ಡಿಕೆಶಿ ಬ್ರದರ್ ಯಾರು?: ಛಲವಾದಿ ನಾರಾಯಣಸ್ವಾಮಿ
ಬೆಂಗಳೂರು: ಯಾರು ತನ್ನ ಬ್ರದರ್ ಎಂಬುದನ್ನು ಡಿ.ಕೆ.ಶಿವಕುಮಾರ್ ಅವರು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಒತ್ತಾಯಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಶಿವಕುಮಾರ್ ಅವರು ಮಾಧ್ಯಮಗಳ ಪ್ರತಿನಿಧಿಗಳನ್ನು ಬ್ರದರ್ಸ್ ಎನ್ನುತ್ತಾರೆ. ಕುಕ್ಕರ್ ಬಾಂಬ್ ಇಟ್ಟವರನ್ನೂ ಬ್ರದರ್ ಎಂದಿದ್ದರು. ಬೆಂಗಳೂರಿನಲ್ಲಿ ಬಾಂಬ್ ಇಟ್ಟವರನ್ನೂ ನನ್ನ ಬ್ರದರ್ ಎಂದಿದ್ದರು. ಯಾವುದೋ ಲಿಸ್ಟ್ ಹೋದಾಗ ಕೆಲವರನ್ನು ನನ್ನ ಬ್ರದರ್ ಎಂದು ಹೇಳಿದ್ದರು. ಇದೀಗ ಮುಖ್ಯಮಂತ್ರಿಗಳನ್ನೂ ನನ್ನ ಬ್ರದರ್ ಎಂದಿದ್ದಾರೆ ಎಂದು ಟೀಕಿಸಿದರು.
ನನಗೆ ತಿಳಿದಂತೆ ಡಿ.ಕೆ.ಸುರೇಶ್ ಅವರು ನಿಜವಾಗಿಯೂ ಅವರ ಬ್ರದರ್ ಎಂದು ನುಡಿದರು. ಕುಲಗೆಟ್ಟ ಸಂಬಂಧ ಬ್ರೇಕ್ ಫಾಸ್ಟಿನಲ್ಲಿ ಸರಿಯಾಗುತ್ತದೆ ಎಂಬುದು ಕೇವಲ ಸಿನಿಮಾ ನೋಡುವಾಗ ವಿರಾಮವಷ್ಟೇ ಎಂದು ವಿಶ್ಲೇಷಿಸಿದರು. ನಿಜವಾಗಿಯೂ ಇದು ಬೃಹನ್ನಾಟಕ. ಇದರಿಂದ ಏನೂ ಪ್ರಯೋಜನ ಆಗದು; ಜನರಿಗೆ ಇವರ ನಾಟಕ ಬೇಕಾಗಿಲ್ಲ. ಅಭಿವೃದ್ಧಿ ಬೇಕಾಗಿದೆ; ಜನರ ಸಮಸ್ಯೆಗಳಿಗೆ ಪರಿಹಾರ ಬೇಕಾಗಿದೆ ಎಂದು ತಿಳಿಸಿದರು.
ಶಿವಕುಮಾರ್ ಅವರು, ನಾನು- ಮುಖ್ಯಮಂತ್ರಿಗಳು ಅಣ್ಣ ತಮ್ಮಂದಿರ ಥರ ಎಂದಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್ ಅವರ ತಾಯಿ ಒಂದು ಮಾತು ಹೇಳಿದ್ದಾರೆ. ಡಿ.ಕೆ.ಶಿವಕುಮಾರ್ ಮನೆಗೆ ಹೋಗಿದ್ದಾಗ ಅವರ ತಾಯಿ ಏನು ಹೇಳಿದ್ದರೆಂದು ಮುಖ್ಯಮಂತ್ರಿಗಳಿಗೆ ಆ ವಿಡಿಯೋ ತೋರಿಸಲಿ ಎಂದು ಹೇಳಿದರು.
ಹೈಕಮಾಂಡ್ ಬದುಕಿದ್ದರೆ ಇಲ್ಲಿನ ಕಾಂಗ್ರೆಸ್ ಸಮಸ್ಯೆಗೆ ಈಗಾಗಲೇ ಪರಿಹಾರ ಸಿಗಬೇಕಿತ್ತು. ಹೈಕಮಾಂಡ್ ಸತ್ತುಹೋಗಿದೆ ಎಂದು ಅವರು ತಿಳಿಸಿದರು. ಕಾಂಗ್ರೆಸ್ ಈ ದೇಶದಿಂದ ಕಣ್ಮರೆಯಾಗುವ ದಿನಗಳು ಬಂದಿವೆ ಎಂದು ಹೇಳಿದರು. ಇದೇ ಕಾರಣದಿಂದ ಕಾಂಗ್ರೆಸ್ ಒಂದು ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಪಕ್ಷವು ರಾಹುಲ್‍ನಂಥ ಒಬ್ಬ ವಿವೇಕರಹಿತ ನಾಯಕನನ್ನು ಇಟ್ಟುಕೊಂಡು ದೇಶ ಆಳಲು ಸಾಧ್ಯವೇ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಪಕ್ಷ ಇನ್ನು ಎರಡ್ಮೂರು ವರ್ಷಗಳಲ್ಲಿ ದೇಶದಲ್ಲಿ ಹುಡುಕಿದರೂ ಸಿಗಲಾರದು ಎಂದು ನುಡಿದರು.








