ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ತುಳು ನಾಡಿನ ಶ್ರೀ ಕುಳೂರು ಸದಾಶಿವ ಶೆಟ್ಟಿ ಗೌಪ್ಯ ದಾನದ ತ್ರಿವಿಕ್ರಮ

Mangalore:

Font size:

ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ತುಳು ನಾಡಿನ ಶ್ರೀ ಕುಳೂರು ಸದಾಶಿವ ಶೆಟ್ಟಿ ಗೌಪ್ಯ ದಾನದ ತ್ರಿವಿಕ್ರಮ

From Jayaram

ಸುವರ್ಣ ಕರ್ನಾಟಕ ಪ್ರಶಸ್ತಿಗೆ ಆಯ್ಕೆಯಾದ ತುಳು ನಾಡಿನ ಶ್ರೀ ಕುಳೂರು ಸದಾಶಿವ ಶೆಟ್ಟಿ ಗೌಪ್ಯ ದಾನದ ತ್ರಿವಿಕ್ರಮ. ದಾನವನ್ನು ಸಂಭ್ರಮವನ್ನಾಗಿಸದೆ ಬಲಗೈಯಲ್ಲಿ‌ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬ ನಿಲುವಿನಲ್ಲಿ ಅವರು ಮಾಡಿದ ದಾನಗಳು ಅನೇಕ ಬದುಕುಗಳನ್ನು ಅರಳಿಸಿವೆ.

ಪ್ಯಾಂಟ್ ಹೊಲಿಸಲಾಗದ ಬಡತನದಲ್ಲಿ ಮಂಗಳೂರಿಗೆ ಬಂದು ಸಂತ ಅಲೋಶಿಯಸ್ ಕಾಲೇಜು ಸೇರಿದ್ದ ಕುಳೂರು ಸದಾಶಿವ ಶೆಟ್ಟಿ ಕಾಲೇಜು ದಿನಗಳಲ್ಲಿ ಪಂಚೆಯುಟ್ಟುಕೊಂಡೇ ತರಗತಿಗಳಿಗೆ ಹೋದವರು. ಆಗ ಅವರ ಕಷ್ತಕ್ಕೆ ಸಹಾಯ ಹಸ್ತವಾಗಿ ದೊರಕಿದ್ದು ನ್ಯಾಶನಲ್ ಲೋನ್ ಸ್ಕಾಲರ್ ಶಿಪ್. ಅದರ ಮೂಲಕ ಪಠ್ಯ ಪುಸ್ತಕದ ಖರ್ಚು, ಮಂಗಳೂರಿನಲ್ಲಿ ಹಾಸ್ಟೆಲ್ ನಲ್ಲಿ ಉಳಿದುಕೊಳ್ಳುವ ಖರ್ಚು ನಿಭಾಯಿಸಬೇಕಾಗಿತ್ತು.

ಟೆಸ್ಟ್ ಟ್ಯೂಬ್ ಗಳಲ್ಲಿ ರಾಸಾಯನಿಕಗಳು ಪರಸ್ಪರ ಕರಗಿ ಉಂಟು ಮಾಡುತ್ತಿದ್ದ ರಾಸಾಯನಿಕ ಕ್ರಿಯೆ, ಅವುಗಳಲ್ಲಾಗುತ್ತಿದ್ದ ವರ್ಣ ಬದಲಾವಣೆ, ಸಂಯೋಜನೆ ಮೂಲಕ ಉಂಟಾಗುತ್ತಿದ್ದ ಹೊಸ ರಾಸಾಯನಿಕಗಳ ಬಗ್ಗೆ ಭಾರೀ ಕುತೂಹಲ ಹೊಂದಿದ್ದ ಸದಾಶಿವ ಶೆಟ್ಟಿ ಪದವಿ ತರಗತಿಯಲ್ಲಿದ್ದಾಗಲೇ ತಾನು ರಾಸಾಯನಿಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯಬೇಕು ಎಂಬ ಸಂಕಲ್ಪ ಮಾಡಿದ್ದರು. ಆ ಸಂಕಲ್ಪ ಈಡೇರಿದ್ದು ಮೈಸೂರು ವಿ.ವಿ.ಯ ಮಾನಸಗಂಗೋತ್ರಿಯಲ್ಲಿ ರಾಸಾಯನಿಕ ವಿಜ್ಞಾನ ವಿಭಾಗದಲ್ಲಿ ಎಂ.ಎಸ್ಸಿ.ಗೆ ಸೇರ್ಪಡೆಗೊಂಡಾಗ. ಕಲಿಕೆಯ ಜೀವನದುದ್ದಕ್ಕೂ ಅವರು ಫಸ್ಟ್ ಕ್ಲಾಸ್ . ಮೆರಿಟ್ ಸದಾ ಬೆನ್ನಿಗಿತ್ತು. ಮೈಸೂರಿನಲ್ಲಿ ಕುಕ್ಕನ ಹಳ್ಳಿ ಕೆರೆಯ ದಂಡೆಯ ಮೇಲೆ ನಡೆಯುತ್ತಾ ಗಂಗೋತ್ರಿಗೆ ಸಾಗುತ್ತಿದ್ದ ಆ ದಿನಗಳ ನೆನಪು ಅವರಲ್ಲಿ ಇಂದಿಗೂ ಸ್ಥಿರವಾಗಿದೆ.

