- ವಿಜಯಲಕ್ಷ್ಮಿ ಯಾರೆಂಬುದೇ ಗೊತ್ತಿಲ್ಲ; ಸುದ್ದಿಗೋಷ್ಠಿಯಲ್ಲಿ ಸಚಿವರ ಸ್ಪಷ್ಟನೆ -ಗೋಪಾಲ್ ಜೋಶಿ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ; ಅವರು ತಪ್ಪು ಮಾಡಿದ್ದರೆ ಕಾನೂನು ಕ್ರಮವಾಗಲಿ
ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸ್ಪಷ್ಟಪಡಿಸಿದ್ದಾರೆ.
ನವದೆಹಲಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ, ಬೆಂಗಳೂರಿನಲ್ಲಿ ದಾಖಲಾಗಿರುವ ಬಿಜೆಪಿ ಟಿಕೆಟ್ ವಂಚನೆ ಪ್ರಕರಣದ ಬಗ್ಗೆ ಹೀಗೆ ಸ್ಪಷ್ಟನೆ ನೀಡಿದರು.
ಮೊದಲನೆಯದಾಗಿ ನನಗೆ ಯಾರೂ ಸಹೋದರಿ ಇಲ್ಲ. ಇನ್ನು, ನನ್ನ ತಾಯಿಗೆ ಗೋಪಾಲ್ ಜೋಶಿ ಸೇರಿ ನಾಲ್ವರು ಮಕ್ಕಳು. ಆದರೆ, ಗೋಪಾಲ್ ಜೋಶಿ ಅವರೊಂದಿಗೆ ಕಳೆದ 32 ವರ್ಷಗಳಿಂದ ತಮ್ಮ ಸಂಪರ್ಕ, ಸಂಬಂಧವಿಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದರು.
ಗೋಪಾಲ್ ಜೋಶಿ ಮಾತ್ರವಲ್ಲ ಯಾರೇ ತಮ್ಮ ಕೆಲಸ ಕಾರ್ಯಗಳಿಗೆ ನನ್ನ ಹೆಸರು ದುರುಪಯೋಗ ಪಡಿಸಿಕೊಳ್ಳುತ್ತಿದ್ದರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಪ್ರಲ್ಹಾದ ಜೋಶಿ ಪುನರುಚ್ಚರಿಸಿದರು.
ಯಾರೊಂದಿಗೂ ನನ್ನ ಹೆಸರು ಉಲ್ಲೇಖಿಸದಂತೆ 2013ರಲ್ಲೇ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ನ್ಯಾಯಾಲದ ಅಫಿಡವಿಟ್ ನಲ್ಲಿ ಅದರ ವಿವರವಿದೆ ಎಂದು ದಾಖಲೆ ಸಮೇತ ಸ್ಪಷ್ಟನೆ ನೀಡಿದರು ಪ್ರಲ್ಹಾದ ಜೋಶಿ.
ಇನ್ನು, ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್‌ನಲ್ಲಿ ವಿಜಯಲಕ್ಷ್ಮಿ ನನ್ನ ಸಹೋದರಿ ಎಂದು ಉಲ್ಲೇಖಿಸಿದ್ದಾರೆ. ವಾಸ್ತವವಾಗಿ ನನಗೆ ಸಹೋದರಿಯೇ ಇಲ್ಲ. ಇದನ್ನೆಲ್ಲ ನೋಡಿದರೆ ಎಲ್ಲ ಬೋಗಸ್ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ಹೇಳಿದರು.
