*ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಚರ್ಚೆ ಮಾಡಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
*ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಚರ್ಚೆ ಮಾಡಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್*
*ಪಕ್ಷದ ನೂತನ ಕಚೇರಿ ಶಂಕುಸ್ಥಾಪನೆ ಬಗ್ಗೆ ಚರ್ಚೆ*
*ಮೇಕೆದಾಟು ಯೋಜನೆ ಜಾರಿಗೆ ತಡ ಮಾಡುವುದಿಲ್ಲ*
*ಬೆಂಗಳೂರು, ನ. 17:*
"ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ರಾಜಕೀಯ ಚರ್ಚೆ ಮಾಡಿಲ್ಲ. ಪಕ್ಷದ ನೂತನ ಕಚೇರಿ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ದಿನಾಂಕ ನಿಗದಿಗೆ ಮನವಿ ಮಾಡಿರುವೆ " ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.
ಸಚಿವ ಸಂಪುಟ ಪುನಾರಚನೆ ಕುರಿತು ಸಿಎಂ ಅವರು ಖರ್ಗೆ ಅವರನ್ನು ಭೇಟಿ ಮಾಡಿದ್ದಾರೆ, ಭಾನುವಾರ ನೀವು ಭೇಟಿ ಮಾಡಿದ್ದೀರಿ, ಈ ಬಗ್ಗೆ ಚರ್ಚೆ ಮಾಡಿದ್ದೀರಾ ಎಂದು ಕೇಳಿದಾಗ, "ನಾನು ದೆಹಲಿಗೆ ಹೋದಾಗೆಲ್ಲಾ ನಮ್ಮ ನಾಯಕರನ್ನು ಭೇಟಿ ಮಾಡುತ್ತೇನೆ. ಆದರೆ ನಾನು ರಾಜಕೀಯ ವಿಚಾರವಾಗಿ ಅವರನ್ನು ಭೇಟಿ ಮಾಡಿಲ್ಲ. ಈ ವಿಚಾರ ಚರ್ಚಿಸಿಲ್ಲ. ನಾನು ಡಿಸಿಎಂ ಮಾತ್ರವಲ್ಲ, ಪಕ್ಷದ ಅಧ್ಯಕ್ಷನೂ ಆಗಿದ್ದೇನೆ. ಇಷ್ಟು ದಿನ ಅವರು ಬಿಹಾರ ಚುನಾವಣೆಯಲ್ಲಿ ನಿರತರಾಗಿದ್ದರು. ಹೀಗಾಗಿ ನಾನು ಅವರಿಗೆ ತೊಂದರೆ ನೀಡಿರಲಿಲ್ಲ. ಡಿ. 1ರಿಂದ ಸಂಸತ್ ಅಧಿವೇಶನ ನಡೆಯಲಿದೆ. ಹೀಗಾಗಿ ಈ ಬಗ್ಗೆ ಚರ್ಚೆ ಮಾಡಿದೆ" ಎಂದರು.
*ಮೇಕೆದಾಟು ಯೋಜನೆ ಜಾರಿಗೆ ತಡ ಮಾಡುವುದಿಲ್ಲ*
ನಿಮ್ಮ ದೆಹಲಿ ಭೇಟಿ ವೇಳೆ ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿದ್ದು, ಫಲಪ್ರದವಾಯಿತೇ ಎಂದು ಕೇಳಿದ್ದಕ್ಕೆ, "ನಾನು ಯಾವುದೇ ವರಿಷ್ಠ ನಾಯಕರನ್ನು ಭೇಟಿ ಮಾಡಿಲ್ಲ. ಮೇಕೆದಾಟು ಯೋಜನೆ ಪರ ನ್ಯಾಯಾಲಯದಲ್ಲಿ ನಮ್ಮ ಪರವಾಗಿ ವಾದ ಮಂಡಿಸಿದ ವಕೀಲರಿಗೆ ಅಭಿನಂದನೆ ಸಲ್ಲಿಸಿದ್ದೇನೆ. ನ್ಯಾಯಾಲಯ ನಮಗೆ ನಮ್ಮ ಯೋಜನೆ ಮುಂದುವರಿಸಲು, ತಮಿಳುನಾಡಿಗೆ ಅದರ ಪಾಲಿನ ನೀರನ್ನು ಪಡೆಯಲು ಹಾಗೂ ಕೇಂದ್ರ ಜಲ ಆಯೋಗಕ್ಕೆ ಯೋಜನೆಗೆ ಅನುಮತಿ ನೀಡುವ ಅಧಿಕಾರವನ್ನು ನೀಡಿ ಆದೇಶ ನೀಡಿದೆ. ಇದಕ್ಕೆ ಕಾಲಮಿತಿ ಇದ್ದು, ಈ ಕಾರಣಕ್ಕೆ ಸೋಮವಾರ ಬೆಳಗ್ಗೆ ವಕೀಲರಾದ ಶ್ಯಾಮ್ ದಿವಾನ್ ಅವರನ್ನು ಭೇಟಿ ಮಾಡಿದೆ. ಅವರ ಜತೆ ಕೃಷ್ಣಾ ಹಾಗೂ ಮಹದಾಯಿ ಯೋಜನೆ ವಿಚಾರವಾಗಿ ಚರ್ಚೆ ಮಾಡಿದೆ. ನಾಳೆ ಕಾವೇರಿ ನೀರವರಿ ನಿಗಮದ (ಸಿಎನ್ಎನ್ಎಲ್) ಸಭೆ ಇದೆ. ಈ ಸಭೆಯಲ್ಲಿ ಯಾವ ರೀತಿ ಈ ಯೋಜನೆ ಪ್ರಸ್ತಾವನೆ ಮಾಡಬೇಕು ಎಂದು ಚರ್ಚೆ ಮಾಡಲಾಗುವುದು. ಈ ವಿಚಾರದಲ್ಲಿ ಇನ್ನು ಸಮಯ ವ್ಯರ್ಥ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಸಿಎಂ ಕೂಡ ಪ್ರಧಾನಿ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ" ಎಂದು ತಿಳಿಸಿದರು.
