ಬವೇರಿಯಾ ಜತೆ ಪಾಲುದಾರಿಕೆಗೆ ಯಥೇಚ್ಛ ಅವಕಾಶ: ಸಚಿವ ಎಂ ಬಿ ಪಾಟೀಲ ಚರ್ಚೆ

Banglore:

Font size:

ಬವೇರಿಯಾ ಜತೆ ಪಾಲುದಾರಿಕೆಗೆ ಯಥೇಚ್ಛ ಅವಕಾಶ: ಸಚಿವ ಎಂ ಬಿ ಪಾಟೀಲ ಚರ್ಚೆ

ಬೆಂಗಳೂರು:

ಕರ್ನಾಟಕ ಮತ್ತು ಜರ್ಮನಿಯ ಬವೇರಿಯಾ ಪ್ರಾಂತ್ಯಗಳೆರಡೂ ಮಾಹಿತಿ ತಂತ್ರಜ್ಞಾನ, ವೈಮಾಂತರಿಕ್ಷ, ರಕ್ಷಣೆ, ಸಂಶೋಧನೆ ಮತ್ತು ಅಭಿವೃದ್ಧಿ, ಸೆಮಿಕಂಡಕ್ಟರ್, ನವೋದ್ಯಮ ಮುಂತಾದ ಕ್ಷೇತ್ರಗಳಲ್ಲಿ ಅಪಾರ ಪ್ರಗತಿ ಸಾಧಿಸಿದ್ದು, ದ್ವಿಪಕ್ಷೀಯ ಸಹಭಾಗಿತ್ವ ಮತ್ತು ಹೂಡಿಕೆಗೆ ಯಥೇಚ್ಚ ಅವಕಾಶಗಳಿವೆ. ಈ ಸಂಬಂಧ ನೀಲನಕ್ಷೆ ರೂಪಿಸಿ, ಇದಕ್ಕೆ ಅಂತಿಮರೂಪ ನೀಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ತಮ್ಮನ್ನು ಸೋಮವಾರ ವಿಧಾನಸೌಧದಲ್ಲಿ ಭೇಟಿಯಾದ ಬವೇರಿಯಾದ ಪ್ರಾಂತೀಯ ಸಂಸತ್ತಿನ ಅಧ್ಯಕ್ಷೆ ಐಲ್ ಏಗ್ನರ್ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ಅವರು ಮಾತುಕತೆ ನಡೆಸಿದರು.

