ಬಬಲೇಶ್ವರ, ತಿಕೋಟಾ ಪಟ್ಟಣಗಳಿಗೆ 135 ಎಲ್‌ಪಿಸಿಡಿ ನೀರು

BANGALURU:

Font size:

ಮುದ್ದೇಬಿಹಾಳ, ಸಿಂದಗಿ, ಬಸವನಬಾಗೇವಾಡಿ ಪಟ್ಟಣಗಳಿಗೆ ನೀರು ಯೋಜನೆ ಚಡಚಣ, ಆಲಮೇಲ, ಮುದ್ದೇಬಿಹಾಳ, ನಾಲತವಾಡ, ಸಿಂದಗಿ, ತಾಳಿಕೋಟೆ ಯೋಜನೆಗಳ ತ್ವರಿತ ಅನುಷ್ಠಾನಕ್ಕೆ ಸೂಚನೆ

ವಿಜಯಪುರ ನಗರಕ್ಕೆ ಕುಡಿಯುವ ನೀರು ಸರಬರಾಜು
₹52 ಕೋಟಿ ವೆಚ್ಚದಲ್ಲಿ 10 ಕಿ.ಮೀ ಕೊಳವೆ ಮಾರ್ಗ ನಿರ್ಮಾಣಕ್ಕೆ ಒಪ್ಪಿಗೆ

ಬೆಂಗಳೂರು:
ವಿಜಯಪುರ ನಗರಕ್ಕೆ ಅಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ಅದನ್ನು ₹52 ಕೋಟಿ ವೆಚ್ಚದಲ್ಲಿ ಬದಲಿಸಿ, ಹೊಸದಾಗಿ ಎಂ.ಎಸ್‌. ಪೈಪುಗಳನ್ನು ಅಳವಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಬೃಹತ್ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಇಲ್ಲಿ ತಿಳಿಸಿದರು.

ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧ ತಾಲ್ಲೂಕು ಕೇಂದ್ರಗಳಲ್ಲಿನ ಕುಡಿಯುವ ನೀರು ಸರಬರಾಜು ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಅವರು ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

ನಲವತ್ಮೂರು ಕಿ.ಮೀ ದೂರದ ಕೊಲ್ಹಾರದಿಂದ ವಿಜಯಪುರಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಲ್ಲಿ ಸುಮಾರು 10.8 ಕಿ.ಮೀ ಉದ್ದದ ಪಿ.ಎಸ್‌.ಸಿ ಕೊಳವೆ ಮಾರ್ಗ ಸಂಪೂರ್ಣ ಹಾಳಾಗಿದ್ದು, ಇದರಿಂದ ನೀರಿನ ಸೋರಿಕೆ ವಿಪರೀತ ಹೆಚ್ಚಾಗಿದೆ. ಇದನ್ನು ಬದಲಿಸಲು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದರೂ ವಿವಿಧ ಕಾರಣಗಳಿಂದಾಗಿ ಆಗಿರಲಿಲ್ಲ. ಆದರೆ, ಈಗ ಅದಕ್ಕೆ ಅಂತಿಮ ಮುದ್ರೆ ಒತ್ತಿದ್ದು, ಹಣ ನೀಡಲು ಹಣಕಾಸು ಇಲಾಖೆ ಒಪ್ಪಿಗೆ ಸೂಚಿಸಿದೆ ಎಂದು ಅವರು ವಿವರಿಸಿದರು.

ಆರಂಭದಲ್ಲಿ ಈ ಕೊಳವೆ ಮಾರ್ಗ ಬದಲಿಸಲು ₹32 ಕೋಟಿ ವೆಚ್ಚಕ್ಕೆ ಅಂದಾಜು ಮಾಡಲಾಗಿತ್ತು. ಕಾಮಗಾರಿ ವಿಳಂಬವಾದ ಕಾರಣ ಅಂದಾಜು ವೆಚ್ಚ ಹೆಚ್ಚಾಗಿ ₹52 ಕೋಟಿಗೆ ಏರಿದೆ. ಈಗ ಪರಿಷ್ಕೃತ ಅಂದಾಜು ವೆಚ್ಚಕ್ಕೂ ಹಣಕಾಸು ಇಲಾಖೆ ಒಪ್ಪಿಗೆ ನೀಡಿದ್ದು, ಆ ಪ್ರಕಾರ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
ಇದರ ಜತೆಗೆ ವಿಜಯಪುರ ನಗರಕ್ಕೆ 3ನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆಯ ಭಾಗವಾಗಿ ಆಲಮಟ್ಟಿ ಹಿನ್ನೀರಿನ ರಂಭಾಪುರಿ ಬಳಿ ಜಾಕ್ವೆಲ್ ನಿರ್ಮಾಣ ಅಗತ್ಯವಿದೆ. ಇದು 111 ದಶಲಕ್ಷ ಲೀಟರ್ ನೀರು ಶುದ್ಧೀಕರಣ ಸಾಮರ್ಥ್ಯ ಹೊಂದಿರಲಿದೆ. ಈ ಸಂಬಂಧ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು 1.36 ಕೋಟಿ ರೂಪಾಯಿ ಒದಗಿಸಲಾಗುವುದು. ತಕ್ಷಣವೇ ಈ ಕಾಮಗಾರಿಯನ್ನೂ ಆರಂಭಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿಜಯಪುರ ನಗರದಲ್ಲಿ ಕೇಂದ್ರ ಸರಕಾರದ ಅಮೃತ್ 2.0 ಯೋಜನೆಯ ಕಾಮಗಾರಿ ವಿಳಂಬವಾಗಿದೆ. ಕಾಮಗಾರಿಯ ಗುತ್ತಿಗೆ ಪಡೆದಿರುವ ಜೈನ್ ಇರಿಗೇಶನ್ ಸಂಸ್ಥೆಗೆ ನೋಟಿಸ್ ನೀಡಲಾಗಿದೆ. ಸಂಸ್ಥೆಯು ಡಿಸೆಂಬರ್ ವೇಳೆಗೆ ಕಾಮಗಾರಿ ಮುಗಿಸುವುದಾಗಿ ಒಪ್ಪಿಕೊಂಡಿದೆ. ಬಳಿಕ, ಬಾಕಿ ಇರುವ ₹17 ಕೋಟಿ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ಕಂಪನಿಯ ಪ್ರತಿನಿಧಿಗಳಿಗೆ ಸಭೆಯಲ್ಲಿ ತಿಳಿಸಿದರು.