ಎಂ.ಎಸ್ಸಿ. ಬಳಿಕ, ಆ ಕಾಲಘಟ್ಟದಲ್ಲಿ ರಾಸಾಯನಿಕ ಉದ್ಯಮದ ಕೇಂದ್ರವಾಗಿದ್ದ ಮುಂಬಯಿಗೆ ಉದ್ಯೋಗಕ್ಕಾಗಿ ವಲಸೆ. ಆರು ತಿಂಗಳು ಅಲೆದಾಟದ ಬಳಿಕ ಉದ್ಯೋಗ. ಒಟ್ಟು ಹದಿನೆಂಟು ವರ್ಷಗಳ ಉದ್ಯೋಗದ ಬಳಿಕ ಉದ್ಯಮ ಸ್ಥಾಪನೆಯತ್ತ ಮನ. ಸ್ನೇಹಿತರ ಜೊತೆಗೂಡಿ ಐದು ಲಕ್ಷ ರೂಪಾಯಿ ಬಂಡವಾಳದೊಂದಿಗೆ ಉದ್ಯಮ ಸ್ಥಾಪಿಸಲು ಹುಡುಕಾಟ. ಆಗ ಆಯಾಚಿತವಾಗಿ ಸಿಕ್ಕಿದ್ದೇ ಗುಜರಾತಿನ “ ಹೇರಂಭಾ” ಇಂಡಸ್ಟ್ರೀಸ್ ಲಿಮಿಟೆಡ್. ಈ ಸಂಸ್ಥೆಯವರು ಕೈಗಾರಿಕಾ ಪ್ರಾಂಗಣದಲ್ಲಿ ನಿವೇಶನ ಖರೀದಿಸಿದ್ದರು, ಆದರೆ ಉದ್ಯಮ ಆರಂಭಕ್ಕೆ ಬೇಕಾದ ಬಂಡವಾಳವಿಲ್ಲದೆ ಬ್ಯಾಂಕ್ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು. ಸಾಲ ಮಂಜೂರಾಗಿರಲಿಲ್ಲ. ಹೀಗಾಗಿ ಸ್ಯಾಮ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಹೆಸರಿಟ್ಟುಕೊಂಡು ಸಂಸ್ಥೆ ತೆರೆಯಲು ಹೊರಟಿದ್ದವರು ಗುಜರಾತಿನ ವಾಪಿಯಲ್ಲಿ ನಿವೇಶನ ಮಂಜೂರಾಗಿದ್ದ ಹೇರಂಭಾ ಕೆಮಿಕಲ್ ಪ್ರೈವೇಟ್ ಲಿಮಿಟೆಡ್ ಕೊಂಡುಕೊಳ್ಳಬೇಕಾಯಿತು.ಆ ದಿನಗಳನ್ನು ನೆನಪಿಸಿಕೊಳ್ಳುತ್ತಾ ಕುಳೂರು ಹೇಳುವುದುಂಟು “ಬ್ರಾಂಡ್ ಚೇಂಜ್ ಆಯಿತು”.

ಇಂದು ಅವರ ಉದ್ಯಮ ಹತ್ತು ಉತ್ಪಾದನಾ ಸ್ಥಾವರಗಳನ್ನು ಹೊಂದಿದೆ. ಕೃಷಿ ರಾಸಾಯನಿಕಗಳಿಂದ ಜೀವರಕ್ಷಕ ಔಷಧಿ ತಯಾರಿಕೆಯಲ್ಲಿ ಬಳಸುವ ಕಚ್ಛಾ ವಸ್ತುಗಳ ಉತ್ಪಾದನೆಯತ್ತ ಗಮನ ಹರಿಸಿದ ಶ್ರೀ ಕುಳೂರು ಸದಾಶಿವ ಶೆಟ್ಟಿ ಇಂದು ಜಾಗತಿಕ ಔಷಧೋದ್ಯಮದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಸಸ್ಯಗಳನ್ನು ರೋಗಗಳಿಂದ ರಕ್ಷಿಸುವ ಉದ್ಯಮದಿಂದ ಅವರು ಮಾನವನನ್ನು ಕಾಡುವ ರೋಗಗಳಿಗೆ ಔಷಧಿ ತಯಾರಿಸುವ ರಾಸಾಯನಿಕಗಳ ಉದ್ಯಮಕ್ಕೆ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಮೂಲಕ ಸಸ್ಯ ಸಂರಕ್ಷಣೆ ಮತ್ತು ಪೋಷಣೆ ಜೊತೆ ಮಾನವ ಆರೋಗ್ಯ ರಕ್ಷಣೆಯನ್ನು ಕೈಗೊಳ್ಳುವ “ಟೆಕ್ನೋಕ್ರಾಟ್” ಆಗಿದ್ದಾರೆ. ಒಂದರ ನಾಶದಿಂದ ಇನ್ನೊಂದರ ಉಳಿವು ಎಂಬ ಸಿದ್ಧಾಂತಕ್ಕೆ ಬದಲಾಗಿ ಅವರ ಉದ್ಯಮ ಸಾರುವ ಸಂಯೋಜಿತ ಸಂದೇಶವೆಂದರೆ “ಸಸ್ಯಗಳ ಪೋಷಣೆಯಿಂದ ಮಾನವನ ಪೋಷಣೆ” ಎಂಬುದು.

