ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಕೃತಜ್ಞತೆ ಸಲ್ಲಿಸಿದ ಕೇಂದ್ರ ಸಚಿವರು ಸುತ್ತೂರು ಕ್ಷೇತ್ರ-ದೇವೇಗೌಡರ ಕುಟುಂಬದ ಬಾಂಧವ್ಯ ಸ್ಮರಿಸಿದ ಸಚಿವರು ವೇದಿಕೆ ಮೇಲೆ ಸಚಿವರಿಗೆ ಜನ್ಮದಿನ ಶುಭ ಕೋರಿದ ರಾಷ್ಟ್ರಪತಿಗಳು, ರಾಜ್ಯಪಾಲರು, ಪೂಜ್ಯರು **
ಮಳವಳ್ಳಿ/ಮಂಡ್ಯ: ಸುತ್ತೂರು ಕ್ಷೇತ್ರದ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1066ನೇ ಜಯಂತಿ ಮಹೋತ್ಸವದಲ್ಲಿ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮು ಅವರು ಭಾಗವಹಿಸಿರುವುದು ಐತಿಹಾಸಿಕ ಎಂದ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು; ಅವರ ಉಪಸ್ಥಿತಿ ಭವಿಷ್ಯದ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ʼಹೊಸ ದಿಕ್ಸೂಚಿʼ ಆಗಲಿದೆ ಎಂದು ಬಣ್ಣಿಸಿದರು.
ಮಳವಳ್ಳಿಯಲ್ಲಿ ಮಂಗಳವಾರ ನಡೆದ ಶ್ರೀ ಸುತ್ತೂರು ಮಹಾಸಂಸ್ಥಾನದ ಸಂಸ್ಥಾಪಕರಾದ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವದಲ್ಲಿ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಿ ಮಾತನಾಡಿದರು ಕೇಂದ್ರ ಸಚಿವರು.
ತಮ್ಮ ಬಿಡುವಿಲ್ಲದ, ನಿರಂತರ ಕಾರ್ಯಕ್ರಮಗಳ ನಡುವೆಯೂ ನಮ್ಮ ಮನವಿಗೆ ಓಗೊಟ್ಟು ಪರಮಪೂಜ್ಯರ ಜಯಂತಿ ಉತ್ಸವಕ್ಕೆ ಆಗಮಿಸಿರುವ ರಾಷ್ಟ್ರಪತಿಗಳಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಮರ್ಪಿಸುತ್ತೇನೆ ಎಂದರು ಸಚಿವರು.
ಕೆಲ ತಿಂಗಳ ಹಿಂದೆ ಸುತ್ತೂರು ಕ್ಷೇತ್ರದಲ್ಲಿ ನಡೆದ ಜಾತ್ರಾ ಮಹೋತ್ಸವದಲ್ಲಿ ನಾನು ಭಾಗಿಯಾಗಿದ್ದೆ. ಆ ಸಂದರ್ಭದಲ್ಲಿ ಶ್ರೀಗಳಲ್ಲಿ ಮನವಿ ಮಾಡಿ, ಈ ಬಾರಿ ಮಳವಳ್ಳಿಯಲ್ಲೇ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಜಯಂತಿ ಮಹೋತ್ಸವ ನೆರೆವೇರಿಸಲು ಅನುಮತಿ ನೀಡಬೇಕು ಎಂದು ವಿನಂತಿಸಿದ್ದೆ. ಅದಕ್ಕೆ ಒಪ್ಪಿಗೆ ನೀಡಿದ್ದರು ಪೂಜ್ಯರು. ಬಳಿಕ ಪೂಜ್ಯರು ಮತ್ತು ನಾನು ಸೇರಿ ನವದೆಹಲಿಯಲ್ಲಿ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿಗಳನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿದೆವು. ಆಹ್ವಾನ ಮನ್ನಿಸಿ ರಾಷ್ಟ್ರಪತಿಗಳು ಮಳವಳ್ಳಿಗೆ ಆಗಮಿಸಿ ಈ ಧಾರ್ಮಿಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದಾರೆ. ಅದಕ್ಕಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರಿಗೆ ನಾನು ಆಭಾರಿ ಆಗಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಒತ್ತಿ ಹೇಳಿದರು.
