ಜಿಲ್ಲೆಯಲ್ಲಿ 200 ರೈತರು ಆತ್ಮಹತ್ಯೆ ಮಾಡಿಕೊಂಡರು; ಇದು ನಿಮ್ಮ ಕೊಡುಗೆ 900 ಕೋಟಿ ರೈತರ ಸಾಲ ಮನ್ನಾ ಮಾಡಿದೆ; ಇದು ನನ್ನ ಕೊಡುಗೆ ಡಿಕೆಶಿ ನೀರಿನ ಹೆಜ್ಜೆ ಇನ್ನಾವುದೋ ಪುಸ್ತಕದ ಕಟ್ ಅಂಡ್ ಪೇಸ್ಟ್ ಎಂದ HDK
ನವದೆಹಲಿ: ಕುಮಾರಸ್ವಾಮಿ ಮಂಡ್ಯಕ್ಕೆ ಏನು ಕೊಟ್ಟಿದ್ದಾರೆ ಎಂದು ಕೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಕ್ಷ್ಣವಾಗಿ ತಿರುಗೇಟು ಕೊಟ್ಟಿರುವ ಕೇಂದ್ರ ಸಚಿವರು; ನಾನು ಕೊಟ್ಟಿದ್ದನ್ನು ಪಟ್ಟಿ ಮಾಡಿ ಹೇಳುತ್ತೇನೆ, ಮೊದಲು ಐದು ವರ್ಷ ಮುಖ್ಯಮಂತ್ರಿ ಆಗಿದ್ದಾಗ, ಈಗ ಏನೇನು ಕೊಟ್ಟಿದ್ದೀರಿ ಎಂಬುದನ್ನು ಹೇಳಿ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಒತ್ತಾಯಿಸಿದರು.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಬೆಳಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ನಾನು ಕೊಟ್ಟಿದ್ದನ್ನು ಹೇಳುತ್ತೇನೆ. ಸಿದ್ದರಾಮಯ್ಯ ಅವರೇ.. ನೀವು ರೈತರಿಗೆ ಏನು ಕೊಡುಗೆ ಕೊಟ್ಟಿದ್ದೀರಿ ಎಂಬುದನ್ನು ಹೇಳಿ. ಮಂಡ್ಯಕ್ಕೆ ನಿಮ್ಮ ಕೊಡುಗೆ ಏನು? ಹಿಂದಿನ ಐದು ವರ್ಷ ಆಡಳಿತದಲ್ಲಿ 200ಕ್ಕೂ ಹೆಚ್ಚು ರೈತರು ಮಂಡ್ಯದಲ್ಲಿ ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಮ್ಮ ಕೊಡುಗೆ. ಅಂಥ ಕಷ್ಟಕಾಲದಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ ಅದೇ ಜಿಲ್ಲೆಯ ರೈತರ 900 ಕೋಟಿ ಸಾಲ ಮನ್ನಾ ಮಾಡಿದೆ. ಇದಕ್ಕಿಂತ ಕೊಡುಗೆ ಬೇಕಾ? ನಿಮ್ಮ ಕಾಲದಲ್ಲಿ ರೈತರ ಜೀವ ಹೋಯಿತು, ನನ್ನ ಕಾಲದಲ್ಲಿ ಜೀವ ಉಳಿಯಿತು. ಇದು ನಿಮಗೆ ಗೊತ್ತಿರಲಿ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ರೈತರ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂಬುದನ್ನು