗಳು ಅವರ ತ್ಯಾಗ ಮನೋಭಾವ ನಮಗೆಲ್ಲರಿಗೂ ಮಾದರಿ ಎಂದಿದ್ಧಾರೆ.
ಇದೇ ಸೆರೆ ಮನೆ ಆವರಣವನ್ನು ಇದೀಗ ಫ್ರೀಡಂ ಪಾರ್ಕ್ [ಸ್ವಾತಂತ್ರ್ಯ ಉದ್ಯಾನವನ] ಎಂದು ನಾಮಕರಣ ಮಾಡಲಾಗಿದೆ. ಇದು ನಾಡಿನ ಹೋರಾಟಗಾರರ ಕರ್ಮಭೂಮಿಯಾಗಿದೆ. ಫ್ರೀಡಂ ಪಾರ್ಕ್ ಉಳಿಸಲು ಎಚ್.ಎಸ್. ದೊರೆಸ್ವಾಮಿ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರು ಫ್ರೀಡಂ ಪಾರ್ಕ್ ಉಳಿಸಿ ಹೋರಾಟ ಸಮಿತಿಯ ಗೌರವಾಧ್ಯಕ್ಷರಾಗಿ ನಮ್ಮೊಂದಿಗೆ ಅಚಲವಾಗಿ ನಿಂತಿದ್ದರು.
ಎಚ್.ಎಸ್. ದೊರೆಸ್ವಾಮಿ ಅವರ ಜೀವನವು ಯುವ ಪೀಳಿಗೆಗೆ ಒಂದು ಮಾದರಿ. ಅವರ ಧೈರ್ಯ, ತ್ಯಾಗ ಮತ್ತು ದೇಶಭಕ್ತಿ ನಮ್ಮೆಲ್ಲರಿಗೂ ಸ್ಪೂರ್ತಿ ನೀಡುತ್ತದೆ. ಇಂತಹ ಮಹಾನ್ ಹೋರಾಟಗಾರರ ಸೇವೆಯನ್ನು ನಾವು ಸದಾ ಸ್ಮರಿಸಲು, ಅವರ ಹೆಸರು ಅಜರಾಮರವಾಗಿ ಉಳಿಯಬೇಕು ಎನ್ನುವ ದೃಷ್ಟಿಯಿಂದ ಹೊಸದಾಗಿ ಎಚ್.ಎಸ್.ದೊರೆಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಬೇಕು. ಇದರಿಂದ ಹೋರಾಟಗಾರರ ನೈತಿಕ ಸ್ಥೈರ್ಯ ಹೆಚ್ಚಿಸಿದಂತಾಗುತ್ತದೆ. ಸರ್ಕಾರ ಕೂಡ ಹಿರಿಯ ಚೇತನರನ್ನು ಸ್ಮರಿಸಿ ಗೌರವಿಸಿದಂಗಾಗುತ್ತದೆ ಎಂದು ಗಂಡಸಿ ಸದಾನಂದ ಸ್ವಾಮಿ ಹೇಳಿದ್ದಾರೆ.





Comments
Leave a Comment