ಕಾಂಗ್ರೆಸ್ ಸರಕಾರದಿಂದ ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ: ಬಿ.ವೈ.ವಿಜಯೇಂದ್ರ
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜದ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
ಅವರು ಇಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿ ಸಂಖ್ಯೆ 160ರಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದರು. ಕಾಂಗ್ರೆಸ್ಸಿನವರು ಯಾವ ನೈತಿಕತೆ ಇಟ್ಟುಕೊಂಡು ಭ್ರಷ್ಟಾಚಾರದ ಕುರಿತು ಮಾತನಾಡುತ್ತಾರೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರದ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಪ್ರಿಯಾಂಕ್ ಖರ್ಗೆಯವರು ಮಾತನಾಡುತ್ತಿದ್ದಾರೆ. ಭ್ರಷ್ಟಾಚಾರದ ಕುರಿತು ಮಾತನಾಡುವ ಯೋಗ್ಯತೆ ಕಾಂಗ್ರೆಸ್ಸಿನವರಿಗೆ ಇದೆಯೇ ಎಂದು ಕೇಳಿದರು.
ಇದೇ ಸರಕಾರದ ಅವಧಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ನಡೆಯಿತು. ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡರಲ್ಲವೇ? ಸಿದ್ದರಾಮಯ್ಯನವರ ಸಂಪುಟದ ಸಚಿವರು ರಾಜೀನಾಮೆ ಕೊಟ್ಟರಲ್ಲವೇ? ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ನೂರಾರು ಕೋಟಿ ಹಣವನ್ನು ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ಚುನಾವಣೆಗೆ ಬಳಸಲಿಲ್ಲವೇ ಹಾಗಿದ್ದರೆ? ಎಂದು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು. ಹಾಗಿದ್ದರೆ ಪ್ರಿಯಾಂಕ್ ಖರ್ಗೆಯವರು ಇಲ್ಲವೆಂದು ಹೇಳಲಿ ಎಂದು ಸವಾಲೆಸೆದರು.
ಇದು ಭೂತದ ಬಾಯಲ್ಲಿ ಭಗವದ್ಗೀತೆ. ನೀವು ನಮಗೆ ಉಪದೇಶ ನೀಡುತ್ತೀರಾ ಹಾಗಿದ್ದರೆ ಎಂದು ಕೇಳಿದರು. ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಆಂಜನೇಯ ಅವರು ಸಚಿವರಾಗಿದ್ದಾಗ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಎಲ್ಲೋ ಒಂದು ಕಡೆ ಕಾಂಗ್ರೆಸ್ ಸರಕಾರವು ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಅವರು ಆರೋಪಿಸಿದರು. ಇದರ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ನುಡಿದರು. ಬಂಜಾರ ಸಮಾಜದ ಬಗ್ಗೆ ತಾತ್ಸಾರ, ಅಲಕ್ಷ್ಯ ತೋರುವ ಇವರು ಅಹಿಂದ ಹೆಸರು ಹೇಳಿಕೊಂಡು ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರಕಾರವು ಅಧಿಕಾರಕ್ಕೆ ಬಂದಾಗಿನಿಂದ ಬಂಜಾರ ಸಮಾಜವನ್ನು ಟಾರ್ಗೆಟ್ ಮಾಡುತ್ತಿರುವುದು ಜಗಜ್ಜಾಹೀರಾಗಿದೆ. ಈ ಸಮಾಜವು ಕಳೆದ 30-40 ವರ್ಷಗಳಿಂದ ಬಿಜೆಪಿ ಜೊತೆ ಗಟ್ಟಿಯಾಗಿ ಗುರುತಿಸಿಕೊಂಡಿದೆ. ಬಿಜೆಪಿಯನ್ನು ರಾಜ್ಯದಲ್ಲಿ ಶೇ 100ಕ್ಕೆ ನೂರು ಬೆಂಬಲಿಸುತ್ತಿದೆ. ಇದರ ಪರಿಣಾಮವಾಗಿ ಸಿದ್ದರಾಮಯ್ಯನವರ ಸರಕಾರದಿಂದ ಕಳೆದ ಎರಡೂವರೆ ವರ್ಷಗಳಲ್ಲಿ ಈ ಸಮಾಜಕ್ಕೆ ಅನ್ಯಾಯವೂ ಆಗಿದೆ. ಮತ್ತೊಂದು ಕಡೆ ಈ ಸಮಾಜ ಟಾರ್ಗೆಟ್ ಆಗುತ್ತಿದೆ ಎಂದು ವಿಶ್ಲೇಷಿಸಿದರು.
ಸೂರಗುಂಡನಕೊಪ್ಪದಲ್ಲಿ ಈಚೆಗೆ ಕಾರ್ಯಕ್ರಮ ನಡೆಯುತ್ತಿತ್ತು. ಉಪ ಮುಖ್ಯಮಂತ್ರಿ ಶಿವಕುಮಾರ್ ಅವರು ಆ ಕಾರ್ಯಕ್ರಮಕ್ಕೆ ಬಂದಿದ್ದರು. ಅಲ್ಲಿದ್ದ ಬಂಜಾರ ಸಮಾಜದ ಯುವಕರು ಸಹಜವಾಗಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ತಮ್ಮ ನ್ಯಾಯಯುತ ಬೇಡಿಕೆ ಮುಂದಿಟ್ಟಿದ್ದಾರೆ. ಇದ್ಯಾವುದಕ್ಕೂ ಉತ್ತರ ಕೊಡದೇ ಶಿವಕುಮಾರ್ ಅವರು ಓಡಿಹೋಗಿದ್ದನ್ನು ನೋಡಿದ್ದೇವೆ. ಆ ಬಂಜಾರ ಸಮಾಜದ ಯುವಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದನ್ನೂ ನೋಡಿದ್ದೇವೆ ಎಂದು ಗಮನ ಸೆಳೆದರು.
