*ವಕ್ಫ್ ಮಂಡಳಿಯನ್ನು ರದ್ದು ಮಾಡಬೇಕು, ಈ ಅಧಿವೇಶನದಲ್ಲಿ ತೀವ್ರ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ
*ವಕ್ಫ್ ಮಂಡಳಿಯನ್ನು ರದ್ದು ಮಾಡಬೇಕು, ಈ ಅಧಿವೇಶನದಲ್ಲಿ ತೀವ್ರ ಹೋರಾಟ: ಪ್ರತಿಪಕ್ಷ ನಾಯಕ ಆರ್.ಅಶೋಕ
*ವಕ್ಫ್ ಎಂದರೆ ಕ್ಯಾನ್ಸರ್, ಇದನ್ನು ಬಿಟ್ಟರೆ ಎಲ್ಲೆಡೆ ಹಬ್ಬುತ್ತದೆ*
*ಚಿಕ್ಕಬಳ್ಳಾಪುರ, ನವೆಂಬರ್ 19, ಮಂಗಳವಾರ*
ಕ್ಯಾನ್ಸರ್‌ನಂತೆ ಹಬ್ಬುತ್ತಿರುವ ವಕ್ಫ್ ಮಂಡಳಿಯನ್ನು ರದ್ದು ಮಾಡಬೇಕು. ಇದಕ್ಕಾಗಿ ಅಧಿವೇಶನದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಸದ ಡಾ.ಕೆ.ಸುಧಾಕರ್ ಅವರೊಂದಿಗೆ ಆರ್.ಅಶೋಕ ಭಾಗವಹಿಸಿದರು. ಬಳಿಕ ಮಾತನಾಡಿದ ಅವರು, ಪ್ರತ್ಯೇಕ ದೇಶ ಬೇಕೆಂದು ಹೇಳಿದ್ದ ಮುಸ್ಲಿಮರಿಗೆ ದೇಶ ನೀಡಲಾಗಿದೆ. ಇಷ್ಟಾದರೂ ಈ ಭೂಮಿಯ ಮೇಲೆ ಮುಸ್ಲಿಮರಿಗೆ ಮೊದಲ ಹಕ್ಕಿದೆ ಎಂದು ಮಾಜಿ ಪ್ರಧಾನಿ ಮನಹಮೋಹನ್ ಸಿಂಗ್ ಹೇಳುತ್ತಾರೆ. ಇದನ್ನು ನಾವ್ಯಾರೂ ಒಪ್ಪಲು ಸಾಧ್ಯವಿಲ್ಲ. ಕೋಲಾರದ ಆಂಜನೇಯ ದೇವಸ್ಥಾನದ ಪಕ್ಕ ವಕ್ಫ್ ಮಂಡಳಿ ಖಬರ್‌ಸ್ಥಾನ ನಿರ್ಮಾಣ ಮಾಡಿದೆ. ಕಾಂಗ್ರೆಸ್‌ನಿಂದಾಗಿ ಹಿಂದೂಗಳು ಈ ಸ್ಥಿತಿಗೆ ಬಂದಿದ್ದಾರೆ. ಸರ್ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆ ಕೂಡ ಈಗ ಮಸೀದಿಗೆ ಸೇರಿದೆ. ವಕ್ಫ್ ಬೋರ್ಡ್‌ಗೆ ಪ್ರತ್ಯೇಕ ಕಾನೂನು ಹಾಗೂ ಹಿಂದೂಗಳಿಗೆ ಪ್ರತ್ಯೇಕ ಕಾನೂನಿದೆ ಎಂದು ದೂರಿದರು.
ವಕ್ಫ್ ಮಂಡಳಿ *ಹಳೆ ಕಾಗದ ಸೃಷ್ಟಿ* ಮಾಡಿ ದಾಖಲೆಗಳನ್ನು ರೂಪಿಸುತ್ತಿದೆ. ಇದನ್ನು ಬಳಸಿ ವಕ್ಫ್ ಕೂಡಲೇ ಆಸ್ತಿ ಕಬಳಿಸುತ್ತದೆ. ಆದರೆ ಹಿಂದೂಗಳು ಸರ್ಕಾರಿ ಕಚೇರಿಯನ್ನು ಅಲೆಯಬೇಕಾಗುತ್ತದೆ. ಈ ಕುರಿತು ನಾವು ಜಾಗೃತಿ ತರದೇ ಹೋದಲ್ಲಿ ನಮ್ಮ ದೇವಸ್ಥಾನ ಉಳಿಯುವುದಿಲ್ಲ. ಶ್ರೀರಂಗಪಟ್ಟಣದಲ್ಲಿ ದೇವಸ್ಥಾನದ ಜಾಗವನ್ನು ವಕ್ಫ್‌ಗೆ ಸೇರಿಸಲಾಗಿದೆ. ಅದಕ್ಕಾಗಿ ಎಲ್ಲರೂ ಆಸ್ತಿ ಪಹಣಿಯನ್ನು ಪರಿಶೀಲಿಸಿಕೊಳ್ಳಬೇಕು. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕರ್ನಾಟಕವನ್ನು ಪಾಕಿಸ್ತಾನ ಮಾಡಲು ಮುಂದಾಗಿದ್ದಾರೆ. ಇವರು ಅಧಿಕಾರದಲ್ಲಿ ಇರುವವರೆಗೂ ಇದೇ ವ್ಯವಸ್ಥೆ ಇರುತ್ತದೆ ಎಂದರು.
ಜನರಿಗೆ ನಿವೇಶನಕ್ಕೆ ಜಾಗ ಸಿಗುವುದಿಲ್ಲ. ಆದರೆ ಸಿಎಂ ಸಿದ್ದರಾಮಯ್ಯನವರು 14 ನಿವೇಶನ ಕಬಳಿಸಿದ್ದಾರೆ. ಮುಂದೆ ತಿಪ್ಪರಲಾಗ ಹಾಕಿದರೂ ಗೆಲ್ಲಲ್ಲ ಎಂದು ಗೊತ್ತಾಗಿದೆ. ಅದಕ್ಕಾಗಿ ಸಚಿವ ಜಮೀರ್ ಅಹಮದ್ ಸಿಕ್ಕಸಿಕ್ಕ ಜಾಗವನ್ನು ವಕ್ಫ್‌ಗೆ ಸೇರಿಸುತ್ತಿದ್ದಾರೆ. ಇದರ ನಡುವೆ ಬಂದಿರುವ ಗ್ಯಾರಂಟಿಗಳ ಸತ್ಯ ಎಲ್ಲರಿಗೂ ಗೊತ್ತಾಗಿದೆ ಎಂದರು.
ಪಕ್ಕದ ಮನೆಗೆ ಬೆಂಕಿ ಹೊತ್ತಿಕೊಂಡಾಗಲೇ ನಾವು ಎಚ್ಚರಗೊಳ್ಳಬೇಕು. ವಕ್ಫ್ ಎನ್ನುವುದೇ ಒಂದು ಕ್ಯಾನ್ಸರ್. ಇದು ಇಡೀ ದೇಹಕ್ಕೆ ಹಬ್ಬುತ್ತದೆ. ಆದ್ದರಿಂದ ವಕ್ಫ್ ಮಂಡಳಿಯನ್ನು ರದ್ದು ಮಾಡಬೇಕು. ಇದಕ್ಕಾಗಿ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ತೀವ್ರವಾದ ಹೋರಾಟ ಮಾಡಲಾಗುವುದು. ಈ ಸಮಸ್ಯೆಯನ್ನು ಸುಮ್ಮನೆ ಬಿಡುವುದಿಲ್ಲ. ಈ ಹೋರಾಟಕ್ಕೆ ಜನರು ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಇನ್ನೂ 15 ದಿನಗಳ ಕಾಲ ಎಲ್ಲೆಡೆ ಸುತ್ತಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ. ಈಗಾಗಲೇ ಬಿಜೆಪಿ ನಡೆಸಿದ ಹೋರಾಟದಿಂದ ಭಯಕ್ಕೊಳಗಾದ ಕಾಂಗ್ರೆಸ್ ಸರ್ಕಾರ, ಅನೇಕ ಆಸ್ತಿಗಳ ಪಹಣಿಯಲ್ಲಿ ಬದಲಾವಣೆ ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಹೊಸ ಮಸೂದೆ ತರಲಿದ್ದು, ವಕ್ಫ್ ಎಂಬ ರಾಕ್ಷಸನನ್ನು ಸಂಹಾರ ಮಾಡಲಿದ್ದಾರೆ ಎಂದು ಹೇಳಿದರು.