ನೋಡಿ. ಪ್ರವಾಹ, ಮಳೆಯಲ್ಲಿ ಜನ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ನೀವು ಮೋಜು ಮಸ್ತಿ ಮಾಡುತ್ತಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ತೊಗರಿ ಬೆಳೆಗಾರರ ಪರಿಸ್ಥಿತಿ ಏನಾಗಿದೆ? ತೊಗರಿ ದರ ಕುಸಿದಿದೆ. ಅದಕ್ಕೆ ಏನು ಮಾಡಿದ್ದೀರಿ? ಈವರೆಗೆ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿಲ್ಲ. ಸರಿಯಾದ ಸಮಯದಲ್ಲಿ ರಾಜ್ಯ ಸರಕಾರ ಮಧ್ಯಪ್ರವೇಶ ಮಾಡಿ ರೈತರ ನೆರವಿಗೆ ಬರಬೇಕಿತ್ತು, ಬಂದಿಲ್ಲ ಯಾಕೆ? ಕೇಂದ್ರ ಸರಕಾರ ರಾಜ್ಯಕ್ಕೆ ಪರಿಶೀಲನಾ ತಂಡ ಕಳುಹಿಸಿ ಎನ್ನುತ್ತಾರೆ. ನಾಲ್ಕು ತಿಂಗಳ ಬಳಿಕ ಇವರಿಗೆ ಜ್ಞಾನೋದಯ ಆಗಿದೆ. ಈಗ ಕೇಂದ್ರ ತಂಡ ರಾಜ್ಯಕ್ಕೆ ಬಂದರೆ ಏನು ವರದಿ ಕೊಡುತ್ತಾರೆ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ನೀರಿನ ಹೆಜ್ಜೆ; ಅದು ಕಟ್ ಅಂಡ್ ಪೇಸ್ಟ್!:
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ʼನೀರಿನ ಹೆಜ್ಜೆʼ ಪುಸ್ತಕದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು; ಯಾರೋ ಬರೆದಿರುವ ಆ ಪುಸ್ತಕ ಕೇವಲ ಕಟ್ ಅಂಡ್ ಪೇಸ್ಟ್ ಅಷ್ಟೇ. ಬೇರೆ ಯಾವುದೋ ಪುಸ್ತಕದಲ್ಲಿ ಬರೆದಿರುವುದನ್ನೇ ಕತ್ತರಿಸಿ ಈ ಪುಸ್ತಕದಲ್ಲಿ ಅಂಟಿಸಿದ್ದಾರೆ! ನನಗೆ ಈ ಪುಸ್ತಕವನ್ನು ಯಾರೋ ತಂದುಕೊಟ್ಟರು. ಸಾಮಾನ್ಯವಾಗಿ ಯಾವುದೇ ಪುಸ್ತಕವಾದರೂ ಅದನ್ನು ಆಸಕ್ತಿಯಿಂದ ಓದುತ್ತೇನೆ. ಆದರೆ, ಈ ಪುಸ್ತಕ ನೋಡಿದಾಗ ಇಲ್ಲಿರುವುದು ಅವರ ಹೆಜ್ಜೆಗಳಲ್ಲ, ಯಾರದೋ ಹೆಜ್ಜೆಗಳನ್ನು ನನ್ನ ಹೆಜ್ಜೆಗಳು ಎಂದು ತೋರಿಸುವ ಕಸರತ್ತು ಮಾಡಿದ್ದಾರೆ ಎಂದು ಹೇಳಿದರು.