ಚಂದ್ರು ಲಮಾಣಿಯವರ ವಿಚಾರ ಕೋರ್ಟಿನಲ್ಲಿದ್ದು, ಅದರ ಬಗ್ಗೆ ಹೆಚ್ಚೇನೂ ಹೇಳಲು ಹೋಗುವುದಿಲ್ಲ ಎಂದರು. ಆಡಿಯೋ ಲೀಕ್ ಆಗಿದೆ. ಏನೇನು ಚರ್ಚೆ ಆಗಿದೆ? ಯಾವ ರೀತಿ ರಾಜಕೀಯವಾಗಿ ಟಾರ್ಗೆಟ್ ಆಗಿದ್ದಾರೆ; ಇವೆಲ್ಲವೂ ಬಹಿರಂಗ ಆಗಿದೆ ಎಂದು ತಿಳಿಸಿದರು.
ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ ಹೆಚ್ಚು ಅನುದಾನ ಕೊಡಿ
ಸಿದ್ದರಾಮಯ್ಯನವರನ್ನು ಯಾರೋ ಅವರ ಪಕ್ಷದಲ್ಲೇ ಕಾಲೆಳೆಯುತ್ತಿದ್ದು, ಅವರಿಗೆ ಹರಿಹಾಯ್ದಿರಬೇಕು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು. ಕುರಿ ಕಾಯುವ ಸಮುದಾಯದವರು ರಾಜ್ಯದ ಮುಖ್ಯಮಂತ್ರಿ ಆಗಿರುವುದು ಸಂತೋಷದ ವಿಚಾರ. ಸಿದ್ದರಾಮಯ್ಯನವರು ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿ ಸ್ಥಾನ ಪಡೆದುಕೊಂಡಿದ್ದಾರೆ. ಯಡಿಯೂರಪ್ಪ ಅವರು ಬಿಜೆಪಿ ಮುಖ್ಯಮಂತ್ರಿ ಆಗಿದ್ದಾಗ ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ 550 ಕೋಟಿ ಅನುದಾನ ನೀಡಿದ್ದರು. ಈ ಬಜೆಟ್‍ನಲ್ಲಾದರೂ, ಹಿಂದುಳಿದ ಸಮುದಾಯ, ಪರಿಶಿಷ್ಟ ಜಾತಿ, ಪಂಗಡದವರಿಗೆ ಕನಿಷ್ಠ 2500- 3 ಸಾವಿರ ಕೋಟಿ ಅನುದಾನ ಕೊಡಬೇಕು ಎಂದು ಆ ಸಮುದಾಯಗಳ ಪರವಾಗಿ ಹಕ್ಕೊತ್ತಾಯ ಮುಂದಿಟ್ಟರು.
ಅಷ್ಟೊಂದು ದಿವಾಳಿ ಆಗಿದೆಯೇ ರಾಜ್ಯ ಸರಕಾರ?
ಕುರಿಗಳ ಆಕಸ್ಮಿಕ ಸಾವಿನ ಸಂಬಂಧ 48 ಕೋಟಿಯನ್ನು ಅನುಗ್ರಹ ಯೋಜನೆಯಡಿ ಇವತ್ತಿಗೂ ಬಾಕಿ ಉಳಿಸಿಕೊಂಡಿದ್ದಾರೆ. ಅಷ್ಟೊಂದು ದಿವಾಳಿ ಆಗಿದೆಯೇ ರಾಜ್ಯ ಸರಕಾರ? ಖಜಾನೆ ಖಾಲಿ ಆಗಿದೆಯೇ? ಎಂದು ಕೇಳಿದರು. ಒಂದು ತಿಂಗಳಿಂದ ನಾವು ತಿಳಿಸಿದರೂ ಆ ಬಡ ಕುಟುಂಬಗಳಿಗೆ ಹಣ ಬಿಡುಗಡೆ ಮಾಡಿಲ್ಲವೇಕೆ ಮುಖ್ಯಮಂತ್ರಿಗಳೇ ಎಂದು ಕೇಳಿದರು. 90 ಸಾವಿರ ಕುರಿ, ಮೇಕೆಗಳು ಸತ್ತಿವೆ. ಕೇವಲ 30 ಸಾವಿರ ಕುರಿ, ಮೇಕೆಗಳಿಗೆ ಪರಿಹಾರ ಕೊಟ್ಟಿದ್ದಾರೆ ಎಂದು ವಿವರಿಸಿದರು.
ತಮ್ಮ ಸಿಎಂ ಕುರ್ಚಿ ಅಲ್ಲಾಡುವಾಗ ಸಮಾಜ ನೆನಪಾಗುತ್ತದೆ. ಸಮಾಜದ ಬಡವರು ತೊಂದರೆಯಲ್ಲಿದ್ದಾರೆ. ಅವರ ಸಮಸ್ಯೆಗೆ ಪರಿಹಾರ ನೀಡಲು ನೀವು ತಯಾರಿಲ್ಲ ಎಂದು ಆಕ್ಷೇಪಿಸಿದರು. ಇದನ್ನು ತಮ್ಮ ಸಮಾಜ ಪ್ರಶ್ನಿಸುತ್ತಿದೆ ಎಂದು ಹೇಳಿದರು.