ಈ ನಿಯೋಗದ ಸದಸ್ಯರು ಕರ್ನಾಟಕವು ಬವೇರಿಯಾದ `ಪ್ರಿವಿಲೈಜ್ಡ್ ಪಾರ್ಟನರ್’ ಆಗಬೇಕೆಂದು ಬಯಸಿದ್ದಾರೆ. ಈ ಸಂಬಂಧ ವಿಸ್ತೃತ ಚರ್ಚೆ ನಡೆಯಬೇಕಾದ ಅಗತ್ಯವಿದ್ದು, ತಂತ್ರಜ್ಞಾನ ವಿನಿಮಯ ಮಾಡಿಕೊಳ್ಳಲು ಪರಿಸ್ಥಿತಿ ನಿಚ್ಚಳವಾಗಿದೆ. ಜರ್ಮನಿಯ ಈ ಪ್ರಾಂತ್ಯವು ಸೂಪರ್ ಕಂಪ್ಯೂಟಿಂಗ್, ಕ್ವಾಂಟಂ ತಂತ್ರಜ್ಞಾನ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದೆ. ನಾವು ಕೂಡ ಕ್ವಾಂಟಂ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ನೀತಿಯನ್ನೇ ರೂಪಿಸಿದ್ದೇವೆ ಮತ್ತು ಇಲ್ಲಿ ಲ್ಯಾಮ್ ಸಂಶೋಧನೆ ಕೂಡ ಇದ್ದು, ಪಾಲುದಾರಿಕೆ ನಿರೀಕ್ಷಿಸಲಾಗುತ್ತಿದೆ ಎನ್ನುವುದನ್ನು ಅವರ ಗಮನಕ್ಕೆ ತರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಆ ಪ್ರಾಂತ್ಯವು ಬೆಂಗಳೂರಿನಲ್ಲಿ 20 ವರ್ಷಗಳಿಂದಲೂ ತನ್ನ ಪ್ರತಿನಿಧಿ ಕಚೇರಿ ಹೊಂದಿದೆ. ಅಲ್ಲಿ ಉನ್ನತ ಶಿಕ್ಷಣ ಚೆನ್ನಾಗಿದೆ. ಅಲ್ಲಿಯ ವಿ.ವಿ.ಗಳು ನಮ್ಮಲ್ಲಿ ಬರುತ್ತಿರುವ ಕ್ವಿನ್ ಸಿಟಿಯಲ್ಲಿ ಕ್ಯಾಂಪಸ್ ತೆರೆಯಬಹುದು ಮತ್ತು ಸ್ಥಳೀಯ ವಿ.ವಿ.ಗಳೊಂದಿಗೆ ಜ್ಞಾನಾಧಾರಿತ ಒಡಂಬಡಿಕೆ ಮಾಡಿಕೊಂಡರೆ ಅದು ಸ್ವಾಗತಾರ್ಹ. ಜರ್ಮನಿಯಲ್ಲಿ ಭಾರತದ 200ಕ್ಕೂ ಹೆಚ್ಚು ಮತ್ತು ಭಾರತದಲ್ಲಿ ಅಲ್ಲಿನ 2,000ಕ್ಕೂ ಹೆಚ್ಚು ಕಂಪನಿಗಳು ನೆಲೆಯೂರಿವೆ ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ಯುವತಿಯರು ತಾಂತ್ರಿಕ ಶಿಕ್ಷಣ ಪಡೆಯುತ್ತಿರುವುದು ಅವರಿಗೆ ಅಚ್ಚರಿ ಮೂಡಿಸಿದ್ದು, ತಮ್ಮಲ್ಲೂ ಇಂತಹ ಕ್ರಮಗಳನ್ನು ಅಳವಡಿಸಿಕೊಳ್ಳಲು ಅವರು ಆಸಕ್ತಿ ಹೊಂದಿದ್ದಾರೆ. ಆದರೆ, ರಾಜ್ಯದಲ್ಲಿ ಮೊದಲಿನಿಂದಲೂ ಹೆಣ್ಣು ಮಕ್ಕಳು ಶೈಕ್ಷಣಿಕ ಪ್ರಗತಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಬೇಕಾದ ಒಳ್ಳೆಯ ವಾತಾವರಣ ನಮ್ಮಲ್ಲಿದ್ದು, ಇದು ಮುಂದೆಯೂ ಹೀಗೆಯೇ ಇರಲಿದೆ ಎಂದು ಪಾಟೀಲ ವಿವರಿಸಿದ್ದಾರೆ.

ಬವೇರಿಯಾ ನಿಯೋಗದಲ್ಲಿ ಅಲ್ಲಿನ ಸಂಸತ್ತಿನ ಉಪಾಧ್ಯಕ್ಷ ಮಾರ್ಕಸ್ ರಿಂಡರ್ ಸ್ಪೇಕರ್, ಸಂಸದರಾದ ಮಾರ್ಟಿನಾ ಗ್ಯುಬೆಲ್, ಟೋಬಿಯಾಸ್ ರೀಬ್, ಅಲೆಕ್ಸಾಂಡರ್ ಹೋಲ್ಡ್, ಲುಡ್ವಿಗ್ ಹಾರ್ಟ್ಮನ್ ಮತ್ತು ಬ್ಯಾಂಕಿಂಗ್ ಪರಿಣತ ಆಂಡ್ರಿಯಾಸ್ ಜಾಕೆಲ್ ಇದ್ದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಇದ್ದರು.

000
ಫಾರ್ಮಾ ಸಂಸ್ಥೆಗಳ ಮುಖ್ಯಸ್ಥರ ಜತೆ ದುಂಡುಮೇಜಿನ ಸಭೆ

ಕ್ವಿನ್ಸ್ ಸಿಟಿಯಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರ ಸ್ಥಾಪನೆಗೆ ಕೇಂದ್ರಕ್ಕೆ ಪತ್ರ: ಎಂ ಬಿ ಪಾಟೀಲ

ಬೆಂಗಳೂರು: ರಾಜ್ಯದಲ್ಲಿ ಔಷಧ ತಯಾರಿಕಾ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿ ಕೇಂದ್ರ ಸರಕಾರವು ಒಂದು ರಾಷ್ಟ್ರೀಯ ಔಷಧ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಕೇಂದ್ರವನ್ನು (ನೈಪರ್) ಮಂಜೂರು ಮಾಡಬೇಕಾದ ಜರೂರಿದೆ. ಈ ಕೇಂದ್ರಕ್ಕೆ ಉದ್ದೇಶಿತ ಕ್ವಿನ್ ಸಿಟಿಯಲ್ಲಿ ಸ್ಥಳಾವಕಾಶ ಮಾಡಿಕೊಡಲು ಸರಕಾರ ಮುಕ್ತ ಮನಸ್ಸನ್ನು ಹೊಂದಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಚರ್ಚಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಸೋಮವಾರ ಇಲ್ಲಿನ ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಔಷಧ ಮತ್ತು ಬಯೋಟೆಕ್ ತಯಾರಿಕಾ ಕಂಪನಿಗಳ ಮುಖ್ಯಸ್ಥರ ಜತೆಗಿ‌ನ ದುಂಡು ಮೇಜಿನ ಸಭೆಯಲ್ಲಿ ಅವರು ಮಾತನಾಡಿದರು.

