ಮಂಗಳೂರು: ಜೀವನದ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಯಶಸ್ವೀ ಉದ್ಯಮಿಯಾಗುವುದು ಹೇಗೆ

Mangalore:

Font size:

ಮಂಗಳೂರು: ಜೀವನದ ಸಮಸ್ಯೆಗಳನ್ನು ಎದುರಿಸುವುದು ಹೇಗೆ? ಯಶಸ್ವೀ ಉದ್ಯಮಿಯಾಗುವುದು ಹೇಗೆ

From Jayaram Udupi

ಮಂಗಳೂರು: ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಪ್ರಯೋಗಾಲಯ ತನ್ನನ್ನು ರಾಸಾಯನಿಕಗಳ ಕ್ಷೇತ್ರದಲ್ಲಿ ಮುಂದುವರಿಯಲು ಪ್ರೇರಣೆ ನೀಡಿತು ಎಂದು ತನ್ನ ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತರಾಗಿರುವ ಉದ್ಯಮಿ ಹಾಗು ಟೆಕ್ನೋಕ್ರಾಟ್ ಕನ್ಯಾನ ಸದಾಶಿವ ಶೆಟ್ಟಿ ಹೇಳಿದರು.

ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯವು ತನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿ ಕನ್ಯಾನ ಸದಾಶಿವ ಶೆಟ್ಟಿ ಅವರು ಪ್ರಶಸ್ತಿ ಪುರಸ್ಕೃತರಾದ ಸಂದರ್ಭದಲ್ಲಿ ಅವರನ್ನು ಗೌರವಿಸಲು ಹಮ್ಮಿಕೊಂಡ ಸಮಾರಂಭದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಕನ್ಯಾನ ಮಾತನಾಡಿದರು.

ತಾವು ಕಾಸರಗೋಡಿನಿಂದ ಬಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳನ್ನು ನೆನಪಿಸಿಕೊಂಡ ಅವರು ಇಲ್ಲಿ ಸೀಟು ಸಿಗುವುದೇ ಕಷ್ಟವಾಗಿದ್ದ ಕಾಲ ಅದಾಗಿತ್ತು ಎಂದೂ ಸ್ಮರಿಸಿಕೊಂಡರು. “ಇಲ್ಲಿ ಸೀಟು ಸಿಕ್ಕಿದಾಗ ಬಹಳ ಖುಶಿ ಅನುಭವಿಸಿದ್ದೆ. ಇಲ್ಲಿಯ ಪ್ರಯೋಗಾಲಯಗಳಲ್ಲಿ ಬಳಸುತ್ತಿದ್ದ ಟೆಸ್ಟ್ ಟ್ಯೂಬ್ ಮುಂದೆ ನನಗೆ ರಾಸಾಯನಿಕ ರಿಯಾಕ್ಟರ್ ಗಳನ್ನು ಸ್ಥಾಪಿಸಲು ಸ್ಪೂರ್ತಿ ನೀಡಿತು. ಮೊದಲು ಮೂರು ರಿಯಾಕ್ಟರುಗಳನ್ನು ಒಂದು ಎಕರೆ ಪ್ರದೇಶದಲ್ಲಿ ಸ್ಥಾಪಿಸಿ ರಾಸಾಯನಿಕಗಳನ್ನು ತಯಾರಿಸಲಾಯಿತು” ಎಂದವರು ವಿದ್ಯಾರ್ಥಿ ಜೀವನದಿಂದ ಉದ್ಯಮ ಸ್ಥಾಪನೆಯವರೆಗಿನ ತಮ್ಮ ಪ್ರಯಾಣವನ್ನು ವಿವರಿಸಿದರು.