ಕರ್ನಾಟಕ –ಕೇರಳದ ಗಡಿನಾಡಿನ ಸೌಲಭ್ಯವಂಚಿತ ಊರಿನಿಂದ ನಾಲ್ಕು ಕಿಲೋಮೀಟರ್ ನಡೆದು ಪ್ರಾಥಮಿಕ ಶಾಲೆಗೆ ಹೋಗಿ, ಅಲ್ಲಿಂದ ಅಜಮಾಸು ಅರವತ್ತು ಕಿಲೋಮೀಟರ್ ದೂರದ ಮಂಗಳೂರಿಗೆ ಬಂದು ಪಂಚೆಯಲ್ಲಿ ಪದವಿ ಮುಗಿಸಿ ಮಾನಸಗಂಗೋತ್ರಿಗೆ ತೆರಳಿ ಎಂ.ಎಸ್ಸಿ. ಮುಗಿಸಿ ಹುಟ್ಟೂರಿನಿಂದ ಸಾವಿರ ಕಿಲೋಮೀಟರ್ ದೂರದ ಮುಂಬಯಿಗೆ ತೆರಳಿ ಕಷ್ಟಗಳಿಗೆ ಸವಾಲು ಹಾಕಿದ ಕುಳೂರು ಮೊದಲು ಉದ್ಯೋಗ ಹಿಡಿದು ಬಳಿಕ ಉದ್ಯಮಿಯಾಗಿ ಬೆಳೆದ ಪರಿ ಜೀವನದಲ್ಲಿ ಸಾಧನೆಗೆ ಪರಿಶ್ರಮವೇ ಮೊದಲ ಮೆಟ್ಟಿಲು ಎಂಬುದಕ್ಕೆ ಒಂದು ದೃಷ್ಟಾಂತ.

ಉದ್ಯಮಿಯಾದ ಬಳಿಕ ಅವರು ಆಧುನಿಕ ಸಮಾಜದ ಸಮಸ್ಯೆಗಳನ್ನು ನಿಕಟವಾಗಿ ಗಮನಿಸಿದರು. ಇದರ ಫಲವೇ ಮಕ್ಕಳಿಗೆ ಸೀಳ್ದುಟಿ ಚಿಕಿತ್ಸೆಗೆ ಬೃಹತ್ ಮೊತ್ತದ ನೆರವು ಮತ್ತು ಅದಕ್ಕಾಗಿ ಆಧುನಿಕ ಆಸ್ಪತ್ರೆಗಳ ಆಯ್ಕೆ. ಇದರ ಮೇಲ್ವಿಚಾರಣೆಗೆ ಖುದ್ದು ಕುಳೂರು ಸದಾಶಿವ ಶೆಟ್ಟಿ ಅವರೇ ಹೋಗುತ್ತಿದ್ದರು. “ಇಂತಹ ಮಕ್ಕಳು ಅನುಭವಿಸುವ ಕೀಳರಿಮೆ ನಿವಾರಣೆಯಾಗಬೇಕು, ಅವರು ಸಮಾಜದಲ್ಲಿ ಶಿಕ್ಷಣ ಪಡೆದು ಮುಂದೆ ಬರಬೇಕು. ವೈದ್ಯ ಲೋಕ ಅವರ ಬವಣೆಯನ್ನು ಪರಿಹರಿಸಬೇಕು” ಎಂಬ ನಾಲ್ಕಾರು ವಾಕ್ಯಗಳ ಮಾತುಗಳೇ ಸಮಕಾಲೀನ ಸಮಾಜದ ಬಗ್ಗೆ ಅವರ ಕಳಕಳಿಯನ್ನು ಪ್ರತಿಬಿಂಬಿಸುತ್ತವೆ. ಗುಜರಾತಿನ ಬರ ಪೀಡಿತ, ಕುಡಿಯುವ ನೀರಿನ ಕೊರತೆ ಇರುವ ಪ್ರದೇಶಗಳ, ಮಹಾರಾಷ್ಟ್ರದ ಜಲಕ್ಷಾಮ ಪೀಡಿತ ಪ್ರದೇಶಗಳ ಜನವಸತಿ ಪ್ರದೇಶಗಳಲ್ಲಿ ಶುದ್ಧ ನೀರೊದಗಿಸಲು ಅವರ ಸಂಸ್ಥೆಯಿಂದ ನೆರವು ನೀಡಲಾಗಿದೆ.

