೧೩ರಂದು ಎನ್‌ಎಂಪಿಎ ಸುವರ್ಣ ಮಹೋತ್ಸವ
೧೩ರಂದು ಎನ್‌ಎಂಪಿಎ ಸುವರ್ಣ ಮಹೋತ್ಸವ
from Jayaram Udupi
ಮಂಗಳೂರು; ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ಯ ೫೦ನೇ ವರ್ಷಾಚರಣೆ ಪಣಂಬೂರಿನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸುವರ್ಣ ಮಹೋತ್ಸವದ ಅಂಗವಾಗಿ ಎನ್‌ಎಂಪಿಎಯ ಬೆಳವಣಿಗೆಯ ಹಾದಿಯ ಪ್ರದರ್ಶನ ವಿಶೇಷ ಆಕರ್ಷಣೆಯಾಗಿರಲಿದೆ ಎಂದು ಎನ್‌ಎಂಪಿಎಯ ಉಪಾಧ್ಯಕ್ಷೆ ಶಾಂತಿ ಮಂಗಳೂರಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ೨೦ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಾಗುವುದು. ಮಧ್ಯಾಹ್ನ ೨.೩೦ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೇಂದ್ರದ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೊನೋವಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಹಾಗು ರಾಜ್ಯದ ಮೀನುಗಾರಿಕಾ, ಬಂದರು, ಜಲ ಸಾರಿಗೆ ಸಚಿವ ಮಾಂಕಾಳ ವೈದ್ಯ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮಾರಂಭದಲ್ಲಿ ಎನ್‌ಎಂಪಿಎಯ ೫೦ ವರ್ಷಗಳ ಸೇವೆ, ಬೆಳವಣಿಗೆ ಹಾದಿಯ ಪಯಣದಲ್ಲಿನ ಪ್ರಮುಖ ಮೈಲಿಗಲ್ಲುಗಳು, ಅಭಿವೃದ್ಧಿ ಯೋಜನೆಗಳು ಮತ್ತು ಸಮುದ್ರಯಾನ ವಿಭಾಗದಲ್ಲಿನ ಕೊಡುಗೆಗಳ ಕುರಿತಾದ ಪ್ರದರ್ಶನವನ್ನು ಆಯೋಜಿಸಲಾಗಿದೆ.
ರಾಷ್ಟ್ರೀಯ ಸುರಕ್ಷತೆಯ ಹಿನ್ನೆಲೆಯಲ್ಲಿ ಎನ್‌ಎಂಪಿಎ ಒಳಗಡೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧವಿರುವ ಕಾರಣ, ಎನ್‌ಎಂಪಿಎಯ ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ‘ಜನರ ಬಳಿಗೆ ಬಂದರು’ ಎಂಬ ಪರಿಕಲ್ಪನೆಯಡಿ ಈ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಎನ್‌ಎಂಪಿಎ ಉಪ ಸಂರಕ್ಷಕ ಮನೋಜ್ ಜೋಶಿ ಉಪಸ್ಥಿತರಿದ್ದರು.








