ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು: ಎಂ ಬಿ ಪಾಟೀಲ

Bangalore:

Font size:

ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು: ಎಂ ಬಿ ಪಾಟೀಲ

*ಗೆಜೆಟ್ ನಲ್ಲಿನ ತಪ್ಪಿನಿಂದಾಗಿ ಗೊಂದಲ*

ಬೆಂಗಳೂರು: ಗೆಜೆಟ್‌ನಲ್ಲಿ ತಪ್ಪಾಗಿ ನಮೂದಿಸಿದ್ದರಿಂದಾಗಿ ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ 1,200 ಎಕರೆ ವಕ್ಫ್ ಆಸ್ತಿ ಎನ್ನುವ ಗೊಂದಲ ಸೃಷ್ಟಿಯಾಗಿದೆಯಷ್ಟೆ. ಇಲ್ಲಿ 11 ಎಕರೆ ಮಾತ್ರ ವಕ್ಫ್ ಗೆ ಸೇರಿದ್ದು, ಇದರಲ್ಲಿ 10 ಎಕರೆ 14 ಗುಂಟೆಯಲ್ಲಿ ಖಬರಸ್ತಾನವಿದೆ. ಉಳಿದ 24 ಗುಂಟೆಯಲ್ಲಿ ಈದ್ಗಾ, ಮಸೀದಿ ಇತ್ಯಾದಿ ಕಟ್ಟಡಗಳಿವೆ. ಉಳಿದ ಜಮೀನೆಲ್ಲ ರೈತರಿಗೆ ಸೇರಿದೆ. ಇದನ್ನು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ ಎಂದು ಆ ಜಿಲ್ಲೆಯ ಉಸ್ತುವಾರಿಯೂ ಆಗಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಸ್ಪಷ್ಟಪಡಿಸಿದ್ದಾರೆ.

ಶನಿವಾರ ಇಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, `ವಿಜಯಪುರ ಜಿಲ್ಲೆಯಲ್ಲಿ 1974, 1978 ಮತ್ತು 2016ರಲ್ಲಿ ವಕ್ಫ್ ಆಸ್ತಿಗಳ ಅಧಿಸೂಚನೆ ಹೊರಬಿದ್ದಿದೆ. ವಕ್ಫ್ ಆಸ್ತಿ ಇರುವುದು ವಿಜಯಪುರ ನಗರದ ವ್ಯಾಪ್ತಿಯಲ್ಲಿರುವ ಮಹಾಲಬಾಗಾಯತದಲ್ಲಿ. ಆದರೆ ಗೆಜೆಟ್ ನ ಬ್ರ್ಯಾಕೆಟ್ ಒಳಗೆ ಹೊನವಾಡ ಎಂದು ಬರೆದು ಬಿಟ್ಟಿದ್ದಾರೆ. ಈ ವಿಷಯವನ್ನು ರೈತರು ನಮ್ಮ ಗಮನಕ್ಕೆ ತಂದ ಕೂಡಲೇ ಅ.19ರಂದು ಜಿಲ್ಲಾಧಿಕಾರಿ, ತಹಸೀಲ್ದಾರ್ ಎಲ್ಲರನ್ನೂ ಕರೆದು, ಸಭೆ ನಡೆಸಿ, ಸೂಕ್ತ ನಿರ್ದೇಶನ ಕೊಟ್ಟಿದ್ದೇನೆ. ಈ ವಿಚಾರದಲ್ಲಿ ಬಿಜೆಪಿ ನಾಯಕರಾದ ತೇಜಸ್ವಿ ಸೂರ್ಯ ಅವರಾಗಲಿ, ಯತ್ನಾಳ್ ಅವರಾಗಲಿ ರಾಜಕೀಯ ಮಾಡಬೇಕಾಗಿಲ್ಲ. ರೈತರ ಒಂದಿಂಚು ಕೂಡ ವಕ್ಫ್ ಆಸ್ತಿ ಆಗಲು‌ ಬಿಡಲ್ಲ’ ಎಂದರು.

