ಮುಸಲ್ಮಾನ ಬಂಧುಗಳಿಗೆ ಮಾತ್ರ ರಕ್ಷಣೆ ಕೊಡುವುದಾಗಿ ಘೋಷಿಸಿ: ಎನ್.ರವಿಕುಮಾರ್ ವ್ಯಂಗ್ಯ ಡಿ.ಕೆ.ಶಿವಕುಮಾರ್ ಅವರ ಮೈ ಬ್ರದರ್ ಪಾಲಿಸಿಯಿಂದ ಹೀಗಾಗುತ್ತಿದೆ..

Banglore:

Font size:

ಮುಸಲ್ಮಾನ ಬಂಧುಗಳಿಗೆ ಮಾತ್ರ ರಕ್ಷಣೆ ಕೊಡುವುದಾಗಿ ಘೋಷಿಸಿ: ಎನ್.ರವಿಕುಮಾರ್ ವ್ಯಂಗ್ಯ ಡಿ.ಕೆ.ಶಿವಕುಮಾರ್ ಅವರ ಮೈ ಬ್ರದರ್ ಪಾಲಿಸಿಯಿಂದ ಹೀಗಾಗುತ್ತಿದೆ..

ಬೆಂಗಳೂರು: ಸರಕಾರಿ ನೌಕರರು, ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲವಾಗಿದೆ. ನಾವು ಅಲ್ಪಸಂಖ್ಯಾತರಿಗೆ, ಮುಸಲ್ಮಾನ ಬಂಧುಗಳಿಗೆ ಮಾತ್ರ ರಕ್ಷಣೆ ಕೊಡುವುದಾಗಿ ರಾಜ್ಯ ಸರಕಾರ ಘೋಷಿಸಲಿ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಆಗ್ರಹಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದರೂ ನಾವೇನೂ ಮಾಡುವುದಿಲ್ಲ ಎಂದು ತಿಳಿಸಿ ಎಂದು ಒತ್ತಾಯಿಸಿದರು. ಇದು ನಮ್ಮ ಸರಕಾರ ಎಂದು ಇವರಿಗೆ ಅನಿಸಿರಬೇಕು ಎಂದು ತಿಳಿಸಿದರು.
ಕರ್ನಾಟಕದಲ್ಲಿ ಹಿಂದೂ ರಾಷ್ಟ್ರೀಯ ನಾಯಕರು, ದೇವಾನುದೇವತೆಗಳ ಭಾವಚಿತ್ರದ ಮೆರವಣಿಗೆ ಮಾಡಬಾರದೆಂದು ಘೋಷಣೆ ಮಾಡಿಬಿಡಿ ಎಂದು ತಿಳಿಸಿದರು. ಅಲ್ಪಸಂಖ್ಯಾತರಿಗೆ ಸಂಬಂಧಿಸಿದ ಮೆರವಣಿಗೆ ಮಾತ್ರ ಮಾಡಬೇಕೆಂದು ಪ್ರಕಟಿಸಿ ಎಂದು ಹೇಳಿದರು. ಗಣಪತಿ ಉತ್ಸವ, ಶಿವಾಜಿ ಜಯಂತಿ ಬಂದಾಗ ಹೀಗಾಗುತ್ತಿದೆ. ಯಾಕೆ ಕರ್ನಾಟಕ ರಾಜ್ಯದಲ್ಲಿ ಈ ಥರ ತುಷ್ಟೀಕರಣ ಆಗುತ್ತಿದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಡಿ.ಕೆ.ಶಿವಕುಮಾರ್ ಅವರ ಮೈ ಬ್ರದರರ್ಸ್ ಪಾಲಿಸಿಯಿಂದ ಹೀಗಾಗುತ್ತಿದೆ. ಹಾಗಿದ್ದರೆ ಹಿಂದೂಗಳು ನಿಮ್ಮ ಸಹೋದರರಲ್ಲವೇ ಎಂದು ಕೇಳಿದರು. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದಾಗ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಗಮನ ಸೆಳೆದರು.