ಬಬಲೇಶ್ವರ, ತಿಕೋಟಾ ಪಟ್ಟಣಗಳಿಗೆ 135 ಎಲ್‌ಪಿಸಿಡಿ ನೀರು:

ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೆ ಏರಿರುವ ವಿಜಯಪುರ ಜಿಲ್ಲೆಯ ಬಬಲೇಶ್ವರ ಮತ್ತು ತಿಕೋಟಾ ಪಟ್ಟಣಗಳ ಜನತೆಗೆ ಸದ್ಯ 55 ಎಲ್‌ಪಿಸಿಡಿ (ಒಬ್ಬ ವ್ಯಕ್ತಿಗೆ ದಿನಕ್ಕೆ 55 ಲೀಟರ್) ಕುಡಿಯುವ ನೀರು ಪೂರೈಸುತ್ತಿದ್ದು, ಅದನ್ನು 135 ಎಲ್‌ಪಿಸಿಡಿ ಗೆ ಹೆಚ್ಚಿಸುವ ಸಂಬಂಧ ಯೋಜನೆ ರೂಪಿಸಲಾಗುವುದು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜತೆ ಸೇರಿ ಇದನ್ನು ಮಾಡಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಈ ಎರಡೂ ಪಟ್ಟಣಗಳಿಗೆ 55 ಎಲ್‌ಪಿಸಿಡಿ ನೀರು ಸರಬರಾಜು ಆಗುತ್ತಿದೆ. ಸದ್ಯ ಈ ಎರಡೂ ಊರುಗಳು ಪಟ್ಟಣ ಪಂಚಾಯಿತಿಗಳಾಗಿರುವ ಕಾರಣ ಅದನ್ನು 135 ಎಲ್ಪಿಸಿಡಿಗೆ ಹೆಚ್ಚಿಸುತ್ತಿದ್ದು ಅಚ್ಚುಕಟ್ಟಾಗಿ ಯೋಜನೆ ಜಾರಿ ಮಾಡಬೇಕು ಎಂದರು.

ವಿಜಯಪುರ ಜಿಲ್ಲೆಯ ಚಡಚಣ, ಆಲಮೇಲ, ಮುದ್ದೇಬಿಹಾಳ, ನಾಲತವಾಡ, ಸಿಂದಗಿ ಮತ್ತು ತಾಳಿಕೋಟೆಗಳಲ್ಲಿ ಅಮೃತ್ 2.0 ಯೋಜನೆಯ ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಇದರ ಜೊತೆಗೆ ಮುದ್ದೇಬಿಹಾಳ (₹17.45 ಕೋಟಿ), ಸಿಂದಗಿ (₹26.53 ಕೋಟಿ) ಬಸವನಬಾಗೇವಾಡಿ (₹14.58 ಕೋಟಿ) ಪಟ್ಟಣಗಳ ನೀರು ಸರಬರಾಜು ಜಾಲ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದು, ಸದ್ಯದಲ್ಲೇ ಅಂತಿಮಗೊಳಿಸಲಾಗುವುದು. ತ್ವರಿತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸಚಿವರು ಕಟ್ಟಾಜ್ಞೆ ಮಾಡಿದರು.

ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆದ ಹಣಕಾಸು ಇಲಾಖೆ ಮುಖ್ಯಸ್ಥರಾದ ಎಲ್.ಕೆ.ಅತೀಕ್, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್‌, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಸೆಲ್ವಮಣಿ, ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ನಾಗೇಂದ್ರ ಪ್ರಸಾದ, ಮುಖ್ಯ ಎಂಜಿನಿಯರ್‌ ಚಂದ್ರಪ್ಪ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯಪುರ ಜಿಲ್ಲಾಧಿಕಾರಿ ಭೂಬಾಲನ್‌ ಮತ್ತು ಜಿಪಂ ಸಿಇಒ ರಿಷಿ ಆನಂದ ಅವರು ವರ್ಚುವಲ್‌ ಮೂಲಕ ಸಭೆಯಲ್ಲಿ ಹಾಜರಿದ್ದರು.

Prev Post ಐಪಿಎಸ್ ಅಧಿಕಾರಿ ಎಫ್ಐಆರ್ ಬಗ್ಗೆ HD ಕುಮಾರಸ್ವಾಮಿ ಕಿಡಿ
Next Post ಅಂಗವಿಕಲ ಸರ್ಕಾರಿ ನೌಕರರ ಸಮಸ್ಯೆ ಪರಿಹಾರಕ್ಕೆ ಸಿಎಸ್ ಶಾಲಿನಿ ರಜನೀಶ್ ಭರವಸೆ