ಮಳವಳ್ಳಿ ಪ್ರಕೃತಿಮಾತೆ ಮಡಿಲಲ್ಲಿ ಇರುವ ಪುಣ್ಯಭೂಮಿ. ಇಲ್ಲಿನ ಜನರು ಕಾವೇರಿ ತಾಯಿಯ ಮಡಿಲಲ್ಲಿ ವಾಸ ಮಾಡುತ್ತಿದ್ದೀರಿ. ಇದೇ ಜಾಗದಲ್ಲಿ ಮೈಸೂರು ಮಹಾರಾಜರು ಹಾಗೂ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಫಲವಾಗಿ ರಾಷ್ಟ್ರದಲ್ಲಿ ಮೊತ್ತಮೊದಲ ಜಲ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಯಾಯಿತು. ಇವತ್ತು ಇಲ್ಲಿ ನಡೆಯುತ್ತಿರುವ ಪೂಜ್ಯರ ಜಯಂತಿ ಮಹೋತ್ಸವದಲ್ಲಿ ರಾಷ್ಟ್ರಪತಿಗಳು ಭಾಗಿಯಾಗುವ ಮೂಲಕ ಮಳವಳ್ಳಿ ಪಟ್ಟಣವು ಇತಿಹಾಸದಲ್ಲಿ ಚಿರಸ್ಥಾಯಿ ಆಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಸುತ್ತೂರು ಕ್ಷೇತ್ರಕ್ಕೂ ನಮ್ಮ ಕುಟುಂಬಕ್ಕೂ 1962ರಿಂದಲೂ ಅವಿನಾಭಾವ ಸಂಬಂಧವಿದೆ. ಈಗಿರುವ ಪೂಜ್ಯರ ಜತೆಗೆ, ಹಿಂದಿನ ಪೂಜ್ಯರ ಕೃಪೆಯು ನಮ್ಮ ಕುಟುಂಬದ ಮೇಲೆ ಅಪಾರವಾಗಿದೆ. ದೇವೇಗೌಡರ ಆರಂಭಿಕ ರಾಜಕೀಯ ಬೆಳವಣಿಗೆಯಲ್ಲಿ ಹಿರಿಯ ಶ್ರೀಗಳು ಕೊಡುಗೆ ಅಪಾರ. ಅದಕ್ಕಾಗಿಯೇ ನಮ್ಮ ತಂದೆಯವರು ʼಸುತ್ತೂರು ಕ್ಷೇತ್ರವನ್ನು ಯಾವತ್ತೂ ಮರೆಬಾರದುʼ ಎಂದು ನನಗೆ ನೂರಾರು ಬಾರಿ ಹೇಳಿದ್ದಾರೆ. ಈ ಮಾತನ್ನು ನನ್ನ ಹೃದಯದಿಂದ ಹೇಳುತ್ತಿದ್ದೇನೆ ಎಂದು ಸಚಿವ ಕುಮಾರಸ್ವಾಮಿ ಅವರು ಹೇಳಿದರು.
ಸುತ್ತೂರು ಕ್ಷೇತ್ರವು ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅಸಂಖ್ಯಾತ ಬಡಮಕ್ಕಳಿಗೆ ಬೆಳಕಾಗಿದೆ. ಇವತ್ತು ಶ್ರೀಮಠವು ರಾಜ್ಯ, ದೇಶ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಅಗಾಧವಾಗಿ ಬೆಳೆದಿದ್ದು ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದೆ. ಪರಮಪೂಜ್ಯರು ಮಠದ ಪರಂಪರೆಯನ್ನು ಮುಂದುವರೆಸುತ್ತಾ ನಾಡಿಗೆ ಮಾರ್ಗದರ್ಶನ ತೋರುತ್ತಿದ್ದಾರೆ ಎಂದು ಸಚಿವರು ನುಡಿದರು.