ಮೇಲುಕೋಟೆ, ಮಂಡ್ಯ, ಶಿವಮೊಗ್ಗ, ಮಂಗಳೂರು, ಕಲಬುರ್ಗಿ, ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪದೇಪದೇ ಗಲಾಟೆಗಳಾಗುತ್ತಿವೆ. ಈ ಸರಕಾರ ಸಂಪೂರ್ಣವಾಗಿ ತುಷ್ಟೀಕರಣ ಮಾಡುತ್ತಿದೆ ಎಂದು ಆರೋಪಿಸಿದರು. ಸರಕಾರವು ತುಷ್ಟೀಕರಣ ನೀತಿಯನ್ನು ಬಿಡಬೇಕೆಂದು ಅವರು ತಿಳಿಸಿದರು.
ರಾಜ್ಯದಲ್ಲಿ ವಿಪರೀತ ತುಷ್ಟೀಕರಣದ ಕಾರಣದಿಂದ ರಾಜ್ಯ ಸರಕಾರವು ಗಲಭೆ ಮಾಡಿದ ಇವರ ಮೇಲೂ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ಷೇಪಿಸಿದರು. ಬಾಗಲಕೋಟೆಯಲ್ಲಿ ಶಿವಾಜಿ ಜಯಂತಿಯನ್ನು ಚೆನ್ನಾಗಿ ಮಾಡಿ, ಶಿವಾಜಿ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ್ದರು. ಒಂದು ಮಸೀದಿ ಹತ್ತಿರ ಬಂದಾಗ ಭಾವಚಿತ್ರ ಮತ್ತು ಮೆರವಣಿಗೆಯಲ್ಲಿ ತೆರಳುತ್ತಿದ್ದ ಹಿಂದೂಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಮಸೀದಿ ಭಾಗದಿಂದ ಕಲ್ಲುಗಳು ಹಿಂದೂ ಕಾರ್ಯಕರ್ತರ ಮೇಲೆ ಬಿದ್ದಿವೆ ಎಂದು ಟೀಕಿಸಿದರು.
ಕಲ್ಲೆಸೆತದಿಂದ ಎಸ್ಪಿ ತಲೆಗೂ ಏಟು ಬಿದ್ದಿದೆ. ಇಬ್ಬರು ಕಾನ್‍ಸ್ಟೇಬಲ್‍ಗಳಿಗೆ ಗಾಯಗಳಾಗಿವೆ. ಕಲ್ಲು, ತೂರಿದ್ದಾರೆ. ಚಪ್ಪಲಿ-ಶೂ ಎಸೆದಿದ್ದಾರೆ. ಆದರೆ, ಯಾರನ್ನೂ ಬಂಧಿಸಿರಲಿಲ್ಲ. ಹಿಂದೂ ಕಾರ್ಯಕರ್ತರು ಒತ್ತಡ ಹಾಕಿದ ಬಳಿಕ 8 ಜನರನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಶಿವಾಜಿ ಜಯಂತಿ ಮಾಡಬಾರದೇ? ಇದೇನು ಪಾಕಿಸ್ತಾನವೇ ಎಂದು ಪ್ರಶ್ನಿಸಿದರು. ಯಾವುದೇ ಮಸೀದಿ ಮುಂಭಾಗದಿಂದ ಹಿಂದೂ ಮೆರವಣಿಗೆ, ಗಣಪತಿ ಉತ್ಸವಗಳು, ಶಿವಾಜಿ ಜಯಂತಿ ಮೆರವಣಿಗೆ, ಕನಕದಾಸರ ಭಾವಚಿತ್ರದ ಮೆರವಣಿಗೆ, ಬಸವೇಶ್ವರರ ಭಾವಚಿತ್ರದ ಮೆರವಣಿಗೆಯನ್ನು ರಸ್ತೆಯಲ್ಲಿ, ಮಸೀದಿ ಮುಂದೆ ಮಾಡಬಾರದೇ ಎಂದು ಕೇಳಿದರು.