ಫಾರ್ಮಾ ಕಂಪನಿಗಳ ಸಲಹೆ ಮೇರೆಗೆ ಸಚಿವರು ಈ ವಿಷಯ ತಿಳಿಸಿದರು. ಕರ್ನಾಟಕದಲ್ಲಿ ಇರುವ ಉತ್ತಮ ಫಾರ್ಮಾ ಕಾರ್ಯಪರಿಸರದಿಂದಾಗಿ ಕೇವಲ‌ ನೆರೆ ರಾಜ್ಯಗಳೊಂದಿಗೆ ಸ್ಪರ್ಧೆ ಅಷ್ಟೇ ಅಲ್ಲ ಚೀನಾ ಜತೆಗೂ ಮಾಡಬಹುದಾಗಿದೆ ಎಂದು ಅನೇಕ ಉದ್ಯಮಿಗಳು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಹೂಡಿಕೆ ಮಾಡುವ ಸಂಸ್ಥೆಗಳಿಗೆ ಅಗತ್ಯ ಇರುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರದ ಕಡೆಯಿಂದ ನೀಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಚೆನ್ನೈ- ಬೆಂಗಳೂರು ಬಿಜಿನೆಸ್ ಕಾರಿಡಾರಿನಲ್ಲಿ ತುಮಕೂರಿನಲ್ಲಿ 360 ಎಕರೆ, ವಿಜಯಪುರದ ಮುಳವಾಡ ಹಂತ 1 ಮತ್ತು 2ರಲ್ಲಿ 850 ಎಕರೆ, ಯಾದಗಿರಿ ಜಿಲ್ಲೆಯ ಕಡಚೂರಿನಲ್ಲಿ 763 ಎಕರೆ, ಚಿತ್ರದುರ್ಗದ ಯಟಗುರ್ಕಿಯಲ್ಲಿ 764 ಎಕರೆ ಭೂಮಿ ಅಲ್ಲಿಯ ಕೈಗಾರಿಕಾ ಪ್ರದೇಶಗಳಲ್ಲಿ ಲಭ್ಯವಿದೆ. ಜೊತೆಗೆ ಫಾರ್ಮಾಸುಟಿಕಲ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿರುವ ಕೋಲಾರದ ಶ್ರೀನಿವಾಸಪುರ ಮತ್ತು ಚಾಮರಾಜನಗರದಲ್ಲಿ ತಲಾ 1,000 ಎಕರೆ ಜಾಗವಿದೆ. ಔಷಧ ತಯಾರಿಕೆ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿ, ತಮ್ಮ ಉದ್ಯಮ ಸ್ಥಾಪಿಸುವತ್ತ ಗಮನ ಹರಿಸಬೇಕು ಎಂದು ಅವರು ಕರೆ ಕೊಟ್ಟಿದ್ದಾರೆ.

ಕೆಲವೆಡೆಗಳಲ್ಲಿ ವಸತಿ, ಶಾಲೆ, ಹೋಟೆಲ್, ಸಂಪರ್ಕ ರಸ್ತೆಗಳು ಇಲ್ಲದಿರುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಉದ್ಯಮಿಗಳು ಬೆಂಗಳೂರಿನಿಂದ ಹೊರಗಿನ ಸ್ಥಳಗಳಲ್ಲಿ ಹೂಡಿಕೆ ಮಾಡಿದರೆ ಆಕರ್ಷಕ ರಿಯಾಯಿತಿಗಳನ್ನು ಕೊಡಲಾಗುವುದು. ಜೊತೆಗೆ ಕೈಗಾರಿಕಾ ಪ್ರದೇಶಗಳಲ್ಲಿ ಇರುವ ಸಿ.ಎ. ನಿವೇಶನಗಳಲ್ಲಿ ವಸತಿ/ಶಾಲೆ ಆರಂಭಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಿ-ಕ್ಯಾಂಪ್ ಮಾದರಿಯಲ್ಲಿ ಶೈಕ್ಷಣಿಕ ಅನುಕೂಲ ಕಲ್ಪಿಸುವುದನ್ನು ಚಿಂತಿಸಲಾಗುವುದು. ಜೊತೆಗೆ ಏಕಗವಾಕ್ಷಿ ವ್ಯವಸ್ಥೆಯಡಿ ಅನುಮೋದನೆಗಳನ್ನು ತ್ವರಿತ ಗತಿಯಲ್ಲಿ ನೀಡುವಂತೆ ಸಿಬ್ಬಂದಿಗೆ ತರಬೇತಿ ಕೊಡಲಾಗಿದೆ. ಮುಂದಿನ 6 ತಿಂಗಳಲ್ಲಿ ಈ ಬದಲಾವಣೆ ಕಣ್ಣಿಗೆ ಕಾಣಲಿದೆ ಎಂದು ಅವರು ಭರವಸೆ ಕೊಟ್ಟಿದ್ದಾರೆ.

