ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂಬುದೇ ನಮ್ಮ ಸರ್ಕಾರದ ಉದ್ದೇಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌

BANGALORE:

Font size:

* ಮಹಿಳಾ ನೌಕರರ ಸಮ್ಮೇಳನದಲ್ಲಿ ಸಚಿವರ ಹೇಳಿಕೆ * ಕಾಂಗ್ರೆಸ್‌ ಸರ್ಕಾರದಿಂದ ಮಾತ್ರ ಮಹಿಳಾ ಪರ ಯೋಜನೆಗಳು ಜಾರಿ ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ

ಬೆಂಗಳೂರು ,ನ,೪-ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು, ಸ್ವಚ್ಛಂದವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂಬುದೇ ನಮ್ಮ ಸರ್ಕಾರದ ಹಾಗೂ ನನ್ನ ಉದ್ದೇಶ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕರ್ನಾಟಕ ರಾಜ್ಯ ಸರ್ಕಾರ ಮಹಿಳಾ ನೌಕರರಿಗೆ ಋತುಚಕ್ರ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಸದಸ್ಯರಿಗೆ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭ ಹಾಗೂ ಮಹಿಳಾ ನೌಕರರ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಮಹಿಳೆಯರಿಗೆ ಇರುವುದು ಒಂದೇ ಜಾತಿ, ಮಹಿಳೆಯರಿಗೆ ಬೇರೆ ಜಾತಿ ಇಲ್ಲ, ಪಕ್ಷ ಇಲ್ಲ. ಮಹಿಳೆಯರ ಬಗ್ಗೆ ನನಗೆ ಹೆಮ್ಮೆ ಇದೆ ಎಂದರು.

ನಮ್ಮ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಮಹಿಳೆಯರ ಪರ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಸಿದ್ದರಾಮಯ್ಯನವರ ಸರ್ಕಾರ ಮಹಿಳಾ ನೌಕರರಿಗೆ ಹಾಗೂ ಸಾಮಾನ್ಯ ಮಹಿಳೆಯರಿಗೆ ಸಾಕಷ್ಟು ಯೋಜನೆಗಳನ್ನು ತಂದಿದೆ ಎಂದು ಸಚಿವರು ಹೇಳಿದರು.

ಒಂದು ಕಾಲದಲ್ಲಿ ಸತಿ ಸಹಗಮನ ಪದ್ದತಿ ಇತ್ತು. ಹಿಂದೆ ಗಂಡ ತೀರಿಕೊಂಡ ಮೇಲೆ ಹೆಣ್ಣು ತಲೆ ಬೋಳಿಸಿಕೊಳ್ಳಬೇಕಿತ್ತು. ಈಗ ಪರಿಸ್ಥಿತಿ ಬದಲಾಗಿದೆ. ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರ ಜೀವನದಲ್ಲಿ ಸಾಕಷ್ಟು ಬದಲಾಗಿದೆ. ಮಹಿಳೆಯರು ಸ್ವಂತ ಶಕ್ತಿಯ ಮೇಲೆ ನೌಕರಿ ಗಿಟ್ಟಿಕೊಂಡು ಮಾದರಿಯಾಗುತ್ತಿದ್ದಾರೆ ಎಂದರು.

ಸರ್ಕಾರದ ಪ್ರತಿನಿಧಿಗಳಾಗಿ ನಾವು ಮೂರನೇ ಮಹಡಿಯಲ್ಲಿ ಯೋಜನೆಗಳನ್ನು ರೂಪಿಸಿದರೂ ಅದನ್ನು ಕಾರ್ಯರೂಪಕ್ಕೆ ತರುವುದು ಸರ್ಕಾರಿ ನೌಕರರು. ಸರ್ಕಾರದ ಯೋಜನೆಗಳ ಯಶಸ್ಸಿನಲ್ಲಿ ನೌಕರರ ಪಾತ್ರ ದೊಡ್ಡದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಹೇಳಿದರು.

ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಪೈಕಿ ಮಹಿಳಾ ಸಬಲೀಕರಣಕ್ಕಾಗಿ ಮೂರು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮಹಿಳೆಯರ ಸುರಕ್ಷತೆಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗೃಹ ಇಲಾಖೆ ಸಹಯೋಗದಲ್ಲಿ ಅಕ್ಕ ಪಡೆಯನ್ನು ಜಾರಿಗೊಳಿಸಲಾಗಿದೆ. 31 ಜಿಲ್ಲೆಗಳಲ್ಲಿ ಅಕ್ಕ ಪಡೆ ಚಾಲ್ತಿಗೆ ಬರಲಿದೆ. ಇದರ ಬಗ್ಗೆ ಮಹಿಳಾ ನೌಕರರ ಜತೆಗೂಡಿ ಅರಿವು ಮೂಡಿಸುವ ಕೆಲಸ ಮಾಡಲಾಗುವುದು ಎಂದರು.