ರಾಜ್ಯದ ಸರಕಾರಿ ಆಸ್ಪತ್ರೆಗಳು ನರಕಸದೃಶ..
ಉಚಿತ ಚಿಕಿತ್ಸೆಗಾಗಿ ಮಧ್ಯಮ ವರ್ಗ- ಬಡವರೇ ತೆರಳುವ ರಾಜ್ಯದ ಸರಕಾರಿ ಆಸ್ಪತ್ರೆಗಳು ನರಕಸದೃಶವಾಗಿವೆ ಎಂದು ಅವರು ಟೀಕಿಸಿದರು. ಕೋಲಾರ, ದಾವಣಗೆರೆ, ಚಿತ್ರದುರ್ಗ, ಗುಲ್ಬರ್ಗ, ಹಾಸನಗಳಲ್ಲಿ ಸ್ಕ್ಯಾನಿಂಗ್ ನಡೆಯುತ್ತಿಲ್ಲ. 140 ಕೋಟಿ ರೂಪಾಯಿಯನ್ನು ಸ್ಕ್ಯಾನಿಂಗ್ ಸಂಬಂಧ ಸರಕಾರ ಕೊಡಬೇಕಿದ್ದು, ಕೊಟ್ಟಿಲ್ಲ. ಇದರಿಂದ ಎಂಆರ್.ಐ ಸ್ಕ್ಯಾನ್ ಮಾಡುತ್ತಿಲ್ಲ. 95 ಇಮೇಲ್ ಕಳಿಸಿದರೂ ಹಣ ನೀಡಿಲ್ಲ ಎಂದು ದೂರಿದರು. ಹಣಕಾಸು ಸಚಿವರಾದ ಮುಖ್ಯಮಂತ್ರಿಗಳೇ, ಸರಕಾರದ ಬಳಿ 140 ಕೋಟಿ ರೂಪಾಯಿ ಇಲ್ಲವೇ ಎಂದು ಕೇಳಿದರು.
ಇದರಿಂದ ಬಡ, ಮಧ್ಯಮ ವರ್ಗದ ಜನರು ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು. ಹಣ ಕೇಳದೇ ಸ್ಕ್ಯಾನಿಂಗ್‍ಗೆ ಅವಕಾಶ ಮಾಡಿಕೊಡಿ ಎಂದರು. ಜನೌಷಧಿ ಕೇಂದ್ರಗಳನ್ನೂ ರದ್ದು ಮಾಡಿದ್ದಾರೆ. ಸುಮಾರು 800 ಔಷಧಿ ಬದಲು 150 ಔಷಧಿಗಳಷ್ಟೇ ಇವೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇದು ಬಡವರನ್ನು ಸಾಯಿಸುವ ಸರಕಾರ ಎಂದು ಟೀಕಿಸಿದರು.

ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ಸರಿಯಲ್ಲ..
ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ನಿರ್ಬಂಧ ವಿಧಿಸಿದ ಕ್ರಮವನ್ನು ಅವರು ಖಂಡಿಸಿದರು. ಮಾಧ್ಯಮಗಳಿಗೇ ಹೀಗಾದರೆ ಸಾಮಾನ್ಯರ ಪಾಡೇನು ಎಂದು ಕೇಳಿದರು. ಈ ಕ್ರಮವನ್ನು ರದ್ದು ಮಾಡಿ. ಹಿಂದಿನ ಕ್ರಮವನ್ನೇ ಮುಂದುವರೆಸಿ ಎಂದು ಮನವಿ ಮಾಡಿದರು.
ರಾಜ್ಯ ವಕ್ತಾರ ಡಾ. ರಂಗಪ್ಪ ಅವರು ಮಾತನಾಡಿ, ಸರಕಾರವು ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ನೀತಿ ಅನುಸರಿಸುತ್ತಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ- ಕುಟುಂಬ ಕಲ್ಯಾಣ ಇಲಾಖೆಗಳ ವೇತನದಲ್ಲಿ ತುಂಬ ವ್ಯತ್ಯಾಸ ಇದೆ. ಇದನ್ನು ಸರಿಮಾಡಬೇಕೆಂದು ವೈದ್ಯರು ಕೇಳಿದರೂ ಪ್ರಯೋಜನವಾಗಿಲ್ಲ ಎಂದು ಗಮನಕ್ಕೆ ತಂದರು.
ರಾಜ್ಯ ಉಪಾಧ್ಯಕ್ಷ ಹರತಾಳ್ ಹಾಲಪ್ಪ, ರಾಜ್ಯ ವಕ್ತಾರ ಡಾ. ರಂಗಪ್ಪ ಅವರು ಉಪಸ್ಥಿತರಿದ್ದರು.

Prev Post ಆಡಳಿತ ಪಕ್ಷದ ಶಾಸಕರೇ ಕಾಂಗ್ರೆಸ್ ಸರಕಾರದ ವಿರುದ್ಧ ದಂಗೆ ಏಳುವ ಪರಿಸ್ಥಿತಿ: ವಿಜಯೇಂದ್ರ
Next Post ಬೆಂಗಳೂರು ಭೇಟಿಗಾಗಿ ಆಗಮಿಸಿದ್ದ ನೆದರ್‌ಲ್ಯಾಂಡ್ಸ್ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಡಿಕ್ ಶೂಫ್ ಅವರಿಗೆ ಆತ್ಮೀಯ ಬೀಳ್ಕೊಡುಗೆ