150 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸುವ ಉದ್ದೇಶ ಮೊಬೈಲ್, ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕೆಗೆ ವಿಷನ್ ಡಾಕ್ಯುಮೆಂಟ್: ಎಂ ಬಿ ಪಾಟೀಲ

BANGALORE:

Font size:

150 ಬಿಲಿಯನ್ ಡಾಲರ್ ಹೂಡಿಕೆ ಆಕರ್ಷಿಸುವ ಉದ್ದೇಶ ಮೊಬೈಲ್, ಎಲೆಕ್ಟ್ರಾನಿಕ್ಸ್ ಬಿಡಿಭಾಗ ತಯಾರಿಕೆಗೆ ವಿಷನ್ ಡಾಕ್ಯುಮೆಂಟ್: ಎಂ ಬಿ ಪಾಟೀಲ

ಬೆಂಗಳೂರು:

ರಾಜ್ಯದಲ್ಲಿ ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ವಿನ್ಯಾಸ ಕ್ಷೇತ್ರದ ವಿಸ್ತರಣೆಯನ್ನು ಗುರಿಯಾಗಿ ಇಟ್ಟುಕೊಂಡು 150 ಬಿಲಿಯನ್ ಡಾಲರ್ ಹೂಡಿಕೆ ಸಾಧ್ಯವಾಗುವಂತೆ ವಿಷನ್ ಡಾಕ್ಯುಮೆಂಟ್ ತಯಾರಿಸುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಗುರುವಾರ ವಿಧಾನಸೌಧದ ಕಚೇರಿಯಲ್ಲಿ ತಮ್ಮನ್ನು ಭೇಟಿಯಾದ ಇಂಡಿಯನ್ ಸೆಲ್ಯುಲರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಅಧ್ಯಕ್ಷ ಪಂಕಜ್ ಮಹೀಂದ್ರೂ ನೇತೃತ್ವದ ಉನ್ನತ ಮಟ್ಟದ ನಿಯೋಗದ ಜತೆ ವಿಸ್ತೃತ ಮಾತುಕತೆ ನಡೆಸಿದರು.

ಬಳಿಕ ಮಾತನಾಡಿದ ಅವರು, ಕೇಂದ್ರ ಸರಕಾರದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಎಲೆಕ್ಟ್ರಾನಿಕ್ಸ್ ಬಿಡಿಭಾಗಗಳ ತಯಾರಿಕೆ ಯೋಜನೆಯನ್ನು ಘೋಷಿಸಿದೆ. ಇದಕ್ಕೆ ಸಮಾನಾಂತರವಾಗಿ ರಾಜ್ಯ ಸರಕಾರವು ಕೂಡ ಒಂದು ಯೋಜನೆಯನ್ನು ರೂಪಿಸಲು ಚಿಂತಿಸುತ್ತಿದ್ದು, ಇದರ ಕಾರ್ಯಸಾಧ್ಯತೆಯನ್ನು ಕುರಿತು ಅಧ್ಯಯನ ಮಾಡುತ್ತಿದೆ. ಇದು ಕರಡು ಹಂತದಲ್ಲಿದ್ದು, ಇದಕ್ಕೆ ಐಸಿಇಎ ನೀಡುವ ಸಲಹೆಗಳನ್ನು ಸ್ವಾಗತಿಸಲಾಗುವುದು’ ಎಂದಿದ್ದಾರೆ.

ಮೊಬೈಲ್ ಫೋನ್ ಬಿಡಿಭಾಗಗಳು ಮಾತ್ರವಲ್ಲದೆ ಕೈಗಾರಿಕಾ ಎಲೆಕ್ಟ್ರಾನಿಕ್ಸ್, ಕಾರ್ಯತಂತ್ರ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಕೂಡ ಅಪಾರ ಅವಕಾಶಗಳಿವೆ. ಅಧಿಕಾರಿಗಳಿಗೆ ಕೇಂದ್ರ ಸರಕಾರದ ಯೋಜನೆ ಮತ್ತು ಇತರ ರಾಜ್ಯಗಳಲ್ಲಿ ಇರುವ ಇಂತಹ ಯೋಜನೆಗಳ ಅಧ್ಯಯನ ಮಾಡುವಂತೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪಂಕಜ್ ಮಹೀಂದ್ರೂ ಮಾತನಾಡಿ, ಕೇಂದ್ರ ಸರಕಾರದ ಯೋಜನೆಯಡಿಯಲ್ಲಿ ಸಬ್-ಅಸೆಂಬ್ಲಿ (ಡಿಸ್-ಪ್ಲೇ, ಕ್ಯಾಮರಾ ಮಾಡ್ಯೂಲ್ಸ್), ಬೇರ್ ಕಾಂಪೊನೆಂಟ್ಸ್ ಮತ್ತು ತಯಾರಿಕೆಗೆ ಬೇಕಾಗುವ ಸಾಧನಗಳಿಗೆ ಒತ್ತು ಕೊಡಲಾಗಿದೆ. ಇದಲ್ಲದೆ ವಹಿವಾಟನ್ನು ಆಧರಿಸಿ ಪ್ರೋತ್ಸಾಹನಾ ಭತ್ಯೆಗಳು, ಶೇಕಡ 25ರಷ್ಟು ಬಂಡವಾಳ ಸಬ್ಸಿಡಿ ಬೆಂಬಲ ಕೊಡಲಾಗುವುದು. ಈ ಯೋಜನೆಗೆ ಕೇಂದ್ರ ಸರಕಾರವು 22,900 ಕೋಟಿ ರೂ. ವಿನಿಯೋಗಿಸುತ್ತಿದೆ ಎಂದಿದ್ದಾರೆ.

ಕೇಂದ್ರ ಸರಕಾರವು ಈ ವರ್ಷದ ನವೆಂಬರ್ ತನಕ 7,172 ಕೋಟಿ ರೂ. ಮೊತ್ತದ 17 ಹೂಡಿಕೆ ಯೋಜನೆಗಳಿಗೆ ಒಪ್ಪಿಗೆ ನೀಡಿದೆ. ಇದರಿಂದ 11,800 ನೇರ ಉದ್ಯೋಗಗಳು ಸೃಷ್ಟಿಯಾಗಲಿದ್ದು, 65 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ಉತ್ಪನ್ನಗಳು ತಯಾರಾಗಲಿವೆ ಎಂದು ಅವರು ನುಡಿದಿದ್ದಾರೆ.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಇತರ ಅಧಿಕಾರಿಗಳು ಸಭೆಯಲ್ಲಿ ಇದ್ದರು.

Prev Post ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂಬುದೇ ನಮ್ಮ ಸರ್ಕಾರದ ಉದ್ದೇಶ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌
Next Post ಕೈಗಾರಿಕಾ ಸಚಿವರಿಂದ ರೂ 2 ಕೋಟಿ ಲಾಭಾಂಶ ಹಸ್ತಾಂತರ ಸಿಎಂ, ಡಿಸಿಎಂರಿಂದ ಕೆಐಎಡಿಬಿ ಹೊಸ ಬಹುಮಹಡಿ ಕಟ್ಟಡ ಉದ್ಘಾಟನೆ