ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಹಿಂದೇಟು, ಮಲತಾಯಿ ಧೋರಣೆ- ಬಿ.ವೈ.ವಿಜಯೇಂದ್ರ ಟೀಕೆ

Belaguam:

Font size:

ಬೆಳಗಾವಿ ಅಧಿವೇಶನದಲ್ಲಿ ಸಮಸ್ಯೆ, ಸಂಕಷ್ಟಗಳತ್ತ ಬೆಳಕು ಚೆಲ್ಲಿದ ಬಿಜೆಪಿ ರಾಜ್ಯಾಧ್ಯಕ್ಷರು ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಹಿಂದೇಟು, ಮಲತಾಯಿ ಧೋರಣೆ- ಬಿ.ವೈ.ವಿಜಯೇಂದ್ರ ಟೀಕೆ

ಬೆಳಗಾವಿ: ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ಸರಕಾರ ಹಿಂದೇಟು ಹಾಕುತ್ತಿದೆ; ಮಲತಾಯಿ ಧೋರಣೆ ಆಗುತ್ತಿದೆ ಎಂಬ ಅಭಿಪ್ರಾಯ ಸರ್ವೇಸಾಮಾನ್ಯವಾಗಿ ಈ ಭಾಗದಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಸದನದಲ್ಲಿ ಇಂದು ಮಾತನಾಡಿದ ಅವರು, ಅಭಿವೃದ್ಧಿ ಯೋಜನೆಗಳಲ್ಲಿ ಸಮತೋಲನ ಆಗಬೇಕು ಎಂಬ ಒತ್ತಾಯ ಇದೆ. ಇದರಿಂದ ಪ್ರತ್ಯೇಕ ರಾಜ್ಯದ ಧ್ವನಿ ಹಲವಾರು ಬಾರಿ ಎದ್ದಿದೆ ಎಂದು ಗಮನ ಸೆಳೆದರು. ನೀರಾವರಿ ಯೋಜನೆಗಳ ಅನುಷ್ಠಾನ, ಕಬ್ಬು ಬೆಳೆಗಾರರ ಸಮಸ್ಯೆಗಳು, ವಿಶೇóಷ ಆರ್ಥಿಕ ವಲಯ ಸ್ಥಾಪಿಸಿ ಉದ್ಯೋಗ ಸೃಷ್ಟಿಸುವುದು, ಪ್ರವಾಸೋದ್ಯಮ, ಹಿಂದಿನ ಸರಕಾರಗಳು ನೀಡಿದ ಯೋಜನೆಗಳನ್ನು ಮುಂದುವರೆಸಬೇಕೆಂಬ ಕೋರಿಕೆ ಇದೆ ಎಂದು ತಿಳಿಸಿದರು.