ಗೋಪಾಲ್ ಜೋಶಿ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ: ಈ ಪ್ರಕರಣದಲ್ಲಿ ನನಗೂ, ನನ್ನ ಕುಟುಂಬಕ್ಕೂ ಹಾಗೂ ಬಿಜೆಪಿ ಪಕ್ಷಕ್ಕೂ ಸಹ ಸಂಬಂಧವಿಲ್ಲ. ಗೋಪಾಲ್ ಜೋಶಿ ತಪ್ಪೆಸಗಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಿ ಎಂದು ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ತನಿಖೆ ಆಗಬೇಕಿದೆ: ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ಗೋಪಾಲ್ ಜೋಶಿ ಹಣ ಪಡೆದಿದ್ದಾರೋ ಇಲ್ಲವೋ ಗೊತ್ತಿಲ್ಲ. ಇದು ತನಿಖೆಯಿಂದ ಸಾಬೀತಾಗಬೇಕಿದೆ ಅಷ್ಟೇ ಎಂದು ಪ್ರಲ್ಹಾದ ಜೋಶಿ ಪ್ರತಿಕ್ರಿಯಿಸಿದರು
ಬೌದ್ಧಿಕ ದಿವಾಳಿತನ ಪ್ರದರ್ಶಿಸುತ್ತಿದೆ ಕಾಂಗ್ರೆಸ್ : ಈ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಬೌದ್ಧಿಕ ದಿವಾಳಿತನ ಪ್ರದರ್ಶನ ಮಾಡುತ್ತಿದೆ ಎಂದು ಜೋಶಿ ಕಿಡಿ ಕಾರಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಶಿಯನ್ನು ಬಂಧಿಸಬೇಕೆನ್ನುವ ಮೂಲಕ ಕಾಂಗ್ರೆಸ್ ಮುಠ್ಠಾಳತನ ತೋರುತ್ತಿದೆ. ಸತ್ಯಾಸತ್ಯತೆ ವಿಮರ್ಶೆ ಮಾಡದೆ ಒಂದು ರೀತಿ ಹುಂಬತನ ಪ್ರದರ್ಶಿಸುತ್ತಿದೆ ಎಂದು ಲೇವಡಿ ಮಾಡಿದರು.
ನನ್ನ ಕೈ ಮಸಿ ಬಳಿದುಕೊಂಡಿಲ್ಲ: ಕಳೆದ 25 ವರ್ಷಗಳಿಂದ ರಾಜಕೀಯ ಜೀವನದಲ್ಲಿ ಇದ್ದೇನೆ. ಒಂದು ಕಾಲದಲ್ಲಿ "ಕೋಲ್ ಎಂದರೆ ಭ್ರಷ್ಟಾಚಾರ, ಹಗರಣದ್ದೇ ಸದ್ದು ಮಾಡುತ್ತಿತ್ತು". ಇಂಥ ಒಂದು ಖಾತೆ ನಿರ್ವಹಿಸಿದಾಗ್ಯೂ ಯಾವತ್ತೂ ಕೈ ಮಸಿ ಮಾಡಿಕೊಂಡಿಲ್ಲ. ಇಂದಿಗೂ ಶುದ್ಧ ಹಸ್ತನಾಗಿದ್ದೇನೆ ಎಂದು ಸಚಿವ ಪ್ರಲ್ಹಾದ ಜೋಶಿ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.
00000
ಜೋಶಿ ಸಹೋದನಿಂದ ಟಿಕೆಟ್ ವಂಚನೆ - ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಆಗ್ರಹಿಸಿದ ದಿನೇಶ್ ಗುಂಡೂರಾವ್
ನನಗೆ ಸಂಬಂಧವಿಲ್ಲ ಎಂದು ಪ್ರಲ್ಹಾದ್ ಜೋಶಿಯವರು ನುಣಿಚಿಕೊಳ್ಳುವುದು ಸರಿಯಲ್ಲ
ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯರ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿಯವರ ರಾಜೀನಾಮೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳಿಗೆ ಈ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಗೋಪಾಲ್ ಜೋಶಿಯವರು ಪ್ರಲ್ಹಾದ್ ಜೋಶಿಯವರ ಜೊತೆಗೆ ಇದ್ದಾರೆ ಎಂಬುದು ಹುಬ್ಬಳ್ಳಿ ಭಾಗದ ಜನರಿಗೆ ಗೊತ್ತಿರುವ ಸಂಗತಿ. ಸಹೋದರ ಗೋಪಾಲ್ ಜೋಶಿಯವರ ಮೇಲೆ ಬಂದಿರುವ ಆರೋಪ, ನನಗೆ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನುಣಿಚಿಕೊಳ್ಳುವುದು ಸರಿಯಲ್ಲ. ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದರು.
ಮಾಜಿ ಶಾಸಕ ದೇವಾನಂದ ಚೌಹಾಣ್ ಗೌರವಯುತವಾದ ವ್ಯಕ್ತಿ. ಚೌಹಾಣ್ ಅವರಿಗೆ ಲೋಕಸಭೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಜೋಶಿಯವರ ಸಹೋದರ ಗೋಪಾಲ್ ಜೋಶಿ 2 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇನಾನಂದ ಚೌಹಾಣ್ ಅವರು ದಾಖಲೆ ಕೊಟ್ಟಿದ್ದಾರೆ. ಅಮಿತ್ ಶಾ ಅವರ ಹೆಸರನ್ನ ಬಳಸಿಕೊಳ್ಳಾಗಿದೆ. ಪ್ರಲ್ಹಾದ್ ಜೋಶಿಯವರ ಪ್ರಭಾವ ಬಳಿಸಿಕೊಂಡು ವಂಚಿಸಲಾಗಿದೆ.