ಮೇಕೆದಾಟು: ತಮಿಳುನಾಡು ಜತೆ ಮಾತಾಡಲಿ
ಮೇಕೆದಾಟು ಯೋಜನೆ ಬಗ್ಗೆ ಜನರನ್ನು ಯಾಮಾರಿಸುವುದಕ್ಕೆ ನಮ್ಮ ನೀರು- ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿದರು. ಆ ಹೆಸರಿನಲ್ಲಿ ಅವರು ಅಧಿಕಾರಕ್ಕೆ ಬಂದರು. ಮೇಕೆದಾಟು ಮಾತ್ರ ಇದ್ದಲ್ಲಿಯೇ ಇದೆ. ಸುಪ್ರೀಂ ಕೋರ್ಟ್ ಕೇಂದ್ರಿಯ ಜಲ ಆಯೋಗದ (CWC) ಹೋಗಿ ವಾದ ಮಂಡಿಸಿ ಎಂದು ಹೇಳಿದ್ದಾರೆ. ತಮಿಳುನಾಡಿನಲ್ಲಿ ಅಧಿಕಾರ ನಡೆಸುತ್ತಿರುವವರು ಇವರು ರಾಜಕೀಯ ಪಾರ್ಟನರ್ʼಗಳೇ ಆಗಿದ್ದಾರೆ. ಇವರು ಹೋಗಿ ಕುಳಿತು ಮಾತನಾಡಬೇಲ್ಲವೇ? ಎಂದು ಕುಮಾರಸ್ವಾಮಿ ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಮೇಕೆದಾಟು ಪ್ರದೇಶದಲ್ಲಿ ಸುಮಾರು 12 ಸಾವಿರ ಎಕರೆಯಷ್ಟು ಅರಣ್ಯ ಮುಳಗಡೆ ಆಗುತ್ತದೆ. ವನ್ಯ ಸಂಪತ್ತು ನಾಶವಾಗುತ್ತದೆ ಎಂದು ಹೇಳುತ್ತಿದ್ದಾರೆ. ಬರೀ ಕೇಂದ್ರ ಸರಕಾರದ ಅಧಿಕಾರ ಮಾತ್ರವಲ್ಲ, ರಾಜ್ಯ ಸರಕಾರಕ್ಕೂ ಹಕ್ಕು, ಜವಾಬ್ದಾರಿ ಇರುತ್ತದೆ. ಪಲಾಯನ ಮಾಡುವ ಅಗತ್ಯವಿಲ್ಲ, ಇನ್ನೆಷ್ಟು ದಿನ ನುಣುಚಿಕೊಳ್ಳುತ್ತೀರಿ? ದೇಶಕ್ಕೆ ಸ್ವಾತಂತ್ರ್ಯ ಬಂದು ೭೫ ವರ್ಷಗಳು ಮೀರಿದೆ. ಅದರಲ್ಲಿ 50 ವರ್ಷಕಾಲ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸಿದೆ. ಆಗ ಮೇಕೆದಾಟು ಬಗ್ಗೆ ಏನು ಮಾಡಿದಿರಿ ಎಂದು ಜನರಿಗೆ ಹೇಳಬೇಕಲ್ಲವೇ? ಎಂದು ರಾಜ್ಯ ಸರಕಾರವನ್ನು ಕೇಂದ್ರ ಸಚಿವರು ಪ್ರಶ್ನಿಸಿದರು.
ಮಾತೆತ್ತಿದರೆ ರಾಜ್ಯಕ್ಕೆ ಕೇಂದ್ರ ಸರಕಾರ ಸಹಕಾರ ನೀಡುತ್ತಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಹಾಗಾದರೆ ರಾಜ್ಯ ಸರಕಾರ ಮಾಡುತ್ತಿರುವುದೇನು? ನಾನು ಕೇಂದ್ರ ಸಚಿವನಾದ ಕೂಡಲೇ ರಾಜ್ಯಕ್ಕೆ ಒಳ್ಳೆಯದಾಗಲಿ ಎಂದು ಕುದುರೆಮುಖ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯ ದೇವದಾರಿ ಗಣಿ ಯೋಜನೆಗೆ ಹಣಕಾಸು ಖಾತರಿ ನೀಡುವ ಕಡತಕ್ಕೆ ಸಹಿ ಹಾಕಿದೆ. ಮರು ದಿನದಿಂದಲೇ ಅದಕ್ಕೆ ಅಡ್ಡಿ ಉಂಟು ಮಾಡುವ ಕೆಲಸಕ್ಕೆ ರಾಜ್ಯ ಸರಕಾರ ಮುಂದಾಯಿತು. ಈಗ ಅವರ ಪಕ್ಷದ ಜನಪ್ರತಿನಿಧಿ ಒಬ್ಬರು ಬಳ್ಳಾರಿಯಲ್ಲಿ ದಿನನಿತ್ಯ ಪ್ರತಿಭಟನೆ ಮಾಡಿಸುವ, ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ತಮಗೆ ವೈಯಕ್ತಿಕವಾಗಿ ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್ಎಂಡಿಸಿ) ದಿಂದ ಲಾಭವಾಗುವ ಕೆಲಸ ಆಗಲಿಲ್ಲ ಎಂದು ಯೋಜನೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾದರೆ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಸಹಕಾರ ಪಡೆಯುವುದು, ಕೊಡುವುದು ಎಂದರೆ ಹೀಗೇನಾ? ಎಂದು ಸಚಿವ ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದರು.