"ಈ ಯೋಜನೆಗಾಗಿ 'ನಮ್ಮ ನೀರು ನಮ್ಮ ಹಕ್ಕು' ಎಂದು ನೂರಾರು ಕಿ.ಮೀ. ಹೆಜ್ಜೆ ಹಾಕಿದ್ದು, ಅನೇಕ ಪ್ರಕರಣಗಳು ನಮ್ಮ ವಿರುದ್ಧ ದಾಖಲಾಗಿವೆ. ಮಂಡ್ಯ, ಮೈಸೂರು, ತುಮಕೂರು, ಚಾಮರಾಜನಗರ, ಬೆಂಗಳೂರಿನ ಜನರಿಗೆ ಕುಡಿಯುವ ನೀರು ಒದಗಿಸಲಾಗುವುದು. ಕೈಗಾರಿಕೆಗಳಿಗೂ ನೀರು ಒದಗಿಸಲಾಗುವುದು. ಇದಕ್ಕಾಗಿ ಶ್ರಮಿಸುತ್ತಿದ್ದೇನೆ. ನನ್ನ ಶ್ರಮಕ್ಕೆ ಈಗ ಫಲ ಸಿಗುತ್ತಿದೆ. ಈ ಯೋಜನೆ ಜಾರಿಗೆ ಏನೆಲ್ಲಾ ಮಾಡಬೇಕು ಎಂದು ವಕೀಲರು, ಕಾನೂನು ತಜ್ಞರ ಜತೆ ಚರ್ಚೆ ಮಾಡಿರುವೆ. ಕಪಿಲ್ ಸಿಬಲ್ ಅವರ ಕಾರ್ಯಕ್ರಮದ ವೇಳೆ ಅನೇಕ ನಿವೃತ್ತ ನ್ಯಾಯಾಧೀಶರನ್ನು ಭೇಟಿ ಮಾಡಿ ಚರ್ಚೆ ನಡೆಸಿರುವೆ" ಎಂದು ತಿಳಿಸಿದರು.
ಕೆಲವು ಶಾಸಕರು ಸಚಿವರಾಗಲು ಪ್ರಯತ್ನಿಸುತ್ತಿದ್ದಾರೆ ಎಂದು ಕೇಳಿದಾಗ, "ಅದರಲ್ಲಿ ತಪ್ಪೇನಿದೆ? ಶಾಸಕರು, ವಿಧಾನ ಪರಿಷತ್ ಸದಸ್ಯರಾದವರಿಗೆ ಸಚಿವರಾಗುವ ಹಕ್ಕಿದೆ. ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಧಿಕಾರ ಸಿಎಂ ಅವರಿಗೆ ಇದೆ. ಅವರು ತಮ್ಮದೇ ಆದ ರೀತಿ ಪಕ್ಷಕ್ಕೆ ತ್ಯಾಗ ಮಾಡಿ, ದುಡಿದಿರುತ್ತಾರೆ. ಹೀಗಾಗಿ ಅವರು ಅಧಿಕಾರಕ್ಕೆ ಆಸೆ ಪಡುತ್ತಾರೆ. ಅದನ್ನು ನಾವು ತಪ್ಪು ಎಂದು ಹೇಳಲು ಸಾಧ್ಯವೇ?
ಸಚಿವ ಸಂಪುಟ ಪುನಾರಚನೆ ಆಗುತ್ತದೆಯೋ ಅಥವಾ ನಾಯಕತ್ವ ಬದಲಾವಣೆ ಆಗುತ್ತದೆಯೋ ಎಂದು ಕೇಳಿದಾಗ, "ಯಾರಾದರೂ ಗಿಣಿ ಶಾಸ್ತ್ರ ಹೇಳುವವರ ಬಳಿ ಕೇಳಿ" ಎಂದರು.