ಇಡಿ, ಐಟಿಯವರನ್ನ ಚೂ ಬಿಟ್ಟು ಹೆದರಿಸಿ ದೇವಾನಂದ ಚೌಹಾಣ್ ಅವರನ್ನ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಟಿಕೆಟ್ ಕೊಡಿಸುವುದಾಗಿ ಹೇಳಿ 2 ಕೋಟಿ ಹಣ ಪಡೆದು ವಂಚಿಸಿರುವುದು ಇದೀಗ ಬೆಳಕಿಗೆ ಬಂದಿದೆ. ಗೋಪಾಲ್ ಜೋಶಿಯವರು ಆರ್.ಎಸ್.ಎಸ್ ನಲ್ಲಿ ತೊಡಗಿಸಿಕೊಂಡವರು. ಆರ್.ಎಸ್.ಎಸ್ ನ ಕೆಲ ನಾಯಕರು ಈ ರೀತಿಯ ಟಿಕೆಟ್ ದಂಧೆಯಲ್ಲಿ ತೊಡಗಿರುವ ಬಗ್ಗೆ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇಡಿ ಜನರ ವಿಶ್ವಾಸ ಕಳೆದುಕೊಂಡಿದೆ
ಮಡಾ ಪ್ರಕರಣದಲ್ಲಿ ಇಡಿ ಬಂದಿರುವುದೇ ಸಿಎಂ ಸಿದ್ದರಾಮಯ್ಯ ಅವರನ್ನ ಸಿಕ್ಕಿಹಾಕಿಸಬೇಕು ಎಂಬ ದುರುದ್ದೇಶದಿಂದ. ಈ ರೀತಿಯ ನಡವಳಿಕೆಗಳಿಂದಾಗಿ ಇಡಿ ಜನರ ವಿಶ್ವಾಸವನ್ನ ಕಳೆದುಕೊಂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮುಡ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವರು, ಇಡಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಕೆಲಸ ಮಾಡುತ್ತಿಲ್ಲ. ಕೇಂದ್ರದ ಕೈಗೊಂಬೆಯಾಗಿದೆ. ಕಳೆದ 10 ವರ್ಷದಲ್ಲಿ ಬಿಜೆಪಿಯವರ ಬಂಧನವಾಗಿದೆಯಾ..? ವಿಪಕ್ಷ ನಾಯಕರು ಏಲ್ಲಿ ಇರ್ತಾರೆ ಅಲ್ಲಿ ಮಾತ್ರ ಇಡಿ, ಐಟಿ ಚೂ ಬಿಡ್ತಾರೆ ಎಂದರು.
ವಿರೋಧ ಪಕ್ಷದ ನಾಯಕರು ಇರುವ ಕಡೆ ಇಡಿ ಸಿಬಿಐವರು ಬರ್ತಾರೆ. ಕೆಜ್ರಿವಾಲ್, ಸೂರೇನ್,ಡಿಕೆಶಿಯನ್ನ ಜೈಲಿಗೆ ಹಾಕಿದ್ರು. ಯಡಿಯೂರಪ್ಪ, ವಿಜಯೇಂದ್ರ ಯಾಕೆ ಕಣ್ಣಿಗೆ ಕಾಣಲ್ಲ.? ಈ ಕಾನೂನು ದುರ್ಬಳಕೆ ಆಗುತ್ತಿದೆ. ಹೇಗಾದರು ಸರಿ ಸಿಎಂ ಅವರನ್ನು ಸಿಕ್ಕಿಸಬೇಕು ಎಂದು ವ್ಯವಸ್ಥಿತವಾದ ಸಂಚು ನಡೆದಿದೆ. ಪ್ರೀ ಪ್ಲಾನ್ ಮಾಡಲಾಗಿದೆ. ಸಿಎಂ ಅವರ ಹೆಸರು ಹೇಳಲು ಇಡಿ ಒತ್ತಡ ಹಾಕಿದ್ರು ಎಂದು ಮಾಜಿ ಸಚಿವ ನಾಗೇಂದ್ರ ಕೂಡ ಹೇಳಿದ್ದಾರೆ. ಹೆದರಿಸುವ ಕೆಲಸ ಇಡಿ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.