ಔಷಧ ತಯಾರಿಕಾ ಕ್ಷೇತ್ರದಲ್ಲಿ ಈಗ ಕೃತಕ ಬುದ್ಧಿಮತ್ತೆ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಇದನ್ನು ಉದಾಸೀನ ಮಾಡಬಾರದು. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸಂಶೋಧನಾ ಚಟುವಟಿಕೆಗಳು ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳಬೇಕಾಗಿದೆ. ಫಾರ್ಮಾ ವಲಯದವರು ಆರು ತಿಂಗಳಿಗೊಮ್ಮೆಯಾದರೂ ಒಂದು ಸಭೆ ನಡೆಸಿ, ಹೊಸ ಆಗುಹೋಗುಗಳಿಗೆ ತೆರೆದುಕೊಳ್ಳಬೇಕು ಎಂದು ಅವರು ನುಡಿದಿದ್ದಾರೆ.

ರಾಜ್ಯದಲ್ಲಿ ಉದ್ಯಮಗಳಿಗೆ 1 ಕಿಲೋ ಲೀಟರ್ ನೀರಿಗೆ ಕೇವಲ 50 ರೂ. ವಿಧಿಸಲಾಗುತ್ತಿದೆ. ನೆರೆಯ ರಾಜ್ಯಗಳಲ್ಲಿ ಇದನ್ನು 120 ರೂ.ಗೆ ಏರಿಸಲಾಗಿದೆ. ಕೈಗಾರಿಕಾ ಪ್ರದೇಶಗಳಲ್ಲಿರುವ ಕಂಪನಿಗಳು ಪ್ರತ್ಯೇಕವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು ಹೊಂದುವ ಬದಲು ಸಾಮೂಹಿಕವಾಗಿ ಮಾಡಿಕೊಂಡರೆ ಮಿತವ್ಯಯ ಸಾಧಿಸಬಹುದು ಎಂದು ಪಾಟೀಲ ಸಲಹೆ ನೀಡಿದ್ದಾರೆ.

ದುಂಡು ಮೇಜಿನ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ನೋವೋ ನಾರ್ಡಿಸ್ಕ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರೀಯ, ಭಾರತ್ ಬಯೋಟೆಕ್ ಸಿಎಫ್ಒ ಶ್ರೀನಿವಾಸ್, ಕೆಮ್ವೆಲ್ ಬಯೋಫಾರ್ಮಾದ ಸಿಇಒ ಅನಿರಾಗ್ ಬಗಾರಿಯ, ಶಿಲ್ಪಾ ಬಯಲಾಜಿಕಲ್ಸ್ ಸಿಇಒ ಶ್ರೀದೇವಿ ಕಂಬಂಪಾಟಿ, ಬಯೋಕಾನ್ ವತಿಯಿಂದ ಡಾ.ಕೆ ಅನಿಲ್ ಮುಂತಾದವರು ಉಪಸ್ಥಿತರಿದ್ದರು.

Prev Post ಜರ್ಮನಿಯ ಬವೇರಿಯಾ ಪಾರ್ಲಿಮೆಂಟ್ ಸಭಾಧ್ಯಕ್ಷರ ನೇತೃತ್ವದ ನಿಯೋಗದ ಭೇಟಿ ಗ್ಯಾರಂಟಿ ಸೇರಿದಂತೆ ಅಭಿವೃದ್ಧಿ ವಿಷಯ ಕುರಿತು ಚರ್ಚೆ
Next Post ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ: ಬಸವರಾಜ ಬೊಮ್ಮಾಯಿ