ಈ ಭಾಗದ ಅಭಿವೃದ್ಧಿಯನ್ನು ಕಡೆಗಣಿಸಲಾಗಿದೆ. ಕಾವೇರಿಗೆ ಸಿಗುವ ನ್ಯಾಯ ಕೃಷ್ಣಾಗೆ ಸಿಗುತ್ತಿಲ್ಲ; ತುಂಗಭದ್ರಾ ವಿಚಾರದಲ್ಲಿ ನ್ಯಾಯ ಸಿಗುತ್ತಿಲ್ಲ ಎಂಬ ಆತಂಕ ಇದೆ. ರಾಜ್ಯ ಸರಕಾರವು ಕಳೆದ 2.5 ವರ್ಷಗಳ ಆಡಳಿತದಲ್ಲಿ ರೈತರ ಸಮಸ್ಯೆ, ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದೆ ಎಂಬ ಆಕ್ರೋಶ ಇದೆ ಎಂದು ಗಮನಕ್ಕೆ ತಂದರು.
ಉತ್ತಮ ಬಿತ್ತನೆ ಬೀಜ ವಿತರಣೆ, ಉತ್ಪನ್ನಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆ- ಇವೆಲ್ಲವುಗಳಲ್ಲಿ ಸರಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ತಿಳಿಸಿದರು. ಬೆಲೆ ಕುಸಿತ, ಪರಿಹಾರ ನೀಡಿಕೆ, ನೀರಾವರಿ ಯೋಜನೆಗಳ ಅನುಷ್ಠಾನ, ಸರಕಾರಿ ಇಲಾಖಾ ನೇಮಕಾತಿ ವಿಚಾರದಲ್ಲಿ ವೈಫಲ್ಯ ಕಾಣುತ್ತಿದ್ದೇವೆ. ಉದ್ಯೋಗಕ್ಕೆ ನೇಮಕಾತಿ ಆಗದೇ ಯುವಜನರು ಪರದಾಡುವಂತಾಗಿದೆ ಎಂದು ವಿವರಿಸಿದರು.
ಈ ಭಾಗದ ಸಮಸ್ಯೆಗಳ ಬಗ್ಗೆ ಎಳ್ಳಷ್ಟೂ ಕಾಳಜಿ ತೋರುತ್ತಿಲ್ಲ ಎಂಬ ಭಾವನೆ ಜನರಲ್ಲಿದೆ ಎಂದು ಹೇಳಿದರು. ರೈತರು, ಕೃಷಿಕರ ಬಗ್ಗೆ ಈ ಸರಕಾರಕ್ಕೆ ಇಷ್ಟು ಅಸಡ್ಡೆ ಯಾಕೆ ಎಂದು ಅವರು ಕೇಳಿದರು. ರೈತರು ಬೆಳೆದ ಉತ್ಪನ್ನ, ಕೈಗೆ ಬಂದ ತುತ್ತು ಬಾಯಿಗೆ ಬಾರದಂಥ ಸಂದರ್ಭದಲ್ಲಿ ಅವರ ಸಮಸ್ಯೆ ಈಡೇರಿಸುವುದು ರಾಜ್ಯ ಸರಕಾರದ ಕರ್ತವ್ಯ ಎಂದು ಗಮನ ಸೆಳೆದರು. ಮನೆ ಕಳಕೊಂಡ ರೈತರು, ಬೆಳೆ ಕಳೆದುಕೊಂಡ ಅನ್ನದಾತನ ನೆರವಿಗೆ ಧಾವಿಸಬೇಕಿತ್ತು. ಆದರೆ, ಸಚಿವರೂ ವೈಮಾನಿಕ ಸಮೀಕ್ಷೆ ಮಾಡಿದರೆ ಹೇಗೆ ಎಂದು ಕೇಳಿದರು.