೧
ಮಕ್ಕಳಿಗೆ ಭಗವದ್ಗೀತೆ ಕಲಿಸಿ ಎನ್ನುವುದು ಮಹಾನ್ ಅಪರಾಧವೇ?
ಸಿಎಂ, ಸಚಿವ ಮಹಾದೇವಪ್ಪಗೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
ಸದ್ವಿಚಾರ ಹೇಳುವುದು ಮನುವಾದವೇ ಎಂದು ಕಿಡಿ
ಕರ್ನಾಟಕ ಡ್ರಗ್ಸ್ ದಂಧೆಯ ಕೇಂದ್ರಸ್ಥಾನವಾಗಿದೆ; ಪೊಲೀಸರು ಅಪರಾಧಿಗಳಾಗುತ್ತಿದ್ದಾರೆ!
**
ನವದೆಹಲಿ: ಬೆಂಗಳೂರು ಸೇರಿ ರಾಜ್ಯದಲ್ಲಿ ಮಾದಕ ವಸ್ತುಗಳ ನಶೆಗೆ ಸಿಕ್ಕಿ ಯುವಜನರು ಹಾಳಾಗುತ್ತಿದ್ದಾರೆ. ರಾತ್ರಿಯಿಂದ ಬೆಳಗ್ಗೆವರೆಗೂ ರೇವ್ ಪಾರ್ಟಿಗಳಲ್ಲಿ ಡ್ರಗ್ಸ್ ಅನ್ನು ನಿರಂತರವಾಗಿ ಪೂರೈಕೆ ಮಾಡುತ್ತಿದ್ದಾರೆ. ಇಂಥ ಕೆಟ್ಟ ಪರಿಸ್ಥಿತಿಯಿಂದ ಯುವಕರನ್ನು ಸರಿದಾರಿಗೆ ತರಲು ವಿದ್ಯಾರ್ಥಿ ದಿಸೆಯಿಂದಲೇ ಭಗವದ್ಗೀತೆ ಬೋಧಿಸಬೇಕು ಎಂದು ಹೇಳಿದ್ದೇನೆ. ಇದರಲ್ಲಿ ತಪ್ಪೇನಿದೆ? ಎಂದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನವದೆಹಲಿಯ ತಮ್ಮ ಗೃಹ ಕಚೇರಿಯಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಚಿವರು; ಸಮಾಜ ಯಾವ ದಿಕ್ಕಿಗೆ ಹೋಗುತ್ತಿದೆ ಎಂಬುದನ್ನು ನಾವು ನಿತ್ಯವೂ ನೋಡುತ್ತಿದ್ದೇವೆ. ಒಳ್ಳೆಯ ಸಮಾಜ ನಿರ್ಮಿಸುವ ಉದ್ದೇಶದಿಂದ ಮಕ್ಕಳಿಗೆ ಚಿಕ್ಕಂದಿನಿಂದಲೇ ಭಗವದ್ಗೀತೆ ಕಲಿಸಬೇಕು ಎಂಬುದು ನನ್ನ ಅಭಿಪ್ರಾಯ. ಮನುವಾದಕ್ಕೂ ಭಗವದ್ಗೀತೆಗೂ ಏನು ಸಂಬಂಧ? ಇಂಥ ಮನಃಸ್ಥಿತಿಯೇ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