ಗುಜರಾತ್, ಮಹಾರಾಷ್ಟ್ರ, ಕರ್ನಾಟಕದ ಕರಾವಳಿ ಮತ್ತು ಕೇರಳದ ಕಾಸರಗೋಡು ಭಾಗಗಳಲ್ಲಿ ಕಲಾವಿದರಿಗೆ, ದೇವಾಲಯಗಳಿಗೆ ದೊಡ್ಡ ಮೊತ್ತದ ದಾನ ಅವರಿಂದ ಸಂದಿದೆ. ಸದ್ಯ ಕ್ಯಾನ್ಸರ್ ನಂತಹ ದೊಡ್ಡ ಮೊತ್ತದ ಔಷಧೋಪಚಾರ ಬೇಡುವ ರೋಗಗಳಿಂದ ಪೀಡಿತರಾಗಿರುವ ರೋಗಿಗಳಿಗೆ ಔಷಧೋಪಚಾರ ನಡೆಸುವುದಕ್ಕಾಗಿ ಮಂಗಳೂರಿನಲ್ಲಿ ಆಸ್ಪತ್ರೆಗಳು ಮತ್ತು ವಿಮಾ ಏಜೆನ್ಸಿ ಗಳು ಹಾಗು ಕುಳೂರು ಅವರ ನಡುವೆ ಮಾತುಕತೆ ನಡೆಯುತ್ತಿದೆ. ಖಾಸಗಿ ವಲಯದ ಈ ಆರೋಗ್ಯ ಚಿಕಿತ್ಸಾ ಉಪಕ್ರಮ ೨೦೨೫ರಲ್ಲಿ ಅನುಷ್ಠಾನಕ್ಕೆ ಬರಲಿದೆ.

ಶಿಕ್ಷಣದ ಅವಕಾಶಗಳನ್ನು ಹೆಚ್ಚಿಸಬೇಕು, ಎಲ್ಲ ಮಕ್ಕಳೂ ಕಲಿಕೆಯಲ್ಲಿ ಆಸಕ್ತಿ ಹೊಂದಿರುತ್ತಾರೆ ಎಂದು ಹೇಳಲಾಗದು. ಆದ್ದರಿಂದ ಶಾಲೆ ಅವರ ಪ್ರತಿಭೆಗಳನ್ನು ಅರಳಿಸುವ ಕೇಂದ್ರವಾಗಬೇಕು ಎಂಬ ಅಭಿಪ್ರಾಯ ಹೊಂದಿರುವ ಕುಳೂರು ಕಾಸರಗೋಡಿನಲ್ಲಿ ಶಾಲೆಗಳಿಗೆ ಬಸ್ಸುಗಳನ್ನು ಕೊಡುಗೆಯಾಗಿ ನೀಡಿದ್ದಾರೆ, ರಂಗಮಂದಿರಗಳನ್ನು ಕಟ್ಟಿಸಿದ್ದಾರೆ. ಇದರಿಂದ ಯಕ್ಷಗಾನದ ಚೆಂಡೆ ಕಾಸರಗೋಡಿನ ಶಾಲೆಗಳಲ್ಲೂ ಅನುರಣಿಸುತ್ತಿದೆ. ಸರಕಾರಿ ಶಾಲಾ ಕಟ್ಟಡ ದುರಸ್ತಿ, ಅಲ್ಲಿ ಮೂಲಸೌಕರ್ಯ ಒದಗಣೆಗೆ ದೊಡ್ಡ ಮೊತ್ತದ ದೇಣಿಗೆ ಅವರಿಂದ ಸಂದಿದೆ ಮತ್ತು ಈಗಲೂ ಸಲ್ಲುತ್ತಿದೆ.

Prev Post ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾಗಿ ನ್ಯಾ. ಅಶೋಕ್ ಬಿ.ಹಿಂಚಗೇರಿಯವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಇಂದು ಅಧಿಕಾರ ಸ್ವೀಕಾರ ಮಾಡಿದರು.
Next Post ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆ ಬೋಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