ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಶಮನ; ಅ. 30 ರಂದು ನಾಮಪತ್ರ ಹಿಂಪಡೆಯಲಿರುವ ಖಾದ್ರಿ: ಡಿಸಿಎಂ ಡಿ. ಕೆ. ಶಿವಕುಮಾರ್

Bangalore:

Font size:

ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಶಮನ; ಅ. 30 ರಂದು ನಾಮಪತ್ರ ಹಿಂಪಡೆಯಲಿರುವ ಖಾದ್ರಿ: ಡಿಸಿಎಂ ಡಿ. ಕೆ. ಶಿವಕುಮಾರ್

ಬೆಂಗಳೂರು, ಅ.26-

"ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಯ್ಯದ್ ಅಜ್ಜಂಪೀರ್ ಖಾದ್ರಿ ಅವರು ಅ.30 ಬುಧವಾರದಂದು ನಾಮಪತ್ರವನ್ನು ಹಿಂಪಡೆಯಲಿದ್ದಾರೆ. ಅವರ ಅರ್ಹತೆಗೆ ತಕ್ಕಂತೆ ಪಕ್ಷವು ಅಧಿಕಾರ ನೀಡುತ್ತದೆ" ಎಂದು ಡಿಸಿಎಂ ಡಿ‌.ಕೆ.ಶಿವಕುಮಾರ್ ಅವರು ಹೇಳಿದರು.

ಸದಾಶಿವನಗರದ ತಮ್ಮ ನಿವಾಸಕ್ಕೆ ಆಗಮಿಸಿದ ಶಿಗ್ಗಾಂವಿ ವಿಧಾನಸಭೆ ಕ್ಷೇತ್ರ ಉಪಚುನಾವಣೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಜ್ಜಂಪೀರ್ ಖಾದ್ರಿ ಅವರ ಜತೆ ಮಾತುಕತೆ ನಡೆಸಿದ ನಂತರ ಶಿವಕುಮಾರ್ ಅವರು ಮಾಧ್ಯಮಗೋಷ್ಠಿ ಉದ್ದೇಶಿಸಿ ಶನಿವಾರ ಮಾತನಾಡಿದರು.

"ಖಾದ್ರಿ ಅವರು ನಮ್ಮ ಜೊತೆಯಲ್ಲಿದ್ದಾರೆ. ಅವರ ದುಃಖ ದುಮ್ಮಾನಗಳನ್ನು ನಮ್ಮ ಬಳಿ ಚರ್ಚೆ ಮಾಡಿದ್ದಾರೆ. ಚುನಾವಣಾ ನೀತಿ ಸಂಹಿತೆ ಇರುವ ಕಾರಣಕ್ಕೆ ಅವರಿಗೆ ನೀಡಿರುವ ಭರವಸೆಗಳನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಖಾದ್ರಿ ಅವರ ಬಳಿ ಗೌಪ್ಯವಾಗಿ ಮಾತನಾಡಿದ್ದೇನೆ" ಎಂದು ಹೇಳಿದರು.

"ಖಾದ್ರಿ ಅವರಿಗೆ ಕಳೆದ ಚುನಾವಣೆಯಲ್ಲಿಯೇ ಟಿಕೆಟ್ ನೀಡಬೇಕಾಗಿತ್ತು, ಕಾರಣಾಂತರಗಳಿಂದ ಯಾಸಿರ್ ಪಠಾಣ್ ಅವರಿಗೆ ನೀಡಲಾಗಿತ್ತು. ಇವರ ತ್ಯಾಗವನ್ನು ಪಕ್ಷ ಮರೆಯುವುದಿಲ್ಲ. ಅವರಿಗೆ ಉತ್ತಮ ಸ್ಥಾನವನ್ನು ನೀಡುವುದಾಗಿ ಹಿಂದೆಯೂ ಹೇಳಿದ್ದೆವು, ಈಗಲೂ ಹಾಗೂ ಮುಂದಕ್ಕೂ ಹೇಳುತ್ತೇವೆ" ಎಂದರು.

*ಖಾದ್ರಿ ಪ್ರಾಮಾಣಿಕ ವ್ಯಕ್ತಿ*

"ಅತ್ಯಂತ ಪ್ರಾಮಾಣಿಕ ವ್ಯಕ್ತಿಯಾದ ಖಾದ್ರಿ ಅವರು ಜಾತ್ಯಾತೀತ ತತ್ವಗಳಿಗೆ ಹಾಗೂ ಕಾಂಗ್ರೆಸ್‌ ಪಕ್ಷದ ನಿಲುವಿಗೆ ಬದ್ಧರಾಗಿದ್ದಾರೆ. ಸಚಿವರಾದ ಜಮೀರ್ ಅವರು, ಎಂಎಲ್ ಸಿ ನಜೀರ್ ಅಹ್ಮದ್ ಅವರು, ಬಿಡಿಎ ಅಧ್ಯಕ್ಷರಾದ ಹ್ಯಾರಿಸ್ ಅವರು ಹಾಗೂ ಇಸ್ಮಾಯಿಲ್ ತಮಟಗಾರ ಅವರೆಲ್ಲಾ ಸೇರಿ ಖಾದ್ರಿ ಅವರ ಮನವೊಲಿಸಿದ್ದಾರೆ. ಶನಿವಾರ (ಇಂದು) ಬೆಳಿಗ್ಗೆ ಮುಖ್ಯಮಂತ್ರಿಗಳ ಬಳಿಯೂ ಟಿಕೆಟ್ ಹಿಂಪಡೆಯುವ ವಿಚಾರವಾಗಿ ಚರ್ಚೆ ನಡೆಸಿದ್ದರು" ಎಂದು ಹೇಳಿದರು.