ನಮ್ಮ ಇಲಾಖೆಯ ಕಚೇರಿಯಲ್ಲಿ ಮಹಿಳಾ ನೌಕರರ ಸಂಘದ ಕಚೇರಿಗೆ ಜಾಗ ನೀಡಲಾಗುವುದು, ಈ ಕುರಿತು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಜೊತೆ ಮಾತನಾಡಲಾಗುವುದು ಎಂದರು.

ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ.ಪಾಟೀಲ್, ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಪುಟ್ಟಣ್ಣ, ಆರತಿ ಕೃಷ್ಣ, ಬಿಲ್ಕಿಶ್ ಭಾನು, ಕಾನೂನು ಆಯೋಗದ ‌ಆಧ್ಯಕ್ಷರಾದ ಅಶೋಕ್ ಹಿಂಚಗೇರಿ, ಮಹಿಳಾ ಆಯೋಗದ ಅಧ್ಯಕ್ಷರಾದ ನಾಗಲಕ್ಷ್ಮೀ ಚೌಧರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಸೌಮ್ಯಾ ರೆಡ್ಡಿ, ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ರೋಶಿನಿ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು, ಮಹಿಳಾ ನೌಕರರು ಉಪಸ್ಥಿತರಿದ್ದರು.

0000

ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ: ಡಿಸಿಎಂ ಡಿ.ಕೆ. ಶಿವಕುಮಾರ್ ಸಲಹೆ

ಮಹಿಳೆಯರು ಕರುಣೆಯ ಕಡಲು, ಮಮತೆಯ ಮುಗಿಲು

ನಾಯಕತ್ವ ಗುಣ ಬೆಳೆಸಿಕೊಂಡು ನಾಯಕಿಯರಾಗಿ ಬೆಳೆಯಿರಿ

ಬೆಂಗಳೂರು, ಡಿ.04:

“ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಆರದ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ ಸಂಘವಾಗಿರಬೇಕು. ಇದು ನಾನು ನಿಮಗೆ ನೀಡುತ್ತಿರುವ ಸಲಹೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಸರ್ಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು.

“ನಾನು ಬಂಗಾರಪ್ಪನವರ ಸರ್ಕಾರದಲ್ಲಿ ಸಚಿವನಾಗಿದ್ದಾಗಿನಿಂದ. ಅಂದರೆ 40 ವರ್ಷಗಳಿಂದ ಈ ಸಂಘವನ್ನು ಗಮನಿಸಿಕೊಂಡು ಬಂದಿದ್ದೇನೆ. ನಿಮ್ಮ ಒಗ್ಗಟ್ಟು ಬಿಡಬೇಡಿ. ಲಿಂಗಾಯತರ, ಹಿಂದುಳಿದ ವರ್ಗಗಳ, ಒಕ್ಕಲಿಗರ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಂಘ ಎಂದು ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ. ಈ ಆಲೋಚನೆಯನ್ನು ನಿಮ್ಮ ತಲೆಯಿಂದ ತೆಗೆದುಹಾಕಿ” ಎಂದು ಕಿವಿಮಾತು ಹೇಳಿದರು.

ಮಹಿಳೆಯರು ಕರುಣೆಯ ಕಡಲು, ಮಮತೆಯ ಮುಗಿಲು

“ಸಂಘಟನೆ ಬಹಳ ಮುಖ್ಯ. ಶಿಕ್ಷಣ ಇಲಾಖೆಯಲ್ಲಿ 50%ಗೂ ಹೆಚ್ಚು ಜನ ಇದ್ದೀರಿ. ಮಹಿಳೆಯರು ಕರುಣೆಯ ಕಡಲು, ಮಮತೆಯ ಮುಗಿಲು. ನಾನಾಗಲಿ, ಸಿದ್ದರಾಮಯ್ಯ ಅವರಾಗಲಿ, ಯಾವುದೇ ವ್ಯಕ್ತಿಯಾಗಲಿ ಮಹಿಳೆಯರ ಕೊಡುಗೆ ಇಲ್ಲದೆ ಯಾವುದೇ ಪುರುಷ ಯಶಸ್ವಿಯಾಗಲಾರ. ನಾವೆಲ್ಲರೂ ರಾಜಕಾರಣ ಮಾಡಿಕೊಂಡು ಮನೆಗೆ ಸಮಯ ನೀಡುವುದಿಲ್ಲ. ನಮ್ಮ ಮನೆ ನಡೆಸಿ ನಿಭಾಯಿಸುತ್ತಿರುವವರು ಮಹಿಳೆಯರು. ನನಗೂ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ನನಗಿಂತ ಹೆಚ್ಚು ದಕ್ಷತೆಯಿಂದ ಕೆಲಸ ಮಾಡುತ್ತಾರೆ. ಅವರು ಈಗ ಮಾಡಿರುವ ಸಾಧನೆ ನಾನು ಆ ವಯಸ್ಸಿನಲ್ಲಿ ಮಾಡಿರಲಿಲ್ಲ” ಎಂದು ಬಣ್ಣಿಸಿದರು.

“ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮರ್ಥರಿದ್ದೀರಿ. ಡಿಜಿಯಾಗಿ, ಸರ್ಕಾರ ಮುಖ್ಯ ಕಾರ್ಯದರ್ಶಿಯಾಗಿ ಆಡಳಿತದಲ್ಲಿ ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ನೀವು ಯಾರಿಗೂ ಕಮ್ಮಿ ಇಲ್ಲ ಎಂದು ಸಾಬೀತುಪಡಿಸಿದ್ದೀರಿ. ನೀವುಗಳು ದೂರಿನ ಪೆಟ್ಟಿಗೆಯಂತೆ ಆಗಬಾರದು. ನಿಮ್ಮ ಹಕ್ಕನ್ನು ಚಲಾಯಿಸಬೇಕು. ಹೆಣ್ಣು ಕುಟುಂಬದ ಕಣ್ಣು ಎಂದು ನಾವು ನಂಬಿದ್ದೇವೆ. ನಾವು ಎಲ್ಲೇ ಹೋದರು, ಗ್ರಾಮ ದೇವತೆ ಯಾವುದು ಎಂದು ಕೇಳುತ್ತೇವೆ. ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ. ಭೂಮಿಯನ್ನು ಭೂತಾಯಿ ಎಂದು ಕರೆಯುತ್ತೇವೆ. ನಾಡ ದೇವತೆ ಚಾಮುಂಡೇಶ್ವರಿ ಎಂದು ಪರಿಗಣಿಸಿದ್ದೇವೆ. ಹೀಗೆ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ” ಎಂದು ತಿಳಿಸಿದರು.

ನಾಯಕತ್ವ ಗುಣ ಬೆಳೆಸಿಕೊಂಡು ನಾಯಕಿಯರಾಗಿ

"ನೀವು ನಾಯಕತ್ವ ಗುಣ ಬೆಳೆಸಿಕೊಂಡು ನಾಯಕಿಯರಾಗಬೇಕು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಕಾಂಗ್ರೆಸ್. ಪಂಚಾಯ್ತಿಯಲ್ಲಿ ನಾವು 50% ಮೀಸಲಾತಿ ನೀಡಿದ್ದು, ಸಂಸತ್ ಚುನಾವಣೆಯಲ್ಲಿ 33% ಜಾರಿಯಾಗುವ ಹಂತದಲ್ಲಿದೆ. ಇದರಿಂದ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 70 ಕ್ಷೇತ್ರಗಳಲ್ಲಿ ಮಹಿಳಾ ಶಾಸಕಿಯರು ಆಯ್ಕೆಯಾಗಲಿದ್ದಾರೆ. ನಾಯಕತ್ವ ಗುಣ ಇರುವ ಸರ್ಕಾರಿ ಮಹಿಳಾ ನೌಕರರಿಗೆ ನಾವು ಟಿಕೆಟ್ ನೀಡಿ ಗೆಲ್ಲಿಸಿದ್ದೇವೆ. ಹಲವರು ಶಾಸಕಿಯರಾಗಿದ್ದಾರೆ. ಮೀಸಲಾತಿ ಬಂದ ನಂತರ ಯಾರು ನಾಯಕಿಯರಾಗುತ್ತೀರೋ ಗೊತ್ತಿಲ್ಲ” ಎಂದು ಹೇಳಿದರು.

ನಿಮ್ಮ ಬೇಡಿಕೆಯಂತೆ ಸಂಘಕ್ಕೆ ಅಗತ್ಯವಾದ ಭೂಮಿ ನೀಡಲಾಗುವುದು

“ಮಹಿಳಾ ನೌಕಕರ ಸಂಘಕ್ಕೆ ಜಾಗದ ಮನವಿ ಬಗ್ಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಿಎಂ ಹಾಗೂ ನನ್ನ ಬಳಿ ಪ್ರಸ್ತಾಪ ಮಾಡಿದರು. ಸಿಎಂ ಅವರು ಜಾಗ ನೀಡಿ ಎಂದು ಮುಕ್ತವಾಗಿ ಹೇಳಿದ್ದಾರೆ. ನಿಮಗೆ ಅಗತ್ಯವಾಗಿರುವ ಜಾಗವನ್ನು ನೀಡುತ್ತೇವೆ. ಹೆಣ್ಣು ಮಗು ಕಲಿತರೆ ಒಂದು ಕುಟುಂಬ ಹಾಗೂ ಸಮಾಜವೇ ಕಲಿತಂತೆ ಎಂದು ನೆಹರೂ ಅವರು ನಮಗೆ ಸಂದೇಶ ನೀಡಿದ್ದಾರೆ. ಮಹಿಳೆಯರು ಸಹಕಾರ ನೀಡದಿದ್ದರೆ ನಮಗೆ ರಾಜಕಾರಣ ಮಾಡಲು ಸಾಧ್ಯವಾಗುವುದಿಲ್ಲ” ಎಂದು ತಿಳಿಸಿದರು.

