ಮಾನವ ಸಮಾಜ ಇರುವವರೆಗೂ ಶರಣ ಸಾಹಿತ್ಯ ಇರುತ್ತದೆ : ಬಸವರಾಜ ಬೊಮ್ಮಾಯಿ

BANGALURU:

Font size:

ಸಮಾಜದಲ್ಲಿನ ಗೊಂದಲಗಳಿಗೆ ಶರಣ ಸಾಹಿತ್ಯದಲ್ಲಿ ಸರಳ ಉತ್ತರ ಇದೆ‌: ಬಸವರಾಜ ಬೊಮ್ಮಾಯಿ

ಬೆಂಗಳೂರು: ಮಾನವ ಸಮಾಜ ಇರುವವರೆಗೂ ಶರಣ ಸಾಹಿತ್ಯ ಇರುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಇಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಮೈಸೂರು ಸಹಯೋಗ ರಮಣಶ್ರೀ ಪ್ರತಿಷ್ಠಾನ, ಬೆಂಗಳೂರು ಇವರ ವತಿಯಿಂದ ಹೊಟೇಲ್ ರಮಣಶ್ರೀ ಇಲ್ಲಿ ಆಯೋಜಿಸಿದ್ದ 19ನೇ ವರ್ಷದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಎಸ್. ಷಡಕ್ಷರಿ ಅವರ ಕ್ಷಣ ಹೊತ್ತು ಆಣಿಮುತ್ತು ಭಾಗ-14ರ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೇವಲ ಶರಣ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ. ಶರಣ ಸಾಹಿತ್ಯ ಕನ್ನಡ ಸಾಹಿತ್ಯಕ್ಕೆ ಕನ್ನಡಕ್ಜೆ ದೊಡ್ಡ ಶಕ್ತಿ ನೀಡಿದೆ. ಶರಣ ಸಾಹಿತ್ಯ ಮಾನವನ ಬದುಕೆ ಆಗಿದೆ. ಎಲ್ಲಿಯವರೆಗೆ ಮಾನವ ಬದುಕು ಈ ಭೂಮಿ ಮೇಲೆ ಇದೆ ಅಲ್ಲಿಯವರೆಗೆ ಶರಣ ಸಾಹಿತ್ಯ ಇರುತ್ತದೆ ಎಂದರು.
ಬಸವಣ್ಣನವರ ಚಿಂತನೆಯಲ್ಲಿ ಬದುಕಿನ ಎಲ್ಲ ಆಯಾಮಗಳಿಗೆ ಉತ್ತರ ಇದೆ. ಇತ್ರೀಚಿನ ದಿನಗಳಲ್ಲಿ ಗೊಂದಲ ಸೃಷ್ಡಿಸುವುದೆ ಒಂದು ಕಾಯಕವಾಗಿದೆ. ಇದಕ್ಕೆಲ್ಲ ಶರಣ ಸಾಹಿತ್ಯದಲ್ಲಿ ಸರಳ ಉತ್ತರ ಇದೆ‌. ಧರ್ಮದ ಬಗ್ಗೆ ದಯವಿಲ್ಲದ ಧರ್ಮ ಯಾವುದಯ್ಯ, ಬದುಕು ಹೇಗೆ ಇರಬೇಕು ಎಂದು ಹೇಳಲು ಕಳಬೇಡ ಕೊಲಬೇಡ ಹುಸಿಯನುಡಿಯಲು ಬೇಡ ವಚನ ಸಾಕ್ಷಿ. ಬಸವ ಸಾಹಿತ್ಯ ಈಗಲೂ ಪ್ರಸ್ತುತ ಇದೆ. ಅಸಮಾನತೆ ವಿರುದ್ದ, ಲಿಂಗಭೇದ, ಮೌಢದ್ಯ ವಿರುದ್ದ ಎಂಟುನೂರು ವರ್ಷಗಳ ಹಿಂದೆ ಹೋರಾಟ ಮಾಡಿದ್ದರು. ವಚನಗಳು ಈಗಲೂ ಪ್ರಸ್ತುತ ಇವೆ ಎಂದು ಒಪ್ಪಿಕೊಂಡರೆ, ಅಸಮಾನತೆ, ಲಿಂಗಭೇಧದ ಈಗಲೂ ಇದೆ ಎನ್ನುವುದನ್ನು ಒಪ್ಪಿಕೊಂಡಂತಾಗುತ್ತದೆ. ಹಾಗಾದರೆ, ಎಂಟುನೂರು ವರ್ಷಗಳು ನಾವು ಏನು ಮಾಡಿದ್ದೇವೆ. ಸಮಾಜದಲ್ಲಿ ಜ್ಞಾನದ ಬೆಳವಣಿಗೆ ಆಗಿದೆ. ಜ್ಞಾನದ ಜೊತೆಗೆ ಮೌಲ್ಯಗಳ ಬದಲಾವಣೆ ಆಗಬೇಕು. ನಾಗರೀಕತೆ ಹಾಗೂ ಸಂಸ್ಕೃತಿ ನಡುವೆ ವ್ಯತ್ಯಾಸ ಇದೆ. ನಮ್ಮಲ್ಲೇನಿದೆ ಅದು ನಾಗರಿಕತೆ, ನಾವು ಏನಾಗಿದ್ದೇವೆ ಅದು ಸಂಸ್ಕೃತಿ ಎಂದು ಒಬ್ಬ ಪಾಶ್ಚಿಮಾತ್ಯ ದೇಶದ ವಿದ್ವಾಂಸ ಹೇಳಿದ್ದಾನೆ. ನಾವೇನಾಗಿದ್ದೇವೆ ಅಂತ ತಿಳಿದುಕೊಂಡರೆ ಖಂಡಿತವಾಗಿಯೂ ಬಸವಣ್ಣ ಹೇಳಿದಂತೆ ನಡೆಯಬೇಕಾಗುತ್ತದೆ ಎಂದರು.
ಪ್ರತಿಯೊಬ್ಬ ವ್ಯಕ್ತಿಯ ಆತ್ಮ ಜಾಗೃತಿ, ಆತ್ಮವಿಮರ್ಶೆ ಮಾಡಿಕೊಳ್ಳುವ ಸಾಹಿತ್ಯ ಶರಣ ಸಾಹಿತ್ಯ. ಇದನ್ನು ಡಿಜಿಟಲ್ ಮಾಧ್ಯಮದಲ್ಲಿ ದೊಡ್ಡಪ್ರಮಾಣದಲ್ಲಿ ಪ್ರಚಾರ ಮಾಡಬೇಕಿದೆ. ಶರಣ ಸಾಹಿತ್ಯ ಪರಿಷತ್ ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತ ಆಗಬೇಕು. ಅದಕ್ಕೆ ಸರ್ಕಾರದ ಬೆಂಬಲ ನಿಲ್ಲಬೇಕು. ಕನ್ನಡ ಸಾಹಿತ್ಯ ಪರಿಷತ್ತು ಶರಣ ಸಾಹಿತ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರ ಮಾಡಬೇಕು. ಅದೂ ಕೂಡ ಕನ್ನಡ ಸಾಹಿತ್ಯದ ಒಂದು ಭಾಗವಾಗಿದೆ ಎಂದರು.
ದೇಶದಲ್ಲಿ ಆರ್ಥಿಕ ಅಸಮಾನತೆ ಕಡಿಮೆಯಾದರೆ ಸಮಾಜಿಕ ಅಸಮಾನತೆ ಕಡಿಮೆಯಾಗುತ್ತದೆ. ಸರ್ಕಾರ ನೂರು ಕೋಟಿ ಹಣ ಬಿಡುಗಡೆ ಮಾಡಿದರೆ ಆರ್ಥಿಕತೆ ಬೆಳೆಯುವುದಿಲ್ಲ. ಅದನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿ ರಸ್ತೆಗೆ ಡಾಂಬರ್ ಹಾಕಿ ಅವನು ಆರ್ಥಿಕ ಚಟುವಟಿಕೆಗೆ ಬಳಸಿದಾಗ ಆರ್ಥಿಕ ಬೆಳವಣಿಗೆ ಆಗುತ್ತದೆ. ಆದ್ದರಿಂದ ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಚರ್ಚೆ ಆಗಬೇಕು ಎಂದರು.
ಸಮಾಜದಲ್ಲಿ ಹಳೆಯ ಕಟ್ಟುಪಾಡುಗಳನ್ನು ಎದುರಿಸುವ ಸಾಮರ್ಥ್ಯ ಬೆಳೆಸುಕೊಳ್ಳಬೇಕು‌. ಕೆಳ ಸ್ಥರದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಸಾಮಾನ್ಯ ಜನರಲ್ಲಿ ಕಾಯಕ ನಿಷ್ಠೆ ಬಸವ ಪ್ರಜ್ಞೆ ಮೂಡುವಂತೆ ಮಾಡಬೇಕು. ಬಸವ ಜಯಂತಿಯನ್ನು ಎಸ್ಸಿ ಎಸ್ಟಿ ಸೇರಿದಂತೆ ಎಲ್ಲ ಸಮಾಜದವರು ಆಚರಿಸುವಂತೆ ಆಗಬೇಕು ಎಂದರು.
