ಕರಾವಳಿ ಉತ್ಸವ - ಹೆಲಿಕಾಪ್ಟರ್ ರೈಡ್‌ಗೆ ಚಾಲನೆ

Mangalore:

Font size:

ಕರಾವಳಿ ಉತ್ಸವ ಪ್ರಯುಕ್ತ ಆರಂಭಿಸಿರುವ ಹೆಲಿಕಾಪ್ಟರ್ ಸಂಚಾರಕ್ಕೆ ಶನಿವಾರ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ನಾಯಕ್ ಅವರು ಜಂಟಿಯಾಗಿ ಚಾಲನೆ ನೀಡಿದರು.

from ; Jayaram Udupi

ಮಂಗಳೂರು: ಕರಾವಳಿ ಉತ್ಸವ ಪ್ರಯುಕ್ತ ಆರಂಭಿಸಿರುವ ಹೆಲಿಕಾಪ್ಟರ್ ಸಂಚಾರಕ್ಕೆ ಶನಿವಾರ ಪದ್ಮಶ್ರೀ ಪುರಸ್ಕೃತರಾದ ಹರೇಕಳ ಹಾಜಬ್ಬ ಮತ್ತು ಅಮೈ ಮಹಾಲಿಂಗ ನಾಯಕ್ ಅವರು ಜಂಟಿಯಾಗಿ ಚಾಲನೆ ನೀಡಿದರು.
ನಗರದ ಮೇರಿಹಿಲ್ ಹೆಲಿಪ್ಯಾಡ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಹರೇಕಳ ಹಾಜಬ್ಬ ಅಮೈ ಮಹಾಲಿಂಗ ನಾಯಕ್ ಅವರು ಹೆಲಿಕಾಪ್ಟರ್‌ನಲ್ಲಿ ಸಂಚರಿಸುವ ಮೂಲಕ ಚಾಲನೆ ನೀಡಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ, ಪೊಲೀಸು ವರಿಷ್ಠಾಧಿಕಾರಿ ಯತೀಶ್, ಅರಣ್ಯ ಸಂರಕ್ಷಣಾಧಿಕಾರಿ ಆಂಟೋನಿ ಮರಿಯಪ್ಪ ಮತ್ತಿತರರು ಉಪಸ್ಥಿತರಿದ್ದು, ಹೆಲಿಕಾಪ್ಟರ‍್ನಲ್ಲಿ ಸಂಚರಿಸಿದರು.
ಬಳಿಕ ಮಾತನಾಡಿದ ಹರೇಕಳ ಹಾಜಬ್ಬ ಮತ್ತು ಮಹಾಲಿಂಗ ನಾಯಕ್ ಅವರು ಕರಾವಳಿ ಉತ್ಸವದ ಸೊಬಗಿಗೆ ಸಾರ್ವಜನಿಕರಿಗೆ ಹೆಲಿಕಾಪ್ಟರ್ ಸಂಚಾರ ಆರಂಭಿಸಿರುವುದು ಶ್ಲಾಘನೀಯವಾಗಿದೆ, ಪ್ರವಾಸಿಗರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಪ್ರೋತ್ಸಾಹಿಸಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಮಾತನಾಡಿ ಕರಾವಳಿ ಉತ್ಸವವನ್ನು ಆಕರ್ಷಣೀಯವನ್ನಾಗಿಸಲು ಹೆಲಿಕಾಪ್ಟರ್ ಪ್ರಯಾಣದ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಹೆಲಿಕಾಪ್ಟರ‍್ನಲ್ಲಿ ಸಂಚರಿಸಿ ಮಂಗಳೂರು ನಗರವನ್ನು ವೈಮಾನಿಕವಾಗಿ ದರ್ಶನ ಮಾಡಿ ಹಾಗೂ ಕಡಲ ಕಿನಾರೆ ಸೌಂದರ್ಯವನ್ನು ವೀಕ್ಷಿಸಬಹುದಾಗಿದೆ ಎಂದು ಹೇಳಿದರು.
ಖಾಸಗಿ ಸಂಸ್ಥೆಯ ಹೆಲಿಕಾಪ್ಟರ್ ಇದನ್ನು ನಡೆಸಿಕೊಡಲಿದ್ದು, ಜಿಲ್ಲಾಡಳಿತ ಸಹಕಾರ ನೀಡಲಿದೆ. ಪ್ರತಿ ಟ್ರಿಪ್ ನಲ್ಲಿ ೬ ಜನರಿಗೆ ಅವಕಾಶ ಇದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಹೆಲಿಟೂರಿಸಂ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಇದು ಹೆಚ್ಚು ಸಹಕಾರಿಯಾಗಲಿದೆ ಎಂದರು.
ಮಂಗಳೂರಿಗೆ ಪ್ರದಕ್ಷಿಣೆ..
ಈ ಬಾರಿಯ ಕರಾವಳಿ ಉತ್ಸವದ ಅಂಗವಾಗಿ ಮಂಗಳೂರಿನಲ್ಲಿ ಹೆಲಿಕಾಪ್ಟರ್ ಮೂಲಕ ಕರಾವಳಿಯ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ಒಬ್ಬರಿಗೆ ತಲಾ ರೂಪಾಯಿ ೪೫೦೦.೦೦ ವೆಚ್ಚದಲ್ಲಿ ಮಂಗಳೂರು ಪ್ರದೇಶವನ್ನು ಆಕಾಶ ಮಾರ್ಗದಲ್ಲಿ ಹೆಲಿಕಾಪ್ಟರ್ ಮೂಲಕ ಸುತ್ತ ಹಾಕಿ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಬೆಂಗಳೂರಿನ ತುಂಬಿ ಹೆಲಿಟೂರಿಸಂ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಹೆಲಿಕಾಪ್ಟರ್ ಮೂಲಕ ಡಿ.೨೧ರಿಂದ ೩೧ರವರೆಗೆ ಮೇರಿಹಿಲ್ ಹೆಲಿಪ್ಯಾಡ್ ಮೂಲಕ ಒಂದು ಬಾರಿ ಆರು ಮಂದಿ ಪ್ರಯಾಣಿಸಲು ಸಾಧ್ಯವಿರುವ ಹೆಲಿಕಾಪ್ಟರ್ ನಲ್ಲಿ ಪ್ರಯಾಣಿಸಬಹುದಾಗಿದೆ. ಈ ಹೆಲಿಕಾಪ್ಟರ್ ಮಂಗಳೂರು ಆಸುಪಾಸಿನಲ್ಲಿ ಸುಮಾರು ೫ರಿಂದ ೭ನಿಮಿಷಗಳ ಒಳಗೆ ಆಕಾಶದಲ್ಲಿ ಒಂದು ಪ್ರದಕ್ಷಿಣೆ ಬಂದು ಮೇರಿ ಹಿಲ್‌ಗೆ ಮರಳುತ್ತದೆ.

Prev Post ದೇಶವನ್ನು ಯಾವ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕು ಎಂದು ಕಾರ್ಯಕಾರಿ ಸಮಿತಿಯಲ್ಲಿ ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್
Next Post ಪತ್ರಕರ್ತ ಶಂಕರ ಪಾಗೋಜಿ ಬರೆದಿರುವ ಗಾಂಧಿ ಮಂದಿರ ಕೃತಿ ಬಿಡುಗಡೆ