*ಪಕ್ಷದ ಗೆಲುವಿಗೆ ಒಗ್ಗಟ್ಟಿನಿಂದ ಕೆಲಸ*

"ಭಾನುವಾರ (ನಾಳೆ) ಶಿಗ್ಗಾಂವಿ ಕ್ಷೇತ್ರದ ಮುಖಂಡರ ಬಳಿ ಚರ್ಚೆ ಮಾಡಲಾಗುವುದು. ಎಲ್ಲರೂ ಪಕ್ಷದ ಗೆಲುವಿಗೆ ಒಗ್ಗಟ್ಟಾಗಿ ಕೆಲಸ ಮಾಡಲಿದ್ದಾರೆ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುತ್ತಾರೆ. ಖಾದ್ರಿ ಅವರ ತ್ಯಾಗವನ್ನು ಕಾಂಗ್ರೆಸ್ ಪಕ್ಷ ಮರೆಯುವುದಿಲ್ಲ, ಗುರುತಿಸುತ್ತದೆ" ಎಂದು ಪುನರುಚ್ಚರಿಸಿದರು.

"ಖಾದ್ರಿ ಅವರು ಜನತಾದಳದಿಂದ ಒಮ್ಮೆ ಶಾಸಕರಾಗಿ ಆಯ್ಕೆಯಾಗಿದ್ದರು. ಈ ಹಿಂದೆ ಸೋನಿಯಾ ಗಾಂಧಿ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲಾಗಿತ್ತು" ಎಂದರು

*ಕಾರ್ಯಕರ್ತರ ಜೊತೆ ಮಾತುಕತೆ*

ಖಾದ್ರಿ ಅವರು ಸಂದಾನಕ್ಕೆ ಈ ಹಿಂದೆ ಒಪ್ಪಿರಲಿಲ್ಲ ಎಂದು ಕೇಳಿದಾಗ, " ಕ್ಷೇತ್ರದ ಎಲ್ಲಾ ಕಾರ್ಯಕರ್ತರ ಅಭಿಪ್ರಾಯ ತೆಗೆದುಕೊಳ್ಳಬೇಕಲ್ಲವೇ? ಈಗ ಯಾವುದೇ ಬಂಡಾಯವಿಲ್ಲ. ಅವರ ಅಭಿಮಾನಿಗಳ ಜೊತೆ ಮಾತನಾಡಬೇಕಿದೆ. ಅವರನ್ನೆಲ್ಲಾ ಬೆಂಗಳೂರಿಗೆ ಕರೆಸಿ ಮಾತನಾಡಲಾಗುವುದು. ಮೂರು ಕ್ಷೇತ್ರಗಳ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಒಮ್ಮತದಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ." ಎಂದರು.

ಖಾದ್ರಿ ಅವರಿಗೆ ಯಾವ ಭರವಸೆಗಳನ್ನು ನೀಡಲಾಗಿದೆ ಎಂದು ಕೇಳಿದಾಗ, "ಖಾದ್ರಿ ಅವರು ಕ್ಷೇತ್ರದ ಮತದಾರರು. ಈಗ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ, ಅವರ ಸಮ್ಮುಖದಲ್ಲಿ ಬಹಿರಂಗಗೊಳಿಸಲು ಆಗುವುದಿಲ್ಲ. ಅವರ ಗೌರವಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸ್ಥಾನಮಾನ ನೀಡಲಾಗುವುದು" ಎಂದರು.

*ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ*

ನಂತರ ಮಾತನಾಡಿದ ಮಾಜಿ ಶಾಸಕ, ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಸೈಯದ್ ಅಜ್ಜಂಪಿರ್ ಖಾದ್ರಿ ಅವರು, "ಈ ಬಾರಿ ಟಿಕೆಟ್ ನೀಡಿದರೆ ನಾನೇ ಗೆಲ್ಲುತ್ತೇನೆ, ಟಿಕೆಟ್ ನೀಡಿ ಎಂದು ಉಭಯ ನಾಯಕರ ಬಳಿಯೂ ನಾನು ಮತ್ತೊಮ್ಮೆ ಮನವಿ ಮಾಡಿದೆ. ಇದು ನಮ್ಮ ತೀರ್ಮಾನವಲ್ಲ, ಹೈಕಮಾಂಡ್ ತೀರ್ಮಾನ ಎಂದು ಹೇಳಿದರು. ನಾನು ಪಕ್ಷದ ತೀರ್ಮಾನವನ್ನು ಕ್ಷೇತ್ರದ ಕಾರ್ಯಕರ್ತರ ಬಳಿಗೆ ತೆಗೆದುಕೊಂಡು ಹೋಗುತ್ತೇನೆ. ಅವರ ಬಳಿ ಚರ್ಚೆ ಮಾಡುತ್ತೇವೆ. ಕಾರ್ಯಕರ್ತರಿಗೆ ಸಿಎಂ ಹಾಗೂ ಡಿಸಿಎಂ ಅವರನ್ನು ಭಾನುವಾರ (ನಾಳೆ) ಭೇಟಿ ಮಾಡಿಸಲಾಗುವುದು. ನಿಮ್ಮ ಆದೇಶವನ್ನು ಪಾಲಿಸಲಾಗುವುದು" ಎಂದು ಹೇಳಿದರು.

"ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ನಾನು ಐದು ಚುನಾವಣೆಗಳನ್ನು ಎದುರಿಸಿದ್ದು, ನಾಲ್ಕು ಬಾರಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದೇನೆ. ಪ್ರತಿ ಬಾರಿಯೂ ಅತ್ಯಂತ ಕಡಿಮೆ ಅಂತರಗಳ ಮತದಿಂದ ಸೋತಿದ್ದೇನೆ. ಒಂದು ಚುನಾವಣೆಯನ್ನು 787 ಮತಗಳ ಅಂತರದಿಂದ ಸೋತಿದ್ದೇನೆ" ಎಂದರು.

*ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು*

"ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟಿದ್ದೇನೆ. ಮೂರು ಬಾರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಡಿಮೆ ಅಂತರದಿಂದ ಸೋತಿದ್ದೇನೆ. ಮೊದಲ ಬಾರಿಗೆ ಜನತಾದಳದಿಂದ ಸಿದ್ದರಾಮಯ್ಯ ಅವರು ನನಗೆ ಮೊದಲ ಬಾರಿಗೆ ಟಿಕೆಟ್ ನೀಡಿದ್ದರು. ಪ್ರಸ್ತುತ ನನಗೆ ವ್ಯಕ್ತಿಗಿಂತ, ಕಾಂಗ್ರೆಸ್ ಪಕ್ಷವೇ ಮುಖ್ಯ. ಕ್ಷೇತ್ರದಲ್ಲಿ ಬಿಜೆಪಿ ಸೋಲಬೇಕು, ಕಾಂಗ್ರೆಸ್ ಗೆಲ್ಲಬೇಕು" ಎಂದರು.

ಶನಿವಾರ (ಇಂದು) ಬೆಳಿಗ್ಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದಾಗ, ಖಾದ್ರಿ ನೀನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ನಿನಗೆ ರಕ್ಷಣೆಯನ್ನು ಕೊಡುವುದು ನನ್ನ ಹಾಗೂ ಕೆಪಿಸಿಸಿ ಅಧ್ಯಕ್ಷರ ಜವಾಬ್ದಾರಿ. ಪಕ್ಷವನ್ನು ಗೆಲ್ಲಿಸುವ ಹೊಣೆ ಜಮೀರ್, ನಜೀರ್, ಹ್ಯಾರಿಸ್ ಅವರು ಸೇರಿದಂತೆ ಎಲ್ಲರ ಮೇಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು" ಎಂದರು.

*ಶಿವಕುಮಾರ್ 4.5 ಕೋಟಿ ಅನುದಾನ ಕೊಡಿಸಿದ್ದರು*

ನಾನು ಪರಂಪರೆಯಿಂದ ಬಂದವನು. ನುಡಿದಂತೆ ನಡೆಯುತ್ತೇನೆ. ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವಾಗ ನಿಮ್ಮ ಕ್ಷೇತ್ರ ಜವಾಬ್ದಾರಿ ನನ್ನ ಮೇಲಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಈ ಹಿಂದೆ ಹೇಳಿದ್ದರು. ಅದೇ ರೀತಿ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಗಳಾಗಿದ್ದ ಸಮಯದಲ್ಲಿ ಸವಣೂರಿನ ಮೋತಿ ತಲಾಬ್ ಅಭಿವೃದ್ಧಿಗೆ 4.5 ಕೋಟಿ ಅನುದಾನ ಕೊಟ್ಟವರು ಶಿವಕುಮಾರ್ ಎನ್ನುವುದನ್ನು ಮರೆತಿಲ್ಲ" ಎಂದು ಹೇಳಿದರು.

Prev Post ವಕ್ಫ್ ಆಸ್ತಿ ಬರೀ 11 ಎಕರೆ, ಮಿಕ್ಕಿದ್ದು ಹೊನವಾಡ ಗ್ರಾಮದ ರೈತರದು: ಎಂ ಬಿ ಪಾಟೀಲ
Next Post ಶಿಗ್ಗಾಂವಿ ಕ್ಷೇತ್ರದಲ್ಲಿ ಬಂಡಾಯ ಶಮನ; ಅ. 30 ರಂದು ನಾಮಪತ್ರ ಹಿಂಪಡೆಯಲಿರುವ ಖಾದ್ರಿ: ಡಿಸಿಎಂ ಡಿ. ಕೆ. ಶಿವಕುಮಾರ್