ಮಂಗಳೂರು ವಿಶ್ವವಿದ್ಯಾಲಯ ಅವ್ಯವಸ್ಥೆ ವಿರುದ್ದ ಪ್ರತಿಭಟನೆ
From
Jayram Udupi
ಕೊಣಾಜೆ : ಮಂಗಳೂರು ವಿವಿ ವಿರುದ್ದ ವಿದ್ಯಾರ್ಥಿ ಸಮೂಹ ಸಿಡಿದೆದ್ದಿದೆ. ಅಂಕಪಟ್ಟಿಯ ಸಮಸ್ಯೆ, ಅವೈಜ್ಞಾನಿಕವಾಗಿ ಶುಲ್ಕಗಳ ಹೆಚ್ಚಳ, ಪರೀಕ್ಷಾ ಶುಲ್ಕ ಹೆಚ್ಚಳ, ಯುಯುಸಿಎಂಎಸ್ ನಲ್ಲಿರುವ ಗೊಂದಲಗಳು ಮತ್ತು ವಿಶ್ವವಿದ್ಯಾನಿಲಯದಲ್ಲಿರುವ ಹಲವು ಸಮಸ್ಯೆಗಳನ್ನು ಖಂಡಿಸಿ ಎಬಿವಿಪಿ ನೇತೃತ್ವದಲ್ಲಿ ಕೊಣಾಜೆಯ ಮಂಗಳಗಂಗೋತ್ರಿಯ ಆಡಳಿತ ಕಚೇರಿ ಎದುರುಗಡೆ ಬೃಹತ್ ಪ್ರತಿಭಟನೆ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಪ್ರತಿಭಟನೆಗೆ ಆಗಮಿಸಿದ ವಿದ್ಯಾರ್ಥಿಗಳು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳ ಕಚೇರಿಗೆ ಮುತ್ತಿಗೆ ಹಾಕಲು ಬಸ್ ಮೂಲಕ ತಂಡೋಪತಂಡವಾಗಿ ತೆರಳಿದರು. ವಿದ್ಯಾರ್ಥಿಗಳನ್ನು ವಿ.ವಿ. ಆಡಳಿತ ಕಚೇರಿ ಬಳಿ ಬ್ಯಾರಿಕೇಡ್ ಹಾಕಿ ತಡೆಹಿಡಿಯಲಾಗಿತ್ತು. ಆರಂಭದಲ್ಲಿ ಕಚೇರಿ ಎದುರಿನ ರಸ್ತೆಯಲ್ಲಿ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು ಬಳಿಕ ಬ್ಯಾರಿಕೇಡ್ ತಳ್ಳಿ ಒಳ ನುಗ್ಗಿದರು. ಆಡಳಿತ ಕಚೇರಿಯ ಒಳಗೆ ನುಗ್ಗಲು ಪ್ರಯತ್ನಿಸಿದ ಸಂದರ್ಭ ವಿದ್ಯಾರ್ಥಿಗಳು ಒಳ ಹೋಗದಂತೆ ಪೊಲೀಸರು ತಡೆಯೊಡ್ಡಿದರು. ಈ ನಡುವೆ ನೂಕಾಟ ತಳ್ಳಾಟಗಳ ಪರಿಣಾಮ ವಿ.ವಿ ಆಡಳಿತ ಕಚೇರಿಯ ಪ್ರವೇಶ ದ್ವಾರದ ಗಾಜು ಪುಡಿಯಾಗಿದೆ, ಓರ್ವ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಗೆ ಗಾಯವಾಗಿದೆ. ಓರ್ವ ವಿದ್ಯಾರ್ಥಿಯ ಕೈಗೂ ತಾಗಿದೆ. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ವಿವಿ ಉಪಕುಲಪತಿ ಪಿ.ಎಲ್.ಧರ್ಮ ಆಕ್ರೋಶ ವ್ಯಕ್ತಪಡಿಸಿ
ಕಾಲೇಜಿನ ಸ್ವತ್ತಿಗೆ ಹಾನಿ ಎಸಗಿರುವುದು ಒಳ್ಳೆಯ ನಡೆ ಅಲ್ಲ . ಇಂಥಹ ಪ್ರವೃತ್ತಿಯನ್ನು ನಾವು ಯಾವುದೇ ಕಾರಣಕ್ಕೆ ಸಹಿಸಲ್ಲ . ಶಾಂತಿಯುತ ಪ್ರತಿಭಟನೆ ಹೆಸರಲ್ಲಿ ಇಂತಹ ಕೃತ್ಯಗಳನ್ನು ಮಾಡಬೇಡಿ ಎಂದರು. ಇದಕ್ಕೆ ಸೊಪ್ಪು ಹಾಕದ ವಿದ್ಯಾರ್ಥಿಗಳು ನಮ್ಮ ಸಮಸ್ಯೆ ಬಗೆಹರಿಸಿ ಎಂದು ಆಗ್ರಹಿಸಿದರು.