ಈ ಬಗ್ಗೆ ತಮ್ಮನ್ನು ಟೀಕಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಹೆಚ್.ಸಿ. ಮಹಾದೇವಪ್ಪ ಅವರಿಗೆ ತಿರುಗೇಟು ಕೊಟ್ಟ ಸಚಿವರು; ಒಳ್ಳೆಯದು, ಸದ್ವಿಚಾರಗಳನ್ನು ಚರ್ಚೆ ಮಾಡುವುದು, ಮಕ್ಕಳಿಗೆ ಒಳ್ಳೆಯ ವಿಷಯಗಳನ್ನು ಬೋಧನೆ ಮಾಡುವುದು ಮನುವಾದ ಆಗುತ್ತದೆಯೇ? ಭಗವದ್ಗೀತೆಯನ್ನು ಕಲಿಸಿ ಎಂದು ಕೇಂದ್ರದ ಶಿಕ್ಷಣ ಸಚಿವರಿಗೆ ಪತ್ರ ಬರೆಯುವುದು ಕೂಡ ಮಹಾನ್ ಅಪರಾಧವೇ? ಎಂದು ಖಾರವಾಗಿ ಪ್ರಶ್ನಿಸಿದರು.
ನಾನೆಂದೂ ಭಗವದ್ಗೀತೆಗೆ ಅಪಮಾನ ಮಾಡಿಲ್ಲ, ಮಾಡುವುದೂ ಇಲ್ಲ. ಹಿಂದೊಮ್ಮೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವಾಗ ನಾನು ಭಗವದ್ಗೀತೆ ಬಗ್ಗೆ ಹೇಳಿದ್ದೆ. ಯಾವುದೋ ಒಂದು ವರ್ಗದ ಮಕ್ಕಳಿಗೆ ಕಲಿಸಬೇಕು, ಬೋಧಿಸಬೇಕು ಎಂದು ನಾನು ಹೇಳಿಲ್ಲ. ಎಲ್ಲಾ ಮಕ್ಕಳಿಗೂ ಭಗವದ್ಗೀತೆ ಕಲಿಸಬೇಕು ಎಂದು ಒತ್ತಿ ಹೇಳಿದ್ದೇನೆ. ಇದನ್ನು ಸಚಿವ ಮಹಾದೇವಪ್ಪ ಅರ್ಥ ಮಾಡಿಕೊಳ್ಳಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ನನ್ನ ಮೇಲೆ ದಾಳಿ ಮಾಡಿದರೆ ಉಪಯೋಗವೇನು? ಎಂದು ಸಚಿವ ಕುಮಾರಸ್ವಾಮಿ ಅವರು ಕೇಳಿದರು.
ನನಗೆ ಸಾಧ್ಯವಾದಷ್ಟು ಮಟ್ಟಿಗೆ ಭಗವದ್ಗೀತೆ, ರಾಮಾಯಣ ಮತ್ತು ಮಹಾಭಾರತವನ್ನು ಓದಿಕೊಂಡಿದ್ದೇನೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರೇ ಭಗವದ್ಗೀತೆ ಪ್ರಭಾವಕ್ಕೆ ಒಳಗಾಗಿದ್ದರು. ಅದು ನನ್ನ ಮಾತೃಗ್ರಂಥ, ತಾಯಿ ಸಮಾನ ಎಂದು ಸ್ವತಃ ಬಾಪೂಜಿ ಅವರೇ ಹೇಳಿದ್ದಾರೆ . ಭಗವದ್ಗೀತೆ ಅಮೂಲ್ಯ ಗ್ರಂಥವೆಂದು ನನಗೆ ತೋರಿದೆ. ಸತ್ಯ ಮಾರ್ಗಕ್ಕೆ, ಜ್ಙಾನ ಸಂಪಾದನೆಗೆ ಈ ಗ್ರಂಥ ಸರ್ವೋತ್ಕೃಷ್ಟವಾದುದು ಎಂದು ನಾನು ಭಾವಿಸುತ್ತೇನೆ. ನನ್ನ ನಿರಾಶೆಯ ಸಂದರ್ಭದಲ್ಲಿ ಈ ಗ್ರಂಥ ನನಗೆ ಅಮೂಲ್ಯವಾದ ಸಹಾಯವನ್ನು ಮಾಡಿದೆ ಎಂದು ಗಾಂಧೀಜಿ ಅವರು ಹೇಳಿದ್ದರು ಎಂದ ಸಚಿವರು ಮಾಧ್ಯಗೋಷ್ಠಿಯಲ್ಲಿ ಗೀತೆಯ ೬೩ನೇ ಶ್ಲೋಕವನ್ನು ಓದಿದರು.