ಜನ್ಮದಿನದ ಶುಭ ಕೋರಿದ ರಾಷ್ಟ್ರಪತಿಗಳಿಗೆ ಧನ್ಯವಾದ ಹೇಳಿದ ಹೆಚ್ಡಿಕೆ
ವೇದಿಕೆ ಮೇಲೆ ಭಾಷಣ ಮಾಡುವಾಗಲೇ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು; ನಿಮಗೆ ಭಗವಂತ ಒಳ್ಳೆಯದನ್ನು ಉಂಟು ಮಾಡಿ ಉತ್ತಮ ಆರೋಗ್ಯವನ್ನು ನೀಡಲಿ ಎಂದು ಹಾರೈಸಿದರು. ಇದಕ್ಕೆ ಪ್ರತಿಯಾಗಿ ಕೇಂದ್ರ ಸಚಿವರು ರಾಷ್ಟ್ರಪತಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಹಾಗೇ ರಾಜ್ಯಪಾಲರಾದ ಥಾವರಚಂದ್ ಗೆಹಲೋತ್ ಅವರು ಕೂಡ ಸಚಿವರಿಗೆ ಜನ್ಮದಿನ ಶುಭ ಕೋರಿದರು.
ಸುತ್ತೂರು ಕ್ಷೇತ್ರದ ಪೀಠಾಧೀಶರಾದ ಶ್ರೀ ಶ್ರೀ ಶಿವಾರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರು ತಮ್ಮ ಭಾಷಣದಲ್ಲಿ ಸಚಿವರಿಗೆ ಹುಟ್ಟುಹಬ್ಬದ ಶುಭ ಕೋರಿ ಆಶೀರ್ವದಿಸಿದರು.
ಕುಮಾರಸ್ವಾಮಿ ಅವರು ಕಳೆದ ಬಾರಿ ಸುತ್ತೂರು ಜಾತ್ರೆಗೆ ಬಂದಿದ್ದಾಗ ಮಳವಳ್ಳಿಯಲ್ಲೇ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವ ಆಚರಿಸಲು ನಮ್ಮ ಒಪ್ಪಿಗೆ ಕೇಳಿದ್ದರು. ಇವತ್ತು ಈ ಮಹೋತ್ಸವಕ್ಕೆ ರಾಷ್ಟ್ರಪತಿಗಳು ಬರುವುದಕ್ಕೂ ಅವರೇ ಕಾರಣರು. ಮಳವಳ್ಳಿ ಜನತೆಗೆ ಇದೊಂದು ಅಹೋಭಾಗ್ಯ ಎಂದು ಪೂಜ್ಯರು ಆಶೀರ್ವಚನದಲ್ಲಿ ಹೇಳಿದರು.
ಅಲ್ಲದೆ; ಇಂದು ಕುಮಾರಸ್ವಾಮಿ ಅವರ ಜನ್ಮದಿನ. ದೆಹಲಿ ಬಿಟ್ಟು ಬರುವುದಕ್ಕೆ ಅವರ ಸಾಧ್ಯವೇ ಇಲ್ಲದಂಥ ಪರಿಸ್ಥಿತಿ ಇತ್ತು. ಆದರೂ ಅವರು ದೈವದ ಅನುಗ್ರಹದಿಂದ ಇಲ್ಲಿಗೆ ಬಂದಿದ್ದಾರೆ. ಆದಿ ಜಗದ್ಗುರು ಜಯಂತಿ ಮಹೋತ್ಸವದಲ್ಲಿ, ರಾಷ್ಟ್ರಪತಿಗಳ ಸಮ್ಮುಖದಲ್ಲಿ ಅವರು ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ ಎಂದು ಪೂಜ್ಯರು ಹೇಳಿದರು.