ಗಣಿತ ತಮಗೆ ದೊಡ್ಡ ತಲೆನೋವು ಕೊಡುತ್ತಿದ್ದುದನ್ನು ನೆನಪಿಸಿಕೊಂಡ ಕನ್ಯಾನ ಅದರಲ್ಲಿ ನನಗೆ ಐವತ್ತಕ್ಕಿಂತ ಹೆಚ್ಚು ಅಂಕಗಳನ್ನು ತೆಗೆಯುವುದು ಸಾಧ್ಯವಾಗಲೇ ಇಲ್ಲ. ಆದರೆ ಇತರ ವಿಷಯಗಳಲ್ಲಿ ತೊಂಬತ್ತಕ್ಕಿಂತ ಹೆಚ್ಚು ಅಂಕ ಗಳಿಸುತ್ತಿದ್ದೆ. ಈಗಲೂ ನನಗೆ ಸೈನ್ ತೀಟಾ, ಟ್ಯಾನ್ ತೀಟಾ, ಕಾಸ್ ತೀಟ, ಕೊಸೈನ್ ತೀಟಾ ಹೇಗಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ, ವಿದ್ಯಾರ್ಥಿಯಾಗಿದ್ದಾಗ ಇದನ್ನೆಲ್ಲ ಕಲಿತು ಏನಾಗಲಿಕ್ಕುಂಟು ಎಂದೂ ಯೋಚಿಸಿದ್ದೆ, ಆದರೆ ಕಲಿಯಲು ಬಂದವರು ಅದರಲ್ಲಿ ಪಾಸ್ ಆಗುವುದು ಅನಿವಾರ್ಯ ಎಂಬುದು ನನ್ನ ಮನಸ್ಸಿನಲ್ಲಿ ಸದಾ ಜಾಗೃತವಾಗಿತ್ತು ಎಂದು ಅಂದಿನ ದಿನಗಳನ್ನು ವಿದ್ಯಾರ್ಥಿಗಳೆದುರು ತೆರೆದಿಟ್ಟರು.

ಸಮಾರಂಭದಲ್ಲಿ ಉಪಕುಲಪತಿ ರೆವೆರೆಂಡ್ ಫಾದರ್ ಪ್ರವೀಣ್ ಮಾರ್ಟಿಸ್, ರೆವೆರೆಂಡ್ ಫಾದರ್ ಮೆಲ್ವಿನ್ ಪಿಂಟೋ, ರಿಜಿಸ್ಟ್ರಾರ್ ಡಾ. ರೊನಾಲ್ಡ್ ನಜರತ್, ಡಾ. ಆಲ್ವಿನ್ ಡೀಸಾ, ಡಾ. ಈಶ್ವರ ಭಟ್ , ಸಹನಾ ದೇವಾಡಿಗ, ಈ ಸಂದರ್ಭ ಉಪಸ್ಥಿತರಿದ್ದರು.

ನೀವು ನಮಗೆ ಉದ್ಯೋಗ ಕೊಡುತ್ತೀರಾ?

ನೀವು ಕೆಲಸಕ್ಕೆ ಅರ್ಜಿ ಹಾಕಿದವರ ಸಂದರ್ಶನ ನಡೆಸುತ್ತೀರಾ ?

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ಅವರೊಂದಿಗೆ ಏರ್ಪಟ್ಟ ವಿದ್ಯಾರ್ಥಿ ಸಂವಾದದಲ್ಲಿ ತೂರಿ ಬಂದ ಪ್ರಶ್ನೆಗಳ ಕೆಲವು ಸ್ಯಾಂಪಲ್ ಗಳಿವು.

ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ತನ್ನ ಕಾಲೇಜಿನ ಹಿರಿಯ ವಿದ್ಯಾರ್ಥಿ ಕನ್ಯಾನ ಸದಾಶಿವ ಶೆಟ್ಟಿ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಆಯೋಜನೆಯಾಗಿದ್ದ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ಕನ್ಯಾನ ಅವರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ಜೀವನದಲ್ಲಿ ಬರುವ ಸಮಸ್ಯೆಗಳನ್ನು ಸವಾಲುಗಳೆಂದು ಅರ್ಥ ಮಾಡಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಪಾಸಾಗುವುದು ಚಾಲೆಂಜ್, ಬಳಿಕ ವೃತ್ತಿ ಜೀವನದಲ್ಲಿ ಮೇಲಕ್ಕೇರುತ್ತಾ ಹೋಗುವುದು ಚಾಲೆಂಜ್, ಯಾವ ಹಂತದಲ್ಲಿಯೂ ತಾಳ್ಮೆ ಕಳೆದುಕೊಳ್ಳದೆ ವ್ಯವಹರಿಸುವುದೂ ಚಾಲೆಂಜ್. ಈ ತಾಳ್ಮೆ ಇದ್ದರೆ ನೀವು ಜೀವನದಲ್ಲಿ ಗೆಲ್ಲುತ್ತೀರಿ ಎಂದು ಕನ್ಯಾನ ಅವರು ಪ್ರಶ್ನೆಗಳಿಗೆ ಉತ್ತರಿಸುತ್ತ ತಿಳಿಸಿದರು.

ಜೀವನ ನಾವು ಹೇಳಿದಂತೆ ಇರುವುದಿಲ್ಲ. ನಾನು ಉತ್ತಮ ಅಂಕಗಳನ್ನು ಪಡೆದಾಗ ಪಿ.ಎಚ್.ಡಿ. ಮಾಡಬೇಕು ಎಂಬ ಅಸೆ ಇತ್ತು. ತಂದೆಯವರಲ್ಲಿ ಹೇಳಿದಾಗ, ನೀನು ಇಷ್ಟು ಕಲಿತದ್ದು ಸಾಕು, ಇನ್ನು ಆರು ಮಂದಿ ಇದ್ದಾರೆ ಅವರಿಗೆ ದಾರಿ ತೋರಿಸುವುದು ನಿನ್ನ ಜವಾಬ್ದಾರಿ ಎಂದರು, ನಾನು ಮುಂಬಯಿ ಸೇರಿ ಉದ್ಯೋಗ ಹುಡುಕಿದೆ ಎಂದವರು ಜೀವನದ ಪ್ರಯಾಣವನ್ನು ವಿವರಿಸಿದರು.

ಮತ್ತೆ ಉದ್ಯಮಿ ಹೇಗಾದಿರಿ ಮತ್ತು ಉದ್ಯಮ ಸ್ಥಾಪಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಮೊದಲು ಅನುಭವ ಗಳಿಸಬೇಕು, ನಾನು ಹದಿನೈದು ವರ್ಷ ವಿವಿಧ ಕ್ಷೇತ್ರಗಳಲ್ಲಿ ನೌಕರಿ ಮಾಡಿ ಅನುಭವ ಪಡೆದು ಉದ್ಯಮಿಯಾದವನು. ನಮ್ಮ ಕೈಯಲ್ಲಿ ಸ್ವಲ್ಪ ದುಡ್ಡು ಇರಬೇಕು. ಎಲ್ಲ ಮೊತ್ತವನ್ನೂ ಸಾಲದಿಂದ ಪಡೆಯುವಂತಾಗಬಾರದು. ನಮ್ಮಂತಹ ಫಸ್ಟ್ ಜನರೇಶನ್ ಉದ್ಯಮಿಗಳಿಗೆ ಸ್ವಲ್ಪ ಅದೃಷ್ಟವೂ ಬೇಕು, ಮತ್ತು ರಿಸ್ಕ್ ತಗೊಳ್ಳುವುದಕ್ಕೆ ಹೆದರಬಾರದು. ನಾನು ಉದ್ಯಮ ಆರಂಭ ಮಾಡುವಾಗ ನಮ್ಮ ಪ್ರಾಡಕ್ಟಗಳಿಗೆ ಚೀನಾದಿಂದಲೂ ಬೇಡಿಕೆ ಇತ್ತು. ನಾನು ಬಚಾವ್ ಆದೆ. ಆ ಉತ್ಪನ್ನಗಳು ಚೀನಾದಲ್ಲಿ ತಯಾರಾಗುತ್ತಿರಲಿಲ್ಲ ಎಂದವರು ಉತ್ತರಿಸಿದರು.