ರಾಜ್ಯ ಡ್ರಗ್ಸ್ ದಂಧೆಯಲ್ಲಿ ದಾಪುಗಾಲು ಇಡುತ್ತಿದೆ:
ಕರ್ನಾಟಕ ರಾಜ್ಯ ಡ್ರಗ್ಸ್ ದಂಧೆಯಲ್ಲಿ ದಾಪುಗಾಲು ಇಡುತ್ತಿದೆ. ಎಲ್ಲಾ ದಂದೆಗಳಿಗೂ ರಾಜ್ಯವೇ ಕೇಂದ್ರ ಸ್ಥಾನವಾಗುತ್ತಿದೆ. ಶಾಲಾ ಕಾಲೇಜುಗಳ ಬಳಿ ಡ್ರಗ್ಸ್ ಮಾರಾಟ ನಿರಾತಂಕವಾಗಿ ನಡೆಯುತ್ತಿದೆ. ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಡ್ರಗ್ಸ್ ಸೇವನೆಯಿಂದ ಸಮಾಜದಲ್ಲಿ ಸಂಬಂಧಗಳು ಹಾಳಾಗುತ್ತಿವೆ. ಕೆಟ್ಟ ಸಂಸ್ಕೃತಿಯತ್ತ ಯುವಜನರು ಆಕರ್ಷಿತರಾಗಿ ಭವಿಷ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ. ಇಂಥ ಸುದ್ದಿಗಳು ಮುಖಪುಟಗಳಲ್ಲಿ ರಾರಾಜಿಸುತ್ತಿವೆ. ಪ್ರೊಬೆಷನರಿ ಅವಧಿಯಲ್ಲೇ ಪೊಲೀಸರು ದರೋಡೆ ಕೃತ್ಯಗಳಲ್ಲಿ ಶಾಮೀಲಾಗುತ್ತಿದ್ದಾರೆ. ಇದೆಲ್ಲಾ ಯಾಕಾಗುತ್ತಿದೆ ಎಂಬುದನ್ನು ಆಲೋಚನೆ ಮಾಡಿ ಮಹಾದೇವಪ್ಪನವರೇ ಎಂದು ಕೇಂದ್ರ ಸಚಿವರು ಟಾಂಗ್ ನೀಡಿದರು.