ಹೊನವಾಡ ಗ್ರಾಮವು ನಾನು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲೇ ಇದೆ. ಇಲ್ಲಿನ ಹತ್ತು ಸರ್ವೇ ನಂಬರುಗಳಲ್ಲಿರುವ 11 ಎಕರೆ ಮಾತ್ರ ವಕ್ಫ್ ಆಸ್ತಿಯಷ್ಟೆ. ಗೆಜೆಟ್ ನಲ್ಲಿನ‌ ತಪ್ಪು ಗಳನ್ನು ವಕ್ಫ್ ನವರೂ ಕೂಡ ಒಪ್ಪಿ, ಅದನ್ನು ತೆಗೆದಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಪ್ಪು ದಾಖಲಾತಿಯಿಂದ ಹೀಗಾಗಿದೆ ಎಂದು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ ಕೂಡ ಸ್ಪಷ್ಟಪಡಿಸಿದ್ದಾರೆ. ದುರದೃಷ್ಟವೆಂದರೆ, ಈ ಲೋಪ ಇಷ್ಟೊಂದು ತಡವಾಗಿ ಗೊತ್ತಾಗಿದೆ. ಯಾವುದು ನಿಯಮಾನುಸಾರ ವಕ್ಫ್ ಆಸ್ತಿಯೋ ಅದಷ್ಟೇ ಅವರಿಗೆ ಸೇರುತ್ತದೆ. ರೈತರಾಗಲಿ, ಖಾಸಗಿ ಮಾಲೀಕರಾಗಲಿ ಈ ಬಗ್ಗೆ ಗೊಂದಲಕ್ಕೆ ಒಳಗಾಗಬೇಕಾಗಿಲ್ಲ. ಈ ಸಂಬಂಧ ನಾನು ಅಧಿಕಾರಿಗಳೊಂದಿಗೆ ಸದ್ಯದಲ್ಲೇ ಮತ್ತೊಂದು ಸಭೆ ನಡೆಸುತ್ತೇನೆ ಎಂದು ಅವರು ಹೇಳಿದ್ದಾರೆ.

ವಿಜಯಪುರ ಜಿಲ್ಲೆಯ ಎರಡು ಕಡೆಗಳಲ್ಲಿ ಮಾತ್ರ ವಕ್ಫ್ ಆಸ್ತಿ ಸಂಬಂಧ ಸ್ವಲ್ಪ ಗೊಂದಲವಿದೆಯಷ್ಟೆ. ಈ ಪೈಕಿ ಒಂದು ಜಮೀನು ಬಬಲೇಶ್ವರ ತಾಲ್ಲೂಕಿನಲ್ಲಿದ್ದು, ಅದು ಜಹಗೀರದಾರರ ಮನೆತನಕ್ಕೆ ಸೇರಿದ್ದಾಗಿದೆ. ಇನ್ನೊಂದು ವಿಜಯಪುರ ನಗರ ವ್ಯಾಪ್ತಿಯಲ್ಲಿರುವ 70 ಎಕರೆಗೆ ಸಂಬಂಧಿಸಿದ್ದು, ಇದು ಹೈಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿದೆ. ಇದನ್ನು ಹೊರತುಪಡಿಸಿದರೆ ಜಿಲ್ಲೆಯಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಅವರು ವಿವರಿಸಿದ್ದಾರೆ.

Prev Post ಸುವರ್ಣ ಭಾರತೀ ನಮ: ಶಿವಾಯ ಸ್ತೋತ್ರಮಹಾಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಪರಾಷ್ಟ್ರಪತಿ ಜಗದೀಪ್ ಧನಕರ್ ಹಾಗೂ ಡಾ. ಸುದೇಶ್ ಧನಕರ್*
Next Post ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಶಮನ; ಅ. 30 ರಂದು ನಾಮಪತ್ರ ಹಿಂಪಡೆಯಲಿರುವ ಖಾದ್ರಿ: ಡಿಸಿಎಂ ಡಿ. ಕೆ. ಶಿವಕುಮಾರ್