ಕೇಂದ್ರದ ಅಕ್ಕಿಗಿನ್ನು ಶೇ.1ರಷ್ಟು ಪೌಷ್ಟಿಕಾಂಶ ಸೇರ್ಪಡೆ; ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ,18000 ಕೋಟಿ ರೂ. ವೆಚ್ಚದಲ್ಲಿ 5 ವರ್ಷ ಸಾರವರ್ಧಿತ ಅಕ್ಕಿ ವಿತರಣೆಗೆ ಕ್ರಮ
ಹುಬ್ಬಳ್ಳಿ: ಕೇಂದ್ರ ಸರ್ಕಾರ ವಿತರಿಸುವ ಪಡಿತರ ಅಕ್ಕಿಗೆ ಶೇ.1ರಷ್ಟು ಪೌಷ್ಟಿಕಾಂಶ ಸೇರಿಸಲಾಗುತ್ತದೆ ಎಂದು ಕೇಂದ್ರ ಸಚಿವ ಆಹಾರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡಿ, ಅಕ್ಕಿಗೆ ಪೌಷ್ಟಿಕಾಂಶ ಸೇರಿಸಿ ಸಾರವರ್ಧಿತ ಅಕ್ಕಿ ತಯಾರಿಸಿ ವಿತರಿಸಲು ಕೇಂದ್ರ ಕ್ರಮ ಕೈಗೊಂಡಿದೆ ಎಂದು ಹೇಳಿದರು.
ಗರೀಬ್ ಕಲ್ಯಾಣ ಮತ್ತು ಅಂತ್ಯೋದಯ ಅನ್ನ ಯೋಜನೆಯಡಿ ವಿತರಿಸುವ ಅಕ್ಕಿಗೆ ಇನ್ನು ಮುಂದೆ ಶೇ.1ರಷ್ಟು ಪೌಷ್ಟಿಕಾಂಶವನ್ನು ಸೇರಿಸಲಾಗುತ್ತದೆ ಎಂದು ಹೇಳಿದರು.
ರಕ್ತಹೀನತೆಯನ್ನು ಹೋಗಲಾಡಿಸಲು ಪೌಷ್ಠಿಕಾಂಶಯುಕ್ತ, ಸಾರವರ್ಧಿತ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, 5 ವರ್ಷಗಳ ಕಾಲ ಬಲವರ್ಧಿತ ಅಕ್ಕಿ ವಿತರಣೆಗೆ ಅನುಮೋದನೆ ನೀಡಿದೆ ಎಂದರು.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಅಂತ್ಯೋದಯ ಅನ್ನ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ ವಿತರಿಸುತ್ತಿದ್ದು, ಇದಕ್ಕೆ 1% ಪೌಷ್ಟಿಕಾಂಶಗಳನ್ನು ಸೇರಿಸಿ, ಬಲವರ್ಧಿತ ಅಕ್ಕಿಯಾಗಿ ವಿತರಿಸಲಾಗುವುದು ಎಂದು ತಿಳಿಸಿದರು.
18000 ಕೋಟಿ ವೆಚ್ಚ
ದೇಶಾದ್ಯಂತ ಈ ಪೌಷ್ಟಿಕಾಂಶಯುಕ್ತ ಅಕ್ಕಿ ವಿತರಣೆಗೆ 18000 ಕೋಟಿ ರು. ವೆಚ್ಚದ ಯೋಜನೆ ಇದಾಗಿದ್ದು, ಕಡುಬಡವರನ್ನು ರಕ್ತಹೀನತೆಯಿಂದ ಕಾಪಾಡಲು ಪ್ರಯೋಜನವಾಗಲಿದೆ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ರಾಜ್ಯ ಸರ್ಕಾರದ್ದು ಯಾವ ಭಾಗ್ಯವೂ ಇಲ್ಲ: ರಾಜ್ಯ ಸರ್ಕಾರ ಅನ್ನ ಭಾಗ್ಯ ಘೋಷಣೆ ಮಾಡಿದ್ದಷ್ಟೇ. ಯಾವ ಭಾಗ್ಯವೂ ಇಲ್ಲ! ಕೇಂದ್ರ ಸರ್ಕಾರ ಪೂರೈಸುವ 5 ಕೆಜಿ ಅಕ್ಕಿಯನ್ನಷ್ಟೇ ನೀಡುತ್ತಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ರಾಜ್ಯ ಸರ್ಕಾರವನ್ನು ಟೀಕಿಸಿದರು.