ಭಗವದ್ಗೀತೆ ನಮಗೆ ಶಾಂತಿ, ಶಿಸ್ತು, ಸಂಯಮ ಕಲಿಸುತ್ತದೆ. ಸದ್ವಿಚಾರಗಳ ಮೂಲಕ ವ್ಯಕ್ತಿತ್ವವನ್ನು ಪರಿಪೂರ್ಣಗೊಳಿಸುತ್ತದೆ. ನಾನೂ ಸಂವಿಧಾನದ ಅಡಿಯಲ್ಲೇ ಮಂತ್ರಿಯಾಗಿದ್ದೆನೆ. ಎಲ್ಲರೂ ಭಗವಂತನ ಹೆಸರಿನಲ್ಲಿಯೇ ಪ್ರಮಾಣ ಸ್ವೀಕಾರ ಮಾಡುತ್ತೇವೆ. ನಾನೂ ಅದನ್ನೇ ಮಾಡಿದ್ದೇನೆ. ಆದರೆ, ಮಹಾದೇವಪ್ಪ ಅವರು ಯಾರ ಹೆಸರಲ್ಲಿ ಪ್ರಮಾಣ ಸ್ವೀಕಾರ ಮಾಡಿದ್ದರೋ ನನಗೆ ಗೊತ್ತಿಲ್ಲ ಎಂದು ಕೇಂದ್ರ ಸಚಿವರು ತಿರುಗೇಟು ನೀಡಿದರು.
ನಾನು ಯಾರನ್ನೂ ಮನುವಾದಿ ಆಗುವಂತೆ ಹೇಳಿಲ್ಲ. ಬದಲಿಗೆ ಭಗವದ್ಗೀತೆ ಓದಿದರೆ ಒಳ್ಳೆಯ ಗುಣಗಳನ್ನು ಕಲಿಯಬಹುದು ಎಂದು ಹೇಳಿದ್ದೇನೆ. ಇದನ್ನು ತಿರುಚಿ, ವಿರೂಪಗೊಳಿಸಿ ಹೇಳುವ ಅಗತ್ಯವೇನಿದೆ? ಕೆಲ ದಿನಗಳ ಹಿಂದೆ ಶಿವಮೊಗ್ಗದಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸ್ವಾಮಿಗಳು ಹಮ್ಮಿಕೊಂಡಿದ್ದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಅಲ್ಲಿ ಎಲ್ಲಾ ಪರಮಪೂಜ್ಯರು, ಹಿರಿಯರು, ಪೋಷಕರು ನನ್ನನ್ನು ಒತ್ತಾಯ ಮಾಡಿ, ಪಠ್ಯದಲ್ಲಿ ಭಗವದ್ಗೀತೆಯನ್ನು ಬೋಧಿಸಬೇಕು ಎಂದು ಪ್ರತಿಪಾದಿಸಿದ್ದರು. ನನಗೂ ಅದು ಸರಿ ಎನಿಸಿತು. ಅದೇ ಕಾರಣಕ್ಕೆ ನಾನು ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದೇನೆ. ಹೀಗೆಂದ ಮಾತ್ರಕ್ಕೆ ಮಕ್ಕಳಿಗೆ ಸಂವಿಧಾನದ ಬಗ್ಗೆ ಹೇಳಬೇಡಿ ಎಂದು ಹೇಳಿದ್ದೇನೆಯೇ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
೧
ನಮ್ಮ ರಕ್ತದಲ್ಲಿ ಕನ್ನಡವಿದೆ; ಕನ್ನಡ ಮಾಧ್ಯಮದ ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ: ಎಸ್ ಮಧು ಬಂಗಾರಪ್ಪ ಸ್ಪಷ್ಟನೆ
ರಾಜ್ಯದ ಎಲ್ಲ ಗ್ರಾಪಂಗಳಲ್ಲಿ ಹಂತಹಂತವಾಗಿ ಕೆಪಿಎಸ್ ಶಾಲೆಗಳು ಆರಂಭಿಸಲು ಕ್ರಮ: ಸಚಿವ ಮಧು ಬಂಗಾರಪ್ಪ
--
ಬೆಳಗಾವಿ ಸುವರ್ಣಸೌಧ ಡಿ.08 (ಕ.ವಾ): 2025-26ನೇ ಸಾಲಿನಲ್ಲಿ 900 ಸರ್ಕಾರಿ ಶಾಲೆಗಳನ್ನು ಕೆ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಒಂದು ಕೆ.ಪಿ.ಎಸ್. ಶಾಲೆಯನ್ನು ಹಂತ ಹಂತವಾಗಿ ಪ್ರಾರಂಭಿಸಲು ಕ್ರಮವಹಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ತಿಳಿಸಿದರು.
