ಆಡಳಿತ ನಡೆಸಲು ಸಾಧ್ಯವಿಲ್ಲವೆಂದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ- ವಿಜಯೇಂದ್ರ

Banglore:

Font size:

ಆಡಳಿತ ನಡೆಸಲು ಸಾಧ್ಯವಿಲ್ಲವೆಂದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ- ವಿಜಯೇಂದ್ರ

ಬೆಂಗಳೂರು: ಕಾಂಗ್ರೆಸ್ಸಿನ 140 ಶಾಸಕರಿದ್ದೂ ಆಡಳಿತ ನಡೆಸಲು ಸಾಧ್ಯವಿಲ್ಲವೆಂದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆಗೆ ಹೋಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಸವಾಲೆಸೆದಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬೆಳಗಾವಿಗೆ ಬಂದು ಸುಮ್ಮನೇ ಕಾಟಾಚಾರಕ್ಕೆ ಅಧಿವೇಶನ ಮಾಡದಿರಿ ಎಂದು ಎಚ್ಚರಿಸಿದರು. ರೈತರು ಚಳಿಗಾಲದ ಅಧಿವೇಶನವನ್ನು ಕಾತರದಿಂದ ಕಾಯುತ್ತಿದ್ದಾರೆ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆ ಜೋಳ, ಭತ್ತ ಬೆಳೆಯುವ ರೈತರಿಗೆ ಸರಕಾರವು ಪರಿಹಾರ ಕೊಡುವುದಾಗಿ ರೈತರು ಕಾಯುತ್ತಿದ್ದಾರೆ ಎಂದು ಗಮನ ಸೆಳೆದರು. ಅಡಿಕೆ ಬೆಳೆಗಾರರೂ ಸಂಕಷ್ಟದಲ್ಲಿದ್ದು, ಇದ್ಯಾವುದಕ್ಕೂ ಪರಿಹಾರ ನೀಡುವ ಲಕ್ಷಣ ಕಾಣುತ್ತಿಲ್ಲ ಎಂದು ಆಕ್ಷೇಪಿಸಿದರು.
ಆಡಳಿತ ನಡೆಸಲು ಸಾಧ್ಯವಿದ್ದರೆ ನಡೆಸಿ; ಇದೇರೀತಿ ಕಿತ್ತಾಟ ಮಾಡಿಕೊಂಡು ದೆಹಲಿಯಲ್ಲಿ ನಾಲ್ಕು ದಿನ, ಬೆಂಗಳೂರಿನಲ್ಲಿ 3 ದಿನ ಇರುವುದಾದರೆ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಆಗ್ರಹಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಇವರು ಬೀದಿಗಿಳಿದು ಬಡಿಗೆ ತೆಗೆದುಕೊಂಡು ಹೊಡೆದಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅವರು ಹೊಡೆದಾಡಿಕೊಂಡರೆ ನಾವೇನು ಮಾಡಬೇಕೆಂದು ಯೋಚಿಸುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ಸಿನ ಒಳಗಿನ ಬಡಿದಾಟದಿಂದ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದರ ನಡುವೆ ಕಬ್ಬು ಬೆಳೆಗಾರರು, ತೊಗರಿ, ಹುರುಳಿ ಬೆಳೆಗಾರರು ಸೇರಿ ರೈತರು ಸಂಕಷ್ಟದಲ್ಲಿದ್ದಾರೆ. ಮೆಕ್ಕೆಜೋಳ, ಭತ್ತ ಬೆಳೆಯುವ ರೈತರು ಖರೀದಿ ಕೇಂದ್ರ ಪ್ರಾರಂಭಿಸಲು ಬೊಬ್ಬೆ ಹೊಡೆಯುತ್ತಿದ್ದಾರೆ ಎಂದು ವಿವರಿಸಿದರು. ಪಾಪ; ಮುಖ್ಯಮಂತ್ರಿಗಳಿಗೆ ಸಮಸ್ಯೆಗಳನ್ನು ಪರಿಹರಿಸಲು ಸಮಯ ಸಿಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಮೆಕ್ಕೆಜೋಳದ ಸಂಬಂಧ ಮುಖ್ಯಮಂತ್ರಿಗಳು ಕಳೆದ ವಾರ ಸಭೆ ಕರೆದಾಗ ಕೃಷಿ ಸಚಿವರು ದೆಹಲಿಯಲ್ಲಿದ್ದರು. ರಾಜ್ಯದ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೇ ಅವರ ಸಮಸ್ಯೆಗಳಿಗೆ ಪರಿಹಾರ ಕೊಡದೇ ಗೊಂದಲವನ್ನು ಆಡಳಿತ ಪಕ್ಷದ ಸದಸ್ಯರೇ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.

ಬಾಹ್ಯ ಬೆಂಬಲದ ಪ್ರಶ್ನೆ ಇಲ್ಲ..
ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಲ್ಲಿ ನಮಗೆ ಆಸಕ್ತಿ ಇಲ್ಲ; ಸರಕಾರದಲ್ಲಿ ಡಿ.ಕೆ.ಶಿವಕುಮಾರ್ ಆಗಲೀ, ಮತ್ಯಾರಾದರೂ ಹೊರಗೆ ಬಂದರೆ ಅವರಿಗೆ ಬಾಹ್ಯ ಬೆಂಬಲ ಕೊಡುವುದಾಗಲೀ; ಅಥವಾ ಬೆಂಬಲ ಪಡೆಯುವುದಾಗಲೀ ಪ್ರಶ್ನೆ ಉದ್ಭವವಾಗುವುದಿಲ್ಲ. ಮತದಾರರು ನಮ್ಮನ್ನು ವಿಪಕ್ಷವಾಗಿ ಕೂರಿಸಿದ್ದಾರೆ. ವಿಪಕ್ಷವಾಗಿ ಜವಾಬ್ದಾರಿಯುತ ಕೆಲಸವನ್ನು ನಾವು ಮಾಡುತ್ತಿದ್ದೇವೆ. ಅದರ ಬಗ್ಗೆ ಚರ್ಚೆ ಮಾಡುವ ಪ್ರಶ್ನೆ ಇಲ್ಲ ಎಂದರು.

Prev Post ಕರ್ನಾಟಕದ 9 ಜಿಲ್ಲೆ ಒಳಗೊಂಡ ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ (NICDP) ಕೇಂದ್ರದ ಒಲವು
Next Post 2028 ರಲ್ಲಿ ಮರಳಿ ಪಕ್ಷ ಅಧಿಕಾರಕ್ಕೆ ತರುವ ಕಾರ್ಯತಂತ್ರದ ಬಗ್ಗೆ ಸತೀಶ್ ಜಾರಕಿಹೊಳಿ ಅವರ ಜತೆ ಚರ್ಚೆ: ಡಿಸಿಎಂ ಡಿ.ಕೆ. ಶಿವಕುಮಾರ್