ಅಧಿವೇಶನದ ಅವಧಿ ಕಡಿತವಾದರೂ ಜನರ ಸಮಸ್ಯೆಗಳ ಪರವಾಗಿ ಹೋರಾಟ: ಪ್ರತಿಪಕ್ಷ ನಾಯಕ ಆರ್‌.ಅಶೋಕ

Belaguam:

Font size:

ಆದಷ್ಟು ಬೇಗ ಅಧಿವೇಶನ ಮುಗಿಸಬೇಕೆಂಬ ತರಾತುರಿ ಕಾಂಗ್ರೆಸ್‌ಗಿದೆ;ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಳಗಾವಿ,ಡಿ. 9- ಕಾಂಗ್ರೆಸ್‌ ಸರ್ಕಾರ ಅಧಿವೇಶನದ ಅವಧಿಯನ್ನು ಕಡಿತಗೊಳಿಸಿದ್ದರೂ, ವಕ್ಫ್‌ ಮಂಡಳಿಯಿಂದ ಭೂ ಕಬಳಿಕೆ ಸೇರಿದಂತೆ ಜನರ ಸಮಸ್ಯೆಗಳ ಪರವಾಗಿ ಹೋರಾಟ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಬೆಳಗಾವಿಯಲ್ಲಿ ಅಧಿವೇಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ ಮಂಡಳಿಯ ಭೂತ ಇಡೀ ರಾಜ್ಯವನ್ನು ಕಾಡುತ್ತಿದೆ. ರೈಲ್ವೆ ಜಮೀನು, ರಕ್ಷಣಾ ಜಮೀನು, ಅರಣ್ಯ ಜಾಗ, ರೈತರ ಜಮೀನುಗಳು ಹೀಗೆ ಕಂಡಿದ್ದೆಲ್ಲ ತನ್ನದು ಎಂದು ವಕ್ಫ್‌ ಮಂಡಳಿ ಹೇಳುತ್ತಿದೆ. ಈ ಕುರಿತು ಚರ್ಚಿಸಲು ಸ್ಪೀಕರ್‌ ಅವಕಾಶ ನೀಡಿದ್ದಾರೆ. ಈ ಸಮಸ್ಯೆಯನ್ನು ಬಿಜೆಪಿ ತಾರ್ಕಿಕ ಅಂತ್ಯಕ್ಕೆ ಒಯ್ಯಲಿದೆ. ಇದರ ನಡುವೆ ಬಾಣಂತಿಯರ ಸಾವು, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗಬೇಕಿದೆ. ಆದರೆ ಸರ್ಕಾರ ಅಧಿವೇಶನದ ಅವಧಿಯನ್ನು ಒಂಬತ್ತು ದಿನಕ್ಕೆ ಇಳಿಸಿದೆ ಎಂದು ದೂರಿದರು.

ಕನ್ನಡ ಸಾಹಿತ್ಯ ಸಮ್ಮೇಳನ ಮುಗಿದ ನಂತರವೂ ಅಧಿವೇಶನವನ್ನು ಮುಂದುವರಿಸಿ ಎಂದು ಸಲಹೆ ನೀಡಿದ್ದೇನೆ. ಆದರೆ ಮಹಾತ್ಮ ಗಾಂಧೀಜಿಯವರ ಕಾರ್ಯಕ್ರಮ ಎಂದು ಸಬೂಬು ಹೇಳಿದ್ದಾರೆ. ಇನ್ನಷ್ಟು ದಿನಗಳ ಕಾಲ ಅಧಿವೇಶನ ನಡೆದಿದ್ದರೆ, ಅಬಕಾರಿ ಹಗರಣ, ರೇಷನ್‌ ಕಾರ್ಡ್‌ ರದ್ದು, ಡ್ರಗ್‌ ಮಾಫಿಯಾ ಮೊದಲಾದ ವಿಷಯಗಳ ಕುರಿತು ಚರ್ಚಿಸಬಹುದಿತ್ತು. ಆದರೆ ಕಾಂಗ್ರೆಸ್‌ಗೆ ಇವೆಲ್ಲ ವಿಷಯಗಳನ್ನು ಚರ್ಚಿಸಲು ಇಷ್ಟವಿಲ್ಲ. ಆದಷ್ಟು ಬೇಗ ಅಧಿವೇಶನ ಮುಗಿಸಬೇಕೆಂಬ ತರಾತುರಿ ಕಾಂಗ್ರೆಸ್‌ಗಿದೆ. ಆದರೂ ಜನರ ಸಮಸ್ಯೆಗಳ ಪರವಾಗಿ ಬಿಜೆಪಿ ಹೋರಾಟ ಮಾಡಲಿದೆ ಎಂದು ತಿಳಿಸಿದರು.

ಪಂಚಮಸಾಲಿ ಸಮುದಾಯದವರು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಅದನ್ನು ಸರ್ಕಾರ ತಡೆದು ಪ್ರಜಾಪ್ರಭುತ್ವವನ್ನು ದಮನ ಮಾಡಿದೆ. ಇದನ್ನು ಖಂಡಿಸಿ ಬಿಜೆಪಿ ಧರಣಿ ಮಾಡಿದೆ. ಈ ಹೋರಾಟ ನ್ಯಾಯಯುತ ಹಾಗೂ ಶಾಂತಿಯುತವಾಗಿದೆ. ಸದನದಲ್ಲಿ ಗೃಹ ಸಚಿವರು ಉತ್ತರ ನೀಡುವವರೆಗೆ ಹೋರಾಟ ನಡೆಯಲಿದೆ ಎಂದರು.

Prev Post ಗ್ರಾ.ಪಂ. ಮಟ್ಟದಲ್ಲಿ ಪರಿಪಕ್ವವಾದ ದತ್ತಾಂಶ ಸಂಗ್ರಹಿಸಿ ಅರ್ಹರಿಗೆ ಬಿಪಿಎಲ್ ಪಡಿತರ ಕಾರ್ಡ್ ವಿತರಣೆ : ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ
Next Post ಬೆಳಗಾವಿಯಲ್ಲಿ ಸೋಮವಾರ ನಡೆದ ಕರ್ನಾಟಕ ಸಂಸ್ಥಾನ ಜೈನ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್