ಪರಿಷತನಲ್ಲಿ ಡಿ.8ರಂದು ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯರಾದ ಚಿದಾನಂದ್ ಎಂ ಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನಮ್ಮ ರಕ್ತದಲ್ಲಿ ಕನ್ನಡವಿದೆ. ಹಾಗಾಗಿ ಕನ್ನಡ ಮಾಧ್ಯಮದ
ಯಾವುದೇ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವು ಬಜೆಟನಲ್ಲಿ 500 ಕೆಪಿಎಸ್ ಶಾಲೆಗಳನ್ನು ಆರಂಭಿಸುವ ಘೋಷಣೆ ಮಾಡಿದ್ದೇವೆ ಎಂದ ಸಚಿವರು, 2025-26ನೇ ಸಾಲಿನಲ್ಲಿ ಈಗಾಗಲೇ ಕಾರ್ಯಾಚರಣೆಯಲ್ಲಿರುವ 309 ಕೆಪಿಎಸ್ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕದಿಂದ ಪದವಿ ಪೂರ್ವ ತರಗತಿವರೆಗೆ ಒಟ್ಟು 2,72,464 ವಿದ್ಯಾರ್ಥಿಗಳು ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಕೆ.ಪಿ.ಎಸ್. ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಶಿಕ್ಷಕರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಪರಿಪೂರ್ಣವಾಗಿ ಹೆಚ್ಚುವರಿ ಶಿಕ್ಷಕರ ಮರುಹೊಂದಾಣಿಕೆ ಪ್ರಕ್ರಿಯೆಯನ್ನು ತರ್ಕಬದ್ದಗೊಳಿಸುವ ಮೂಲಕ ಕೆ.ಪಿ.ಎಸ್. ಶಾಲೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡಲು ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಉತ್ತಮ ಕಲಿಕೆ, ಉಜ್ವಲ ಭವಿಷ್ಯ ಎಂಬುದು ಕೆ.ಪಿ.ಎಸ್. ಶಾಲೆಗಳ ಧೈಯ ವಾಕ್ಯವಾಗಿದ್ದು, ಪ್ರತಿ ಮಗುವೂ ಶಾಲೆಯಲ್ಲಿರಬೇಕು ಮತ್ತು ಚೆನ್ನಾಗಿ ಕಲಿಯಬೇಕು ಎಂಬ ಮಹತ್ತರ ಉದ್ದೇಶದಿಂದ ರಾಜ್ಯದ ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳು ಏಕರೂಪದ ನೀತಿಯನ್ನು ಪಾಲಿಸುವಂತೆ 'ಕರ್ನಾಟಕ ಪಬ್ಲಿಕ್ ಶಾಲಾ ಮಾನಕಗಳು ಕೈಪಿಡಿಯನ್ನು ಸಿದ್ಧಪಡಿಸಲಾಗಿದ್ದು, ಅದರಲ್ಲಿ ನಿಗದಿಪಡಿಸಿರುವ ಗುಣಮಟ್ಟದ ಮಾನದಂಡಗಳಂತೆ ಪ್ರತಿ ಶಾಲೆಯಲ್ಲಿ ಕನಿಷ್ಠ 1200 ವಿದ್ಯಾರ್ಥಿಗಳಿಗೆ ಅವಶ್ಯಕವಿರುವ ಸಮರ್ಪಕ ಶೈಕ್ಷಣಿಕ ಮತ್ತು ಭೌತಿಕ ಸೌಕರ್ಯಗಳನ್ನು ಒದಗಿಸಿ ಉನ್ನತೀಕರಿಸಲಾಗುವುದು ಎಂದು ತಿಳಿಸಿದರು.