ಇಂದು ಕನಕದಾಸರ ಜಯಂತಿ ಕನಕದಾಸರು ಹೇಳಿದ್ದು ಬೇರೆಯಲ್ಲ, ಬಸವಣ್ಣ ಹೇಳಿದ್ದು ಬೇರೆಯಲ್ಲ, ಕನಕದಾಸರು ಮತ್ತು ಸರ್ವಜ್ಞರು ಅತ್ಯಂತ ಪರಿಣಾಮಕಾರಿಯಾಗಿ ನೇರವಾಗಿ ಕಠು ಸತ್ಯವನ್ನು ಹೇಳಿದ್ದಾರೆ. ಅವರ ಸಾಹಿತ್ಯ ಇಂದಿನ ಯುವ ಪೀಳಿಗೆಗೆ ತಲುಪುವಂತಾಗಬೇಕು. ದಾಸರಲ್ಲಿ ಶ್ರೇಷ್ಠ ದಾಸರು ಕನಕದಾಸರು, ಅವರು ತಮ್ಮ ದಾಯಾದಿಗಳ ಜೊತೆ ಯುದ್ದದಲ್ಲಿ ಸೋತು ಆ ಒಂದು ಸೋಲಿನಲ್ಲಿ ನಾನು ಗೆಲುವು ಕಂಡೆ, ನನ್ನನ್ನೇ ನಾನು ಗೆದ್ದುಕೊಂಡೆ ಎಂದು ಹೇಳುತ್ತಾರೆ. ಅಷ್ಟು ಶ್ರೇಷ್ಟ ಸಾಹಿತ್ಯ ಅವರದು. ಸಾಹಿತ್ಯ ಇಲ್ಲದೇ ಸಮಾಜ ಇಲ್ಲ, ಸಂಸ್ಜೃತಿಯೂ ಇಲ್ಲ ಎಂದರು.
ಎಸ್. ಷಡಕ್ಷರಿ ಅವರು ಎಪ್ಪತೈದು ವರ್ಷ ಸಾಂಸ್ಕೃತಿಕ ಬದುಕು ಬದುಕಿದ್ದಾರೆ. ಅವರು ಉದ್ಯಮಿಗಳಾಗಿದ್ದಾರೆ. ಅವರಿಗೆ ಸಾಹಿತ್ಯ ಕೃಷಿ ಅತ್ಯಂತ ತೃಪ್ತಿ ಕೊಡುವ ಕೆಲಸ, ಅವರ ಅಣಿಮುತ್ತು ಕ್ಷಣ ಹೊತ್ತು ಇವತ್ತಿನ ಬದುಕಿಗೆ ಉದಾಹರಣೆ ಕೊಡುವ ಮೂಲಕ ಸಮಸ್ಯೆಗೆ ಪರಿಹಾರ ನೀಡುವ ಕೆಲಸ ಮಾಡಿದ್ದಾರೆ. ಅವರು ಲಕ್ಷ್ಮೀ ಪುತ್ರರೂ ಹೌದು ಸರಸ್ವತಿ ಪುತ್ರರೂ ಹೌದು. ಲಕ್ಷ್ಮಿ ಸರಸ್ವತಿ ಒಬ್ಬರ ಬಳಿ ಇರುವುದು ಬಹಳ ಅಪರೂಪ, ಷಡಕ್ಷರಿ ಅಪರೂಪದ ವ್ಯಕ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಕಾರ್ಯಕ್ರಮದಲ್ಲಿ ಹಾಜರಿರುವುದು ಸಂತೋಷ, ಅವರ ವಿಚಾರಧಾರೆಗೆ ಹತ್ತಿರ, ಈ ಕಾರ್ಯಕ್ರಮ ಅವರ ಆಡಳಿತಕ್ಕೆ ಇಂದಿನ ಕಾರ್ಯಕ್ರಮ ಸ್ಪೂರ್ತಿ ಕೊಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಹಿರಿಯ ಸಾಹಿತಿ ಗೊ.ರು. ಚನ್ನಬಸಪ್ಪ, ಉದ್ಯಮಿ ಎಸ್. ಷಡಕ್ಷರಿ, ಪತ್ರಕರ್ತ ವಿಶ್ವೇಶ್ವರ ಭಟ್ ಹಾಗೂ ಮತ್ತಿತರರು ಹಾಜರಿದ್ದರು.

Prev Post ಶ್ರೀ ಕನಕದಾಸರ 537 ನೇ ಜಯಂತಿ ಕಾರ್ಯಕ್ರಮವನ್ನು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಬಿ.ಎಸ್.ಸುರೇಶ(ಬೈರತಿ) ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು
Next Post ತಾಲ್ಲೂಕುಗಳಲ್ಲಿ ಸೀಮೆಎಣ್ಣೆ ವಿತರಣೆ ನಿರ್ಬಂಧಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಅಖಿಲ ಕರ್ನಾಟಕ ಸೀಮೆಎಣ್ಣೆ ಸಗಟು ಡೀಲರ್‌ಗಳ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ವಜಾ ಮಾಡಿದೆ.