“ಮುಂದಿನ ಒಂದು ವರ್ಷದಲ್ಲಿ ಅರಮನೆ ಮೈದಾನದಲ್ಲಿ ದೊಡ್ಡ ಮಟ್ಟದ ಮಹಿಳಾ ಸಮಾವೇಶವನ್ನು ಮಾಡಲು ನೀವು ರೂಪುರೇಷೆ ಸಿದ್ಧಮಾಡಿಕೊಳ್ಳಿ. ಅದಕ್ಕೆ ಸರ್ಕಾರದಿಂದ ಆರ್ಥಿಕ ನೆರವು ನೀಡಲಾಗುವುದು. ಈ ಬಾರಿಯ ಚಳಿಗಾಲದ ಅಧಿವೇಶನದಲ್ಲೇ ಕಾನೂನು ತಿದ್ದುಪಡಿ ತಂದು ಮಹಿಳೆಯರಿಗೆ ಶಕ್ತಿ ತುಂಬಬೇಕು ಎಂದು ಹೆಚ್.ಕೆ ಪಾಟೀಲ್ ಅವರು ನನ್ನ ಬಳಿ ಹೇಳಿದ್ದಾರೆ” ಎಂದು ತಿಳಿಸಿದರು.

ಮಹಿಳೆಯರಿಗೆ ಉಪಕಾರ ಸ್ಮರಣೆ ಇದೆ ಎಂದು ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ

“ನಾನು ಹಾಗೂ ಸಿದ್ದರಾಮಯ್ಯ ಅವರು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲು ಜಾರಿಗೆ ತಂದಿದ್ದೆ, ಮಹಿಳೆಯರಿಗಾಗಿ ಘೋಷಣೆಯಾದ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ ಯೋಜನೆಗಳನ್ನು ಸರ್ಕಾರಿ ನೌಕರರಾದರೂ ನಿಮಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆಯಲ್ಲವೇ? ಸರ್ಕಾರಿ ಮಹಿಳಾ ನೌಕರರು ಶಕ್ತಿ ಯೋಜನೆ ಮೂಲಕ ಉಚಿತ ಪ್ರಯಾಣ ಮಾಡಬಹುದಲ್ಲವೇ? ಬಡ ಮಹಿಳೆಯರಿಗೆ 2 ಸಾವಿರ ನೀಡುತ್ತಿದ್ದೇವೆ ಅಲ್ಲವೇ? ನಮ್ಮ ಯೋಜನೆ ನೋಡಿ ಇಡೀ ದೇಶದಲ್ಲಿ ಈ ಯೋಜನೆ ಜಾರಿ ಮಾಡುತ್ತಿದ್ದಾರಲ್ಲವೇ? ಹೀಗಾಗಿ ಮಹಿಳಾ ಸಬಲೀಕರಣ ವಿಚಾರದಲ್ಲಿ ನಾವು ಭದ್ರ ಅಡಿಪಾಯ ಹಾಕಿದ್ದೇವೆ. ಮಹಿಳೆಯರ ಪರವಾಗಿ ಚಿಂತನೆ ಮಾಡಿರುವ ಸರ್ಕಾರ ಇದ್ದರೆ ಅದು ನಮ್ಮ ಸರ್ಕಾರ ಮಾತ್ರ. ಮಹಿಳೆಯರು ಉಪಕಾರ ಸ್ಮರಣೆ ಇಟ್ಟುಕೊಂಡಿರುತ್ತಾರೆ. ತಾಯಿ ಹೃದಯದವರು, ಸಹಾಯ ಮಾಡಿದವರನ್ನು ಸ್ಮರಿಸುತ್ತೀರಿ ಎಂದು ನಾವು ಮಹಿಳೆಯರಿಗಾಗಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ” ಎಂದು ತಿಳಿಸಿದರು.

Prev Post ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಗುರುವಾರ ನಡೆದ ಮಹಿಳಾ ನೌಕರರ ಸಮ್ಮೇಳನದ ಉದ್ಘಾಟನೆ
Next Post 150 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸುವ ಉದ್ದೇಶ ಮೊಬೈಲ್, ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕೆಗೆ ವಿಷನ್ ಡಾಕ್ಯುಮೆಂಟ್: ಎಂ ಬಿ ಪಾಟೀಲ