ತಕ್ಷಣ ಸ್ಪಂದಿಸಿದ್ದ ಯಡಿಯೂರಪ್ಪ..
ಸರಕಾರವು ಅಸಡ್ಡೆಯಿಂದ ನೋಡುತ್ತಿದೆ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಮನೆ ನಾಶಕ್ಕೆ ಸಂಬಂಧಿಸಿ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣವನ್ನು ನೀಡಿದ್ದರು. ಬೆಳೆ ನಾಶ ಆದುದನ್ನು ಗಮನಿಸಿ ಪರಿಹಾರ ಕೊಟ್ಟಿದ್ದರು. ಈಚೆಗೆ ಕಬ್ಬು ಬೆಳೆಗಾರರು ಹಲವಾರು ದಿನಗಳಿಂದ ಹೋರಾಟ ನಡೆಸುತ್ತಿದ್ದರು. ಆದರೆ, ಹೋರಾಟದ ಸ್ಥಳಕ್ಕೆ ಸಚಿವರು ಹೋಗಿಲ್ಲ ಎಂದು ದೂರಿದರು.

ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಕೊಡಿ..
ತುಂಗಭದ್ರಾ ಅಣೆಕಟ್ಟಿನ ವಿಚಾರದಲ್ಲಿ ತಜ್ಞರ ಸಲಹೆಯನ್ನು ಪರಿಗಣಿಸಿಲ್ಲ ಎಂದು ಆಕ್ಷೇಪಿಸಿದರು. ಕ್ರಸ್ಟ್ ಗೇಟ್ ಅಳವಡಿಕೆಯು ಒಂದು ವರ್ಷವಾದರೂ ಈಡೇರಿಲ್ಲ. ಸದನ ಪ್ರಾರಂಭವಾಗುವ ಒಂದು ವಾರದ ಮೊದಲೇ ಕೆಲಸ ಪ್ರಾರಂಭಿಸಲಾಗಿದೆ ಎಂದು ಟೀಕಿಸಿದರು. ಇದೀಗ ನೀರು ಸಿಗದ ಕಾರಣ, ಬೆಳೆ ನಷ್ಟಕ್ಕೆ ಆ ಭಾಗದ ರೈತರಿಗೆ ಒಂದು ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಕೊಡಬೇಕು ಎಂದು ಆಗ್ರಹವನ್ನು ಮುಂದಿಟ್ಟರು.
ನೀರಾವರಿ ವಿಚಾರದಲ್ಲೂ ಈ ಭಾಗಕ್ಕೆ ಸಾಕಷ್ಟು ಅನ್ಯಾಯ ಆಗಿದೆ ಎಂದು ಅವರು ತಿಳಿಸಿದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗ ಬೆಳಗಾವಿ ಭಾಗದಲ್ಲಿ ಹಲವು ಏತ ನೀರಾವರಿ ಯೋಜನೆಗೆ ಮಂಜೂರಾತಿ ಕೊಟ್ಟಿದ್ದರು. ಇವನ್ನು ಅನುಷ್ಠಾನಕ್ಕೆ ತರಲಿಲ್ಲ ಎಂದರು.

ಪ್ರಣಾಳಿಕೆ ಈಡೇರಿಸದ ಸರಕಾರ..
ನಮ್ಮ ನಡೆ ಕೃಷ್ಣೆಯ ಕಡೆ ಯಾತ್ರೆ ಮಾಡಿ ಅಧಿಕಾರಕ್ಕೆ ಬಂದಿದ್ದೀರಿ. ಹೆಚ್ಚು ಹಣ ನೀಡುವುದಾಗಿ ಅಧಿಕಾರಕ್ಕೆ ಬಂದಿದ್ದೀರಿ. ಎರಡೂವರೆ ವರ್ಷ ಕಳೆದಿದೆ. ಪ್ರಣಾಳಿಕೆಯಂತೆ ಎರಡೂವರೆ ವರ್ಷಕ್ಕೆ 75 ಸಾವಿರ ಕೋಟಿ ಕೊಡಬೇಕಿತ್ತು. ಆದರೆ, 20 ಸಾವಿರ ಕೋಟಿಯನ್ನೂ ಈ ಸರಕಾರ ಕೊಡಲು ಆಗಿಲ್ಲ ಎಂದು ವಿವರ ನೀಡಿದರು. ರಾಜ್ಯ ಸರಕಾರವು ಈ ಭಾಗ ಮತ್ತು ಇಲ್ಲಿನ ನೀರಾವರಿ ಯೋಜನೆಗಳ ಬಗ್ಗೆ ಕಿಂಚಿತ್ತೂ ಗಮನ ಕೊಡದೇ ಇರುವುದು ಇದರಿಂದ ಗೊತ್ತಾಗುತ್ತದೆ ಎಂದು ತಿಳಿಸಿದರು.
ನಿರುದ್ಯೋಗದ ಸಮಸ್ಯೆಯ ವಿಚಾರವನ್ನೂ ಅವರು ಗಮನ ಸೆಳೆದರು. ಕೆಪಿಎಸ್ಸಿ ಸುಧಾರಣೆ ಮಾಡಬೇಕು ಎಂದು ತಿಳಿಸಿದರು. ಹೋರಾಟ ಮಾಡುತ್ತಿರುವ ಯುವಜನರಿಗೆ ನ್ಯಾಯ ಕೊಡುವ ಕೆಲಸವನ್ನು ಸರಕಾರ ಮಾಡಲಿ ಎಂದು ಒತ್ತಾಯಿಸಿದರು. ಗೃಹ ಲಕ್ಷ್ಮಿ ಎಂಬುದು ಚುನಾವಣಾ ಲಕ್ಷ್ಮಿಯಾಗಿದೆ ಎಂದ ಅವರು, ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಗ್ರಹಿಸಿದರು.

Prev Post ಉತ್ತರ ಕರ್ನಾಟಕದ ರೈತರಿಗೆ ಅನ್ಯಾಯ, ಬೆಳೆ ಹಾನಿ, ಮಳೆ ಹಾನಿ ಪರಿಹಾರ ಇಲ್ಲ, ಶ್ವೇತಪತ್ರ ಬಿಡುಗಡೆ ಮಾಡಲಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