ಅಧಿವೇಶನದ ಪ್ರತಿ ಬುಧವಾರ, ಗುರುವಾರ ಇಡೀ ದಿನದ ಕಲಾಪವು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ವಿಶೇಷ ಚರ್ಚೆಗೆ ಮೀಸಲು: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

Belaguam:

Font size:

ಅಧಿವೇಶನದ ಪ್ರತಿ ಬುಧವಾರ, ಗುರುವಾರ ಇಡೀ ದಿನದ ಕಲಾಪವು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ವಿಶೇಷ ಚರ್ಚೆಗೆ ಮೀಸಲು: ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ

ಬೆಳಗಾವಿ ಸುವರ್ಣಸೌಧ ಡಿ.8 - 157ನೇ ಅಧಿವೇಶನದಲ್ಲಿ ಪ್ರತಿ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಹೇಳಿದರು.
ಸುವರ್ಣಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 238ರಲ್ಲಿ ಡಿಸೆಂಬರ್ 8ರಂದು
ಪತ್ರಿಕಾಗೋಷ್ಠಿ ನಡೆಸಿ ಅವರು ಮಾಹಿತಿ ನೀಡಿದರು.
ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ 145ನೇ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಚರ್ಚೆಯಾಗಿದ್ದು, 19 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. 151ನೇ ಅಧಿವೇಶನದಲ್ಲಿ 1 ಗಂಟೆ 40 ನಿಮಿಷ ಚರ್ಚೆಯಾಗಿದ್ದು 6 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. 154ನೇ ಅಧಿವೇಶನದಲ್ಲಿ 5 ಗಂಟೆ 12 ನಿಮಿಷ ಚರ್ಚೆಯಾಗಿದ್ದು, 11 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ. ಅದೇ ರೀತಿ ಈ ಬಾರಿಯ ಅಧಿವೇಶನದಲ್ಲಿ ಸಹ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ವಿಶೇಷ ಅವಕಾಶ‌ ಕಲ್ಪಿಸಲಾಗುವುದು.
ಪ್ರತಿ ಬುಧವಾರ ಮತ್ತು ಗುರುವಾರ ನಡೆಯುವ ಇಡೀ ದಿನದ ಕಲಾಪದಲ್ಲಿ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ, ಶೂನ್ಯ ವೇಳೆ ಇದ್ಯಾವುದಕ್ಕು ಅವಕಾಶ ನೀಡದೇ ಕೃಷ್ಣಮೇಲ್ದಂಡೆ ಯೋಜನೆ, ಮಹಾದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯಭೂಮಿ ಅತೀಕ್ರಮಣ, ಸಂತ್ರಸ್ಥರ ಸಮಸ್ಯೆ ಹಾಗೂ ಪರಿಹಾರೋಪಾಯಗಳು., ಉತ್ತರ ಕರ್ನಾಟಕ ಭಾಗದ ರೈತರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಪರಿಹಾರಗಳು ಮತ್ತು ಉದ್ಯೋಗ ಸೃಷ್ಠಿಗೆ ಕ್ರಿಯಾಯೋಜನೆ ವಿಷಯಗಳ‌ ಮೇಲೆ ಅಂದು ಇಡೀ ದಿನ ಚರ್ಚೆಗೆ ಅವಕಾಶ ನೀಡಲಾಗುವುದು. ಚರ್ಚೆ ಪೂರ್ಣವಾಗುವವರೆಗೆ ಸದನವನ್ನು ಮುಂದೂಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
157ನೇ ಪರಿಷತ್ ಅಧಿವೇಶನದಲ್ಲಿ 10 ದಿನಗಳನ್ನು ಉಪವೇಶನದ ದಿನಗಳೆಂದು ನಿಗದಿಪಡಿಸಲಾಗಿದೆ. ಪ್ರಸಕ್ತ ಅಧಿವೇಶನಕ್ಕೆ ಇದುವರೆಗೆ ಒಟ್ಟು 1649 ಪ್ರಶ್ನೆಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 965 ಚುಕ್ಕೆ ಗುರುತಿನ ಹಾಗೂ 684 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರಡಿ 112 ಸೂಚನೆಗಳನ್ನು ಸ್ವೀಕರಿಸಲಾಗಿದೆ. ನಿಯಮ 330 ರಡಿ ಬಂದಂತಹ 84 ಸೂಚನೆಗಳನ್ನು ಸ್ವೀಕರಿಸಲಾಗಿದೆ.
ಮೊದಲ ದಿನ, ಕಳೆದ ಅಧಿವೇಶನದಿಂದೀಚೆಗೆ ಅಗಲಿದ ಗಣ್ಯ ವ್ಯಕ್ತಿಗಳ ಬಗ್ಗೆ ಸಂತಾಪ ಸೂಚನೆ ಇರಲಿದೆ.
ಕಾರ್ಯಕಲಾಪಗಳ ಸಲಹಾ ಸಮಿತಿ ತೀರ್ಮಾನದಂತೆ ಇನ್ನೀತರೆ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಕಾರ್ಯದರ್ಶಿ ಕೆ ಆರ್ ಮಹಾಲಕ್ಷ್ಮಿ, ಅಪರ ಕಾರ್ಯದರ್ಶಿ ನಿರ್ಮಲಾ ಎಸ್ ಹಾಗು ಸಚಿವಾಲಯದ ಅಧಿಕಾರಿಗಳು ಇದ್ದರು.

Prev Post ಇಡಿ ಸಮನ್ಸ್ ಕಿರುಕುಳ ಖಂಡನೀಯ: ಡಿಸಿಎಂ ಡಿ.ಕೆ.ಶಿವಕುಮಾರ್
Next Post ವೈಫಲ್ಯ ಮುಚ್ಚಿಹಾಕಲು ಕೇಂದ್ರದ ವಿರುದ್ಧ ಟೀಕಿಸುವ ಸಿಎಂ, ಸರಕಾರ ರೈತರ ಸಂಕಷ್ಟ, ಜ್ವಲಂತ ಸಮಸ್ಯೆಗಳ ಚರ್ಚೆ ಆಗಲಿ- ಬಿ.ವೈ.ವಿಜಯೇಂದ್ರ ಆಗ್ರಹ