ಸಿಬ್ಬಂದಿ ಆಯ್ಕೆ ಹೇಗೆ ಮಾಡುತ್ತೀರಿ, ನೀವೇ ಇಂಟರ್ ವ್ಯೂ ಮಾಡುತ್ತೀರಾ, ನಮಗೆ ಉದ್ಯೋಗ ನಿಮ್ಮ ಕಂಪೆನಿಯಲ್ಲಿ ಸಿಗುತ್ತದಾ ಎಂಬ ಸರಣಿ ಪ್ರಶ್ನೆಗಳನ್ನು ಎದುರಿಸಿದ ಕನ್ಯಾನ ಇಂದು ನಾನು ಉದ್ಯೋಗಾರ್ಥಿಗಳ ಇಂಟರ್ ವ್ಯೂ ಮಾಡುತ್ತಿಲ್ಲ, ಅದನ್ನೆಲ್ಲ ಮ್ಯಾನೇಜರ್, ಎಚ್.ಆರ್. ವಿಭಾಗದವರು ನಿಭಾಯಿಸುತ್ತಾರೆ ಎಂದುತ್ತರಿಸಿದರು. ಕೆಲಸ ಸಿಗುವುದಕ್ಕೆ ಪ್ರಯತ್ನ ಮಾಡಿ, ಅದಕ್ಕೆ ಬೇಕಾದ ಅರ್ಹತೆಗಳನ್ನು ಕೌಶಲ್ಯಗಳನ್ನು ಗಳಿಸಿಕೊಳ್ಳಿ, ಮೊದಲ ಕೆಲಸದಲ್ಲಿ ಐವತ್ತು ಸಾವಿರ ಸಂಬಳ ಬೇಕು ಎಂಬಂತಹ ನಿರೀಕ್ಷೆ ಇಟ್ಟುಕೊಳ್ಳಬೇಡಿ. ಕ್ರಮೇಣ ಅನುಭವ ಗಳಿಸುತ್ತಿದ್ದಂತೆ ವೇತನವೂ ಏರುತ್ತಾ ಹೋಗುತ್ತದೆ ಎಂದು ಕಿವಿಮಾತು ಹೇಳಿದರು.

ರಾಸಾಯನಿಕಗಳು ಹಾನಿಕಾರಕ ಎಂಬ ಭಾವನೆ ಇರುವುದರ ಬಗ್ಗೆ ಪ್ರಸ್ತಾಪಿಸಿದ ಅವರು ರಾಸಾಯನಿಕಗಳ ಅತಿಯಾದ ಬಳಕೆಯಿಂದ ಹಾನಿಯೇ ಹೊರತು ರಾಸಾಯನಿಕಗಳು ದೇಹಕ್ಕೆ ಹಾನಿಕರವಲ್ಲ, ಈ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಆಯುರ್ವೇದದಲ್ಲಿ ಬಳಕೆಯಾಗುವುದು ಕೂಡ ಸಸ್ಯಜನ್ಯ ರಾಸಾಯನಿಕಗಳು. ಕೃತಕ ರಾಸಾಯನಿಕಗಳನ್ನು ಕಾರ್ಖಾನೆಗಳಲ್ಲಿ ತಯಾರಿಸಲಾಗುತ್ತದೆ ಎಂದವರು ರಾಸಾಯನಿಕಗಳ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

Prev Post ಬೆಳಗಾವಿ ಕಾಂಗ್ರೆಸ್ ಅಧಿವೇಶನ ಕರ್ನಾಟಕ ರಾಜ್ಯಕ್ಕೆ ಸಿಕ್ಕ ಐತಿಹಾಸಿಕ ಭಾಗ್ಯ: ಡಿಸಿಎಂ ಡಿ.ಕೆ. ಶಿವಕುಮಾರ್
Next Post ಕೆಎಸ್ಡಿಎಲ್ ಲಾಭಾಂಶ ₹108 ಕೋಟಿ ಸರ್ಕಾರಕ್ಕೆ ಹಸ್ತಾಂತರ