ಸಂಸ್ಥೆಯ ನೌಕರರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ.ಎಂ, ಭಾ.ಆ.ಸೇ, ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ
ಬೆಂಗಳೂರು, ಅ .3 -ಹುಬ್ಬಳ್ಳಿಯ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಸಂಸ್ಥೆಯ ನೌಕರರ ಮಕ್ಕಳ ವ್ಯಕ್ತಿತ್ವ ವಿಕಸನಕ್ಕಾಗಿ ಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮವನ್ನು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ.ಎಂ, ಭಾ.ಆ.ಸೇ, ರವರ ಮಾರ್ಗದರ್ಶನದಲ್ಲಿ ಏರ್ಪಡಿಸಲಾಗಿತ್ತು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಕಲ್ಪನೆಯಿಂದ, ಸಂಸ್ಥೆಯ ಏಳಿಗೆಗಾಗಿ ಸಾರ್ವಜನಿಕ ಸೇವೆ ಮಾಡುತ್ತಿರುವ ಸಂಸ್ಥೆಯ ಚಾಲಕರು, ನಿರ್ವಾಹಕರು, ತಾಂತ್ರಿಕ ಸಿಬ್ಬಂದಿ ಹಾಗೂ ಆಡಳಿತ ಸಿಬ್ಬಂದಿಗಳ ಮಕ್ಕಳಿಗಾಗಿ, ಇತಿಹಾಸದಲ್ಲಿ ಪ್ರಥಮ ಬಾರಿಗೆ ಇಂತಹ ಒಂದು ಕಾರ್ಯಕ್ರಮವನ್ನು ಇಂತಹ ಒಂದು ಅಪರೂಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸ್ಥೆಯ ಸಿಬ್ಬಂದಿಗಳ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀಮತಿ ಪ್ರಿಯಾಂಗಾ.ಎಂ, ಭಾ.ಆ.ಸೇ, ರವರು ತಮ್ಮ ತಂದೆ-ತಾಯಿಗಳು ಸಂಸ್ಥೆಯಲ್ಲಿ ಅತ್ಯವಶ್ಯವಾದ ಸಾರ್ವಜನಿಕ ಸೇವೆ ಸಲ್ಲಿಸುತ್ತಿದ್ದಾರೆ. ನೀವು ಜವಾಬ್ದಾರಿಯಿಂದ ವಿದ್ಯಾಭ್ಯಾಸ ಮಾಡಿ ಉನ್ನತ ಸಾಧನೆ ಮಾಡಬೇಕು. ನಾವು ಮುಂದೆ ಏನಾಗಬೇಕು ಎಂಬ ಗುರಿ ಇಟ್ಟುಕೊಂಡು ಪ್ರಯತ್ನಿಸಿದರೆ ಅತ್ಯುನ್ನತ ಹುದ್ದೆಗೆ ತಲುಪಬಹುದು. ಒಬ್ಬೊಬ್ಬರಲ್ಲಿ ಒಂದೊಂದು ಪ್ರತಿಭೆ ಇದ್ದೇ ಇರುತ್ತದೆ. ಯಾವುದರಲ್ಲಿ ನಾವು ಬೆಳೆಯಬೇಕು ಎನ್ನುವದನ್ನು ಸರಿಯಾದ ಸಮಯದಲ್ಲಿ ಗುರುತಿಸಿಕೊಂಡು ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಯತ್ತ ಮುನ್ನಡೆಯಬೇಕು ಎಂದು ತಿಳಿಸಿದರು.
ಸಮಾಜದಲ್ಲಿ ಎಲ್ಲ ರೀತಿಯ (Encourage/Discourage) ಜನರು ಇರುತ್ತಾರೆ. ನಮ್ಮನ್ನು ಕೈ ಹಿಡಿದು ಮುನ್ನಡೆಸುವವರು ಯಾರು ಇರುವದಿಲ್ಲ. ನಾವು ಕಷ್ಟಪಟ್ಟು ಓದಿದಾಗ ಮಾತ್ರ ಉನ್ನತವಾದ ಎತ್ತರಕ್ಕೆ ಬೆಳೆಯಲು ಸಾಧ್ಯ. ನಾವು ಯಾವುದಕ್ಕೆ ಆದ್ಯತೆ ಕೊಡುತ್ತೇವೆ ಎಂಬುದರ ಮೇಲೆ ನಮ್ಮ ಭವಿಷ್ಯ ನಿರ್ಧಾರವಾಗುತ್ತದೆ. ನೀವು ಎತ್ತರಕ್ಕೆ ಬೆಳೆಯುವುದೇ ನಿಮ್ಮ ತಂದೆ-ತಾಯಿಗಳಿಗೆ ನೀವು ನೀಡುವ ದೊಡ್ಡ ಗೌರವವಾಗಿದೆ. ಮಧ್ಯಮ ವರ್ಗದ ಕುಟುಂಬದಲ್ಲಿದ್ದು ಐ.ಎ.ಎಸ್ ಮಾಡುತ್ತೇನೆ ಎಂದರೆ ಜನರು ನಗ್ತಾರೆ, ಆದರೆ ನಮ್ಮ ಗುರಿ ಅಚಲವಾಗಿದ್ದು, ಸತತ ಪರಿಶ್ರಮದಿಂದ ಎಲ್ಲವನ್ನೂ ಸಾಧ್ಯವಾಗಿಸಬಹುದು ಎಂದರು.
ಐ.ಎ.ಎಸ್ ತಯಾರಿ, ಕುಟುಂಬದ ಬೆಂಬಲ, ಐ.ಎ.ಎಸ್ ಸಂದರ್ಶನದ ಕುರಿತ ತಮ್ಮ ಸ್ವಂತ ಅನುಭವಗಳನ್ನು ಹಂಚಿಕೊಂಡರು. ನಿಮ್ಮ ಜೀವನದಲ್ಲಿ ಸ್ಪಷ್ಟ ಗುರಿ ಇಟ್ಟುಕೊಂಡು ಒಳ್ಳೆಯ ಸಾಧನೆ ಮಾಡಿ ನಿಮ್ಮ ತಂದೆ-ತಾಯಿಗಳಿಗೆ ಒಳ್ಳೆಯ ಹೆಸರು ತಂದು ಕೊಡಿ ಎಂದು ತಿಳಿಸಿದರು. ನಂತರ ಸಂಸ್ಥೆಯ ಸಿಬ್ಬಂದಿಗಳ ಮಕ್ಕಳೊಂದಿಗೆ ಸಂವಾದ ನಡೆಸಿ ಅವರು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿ, ಅವರ ಸಂದೇಹಗಳನ್ನು ನಿವಾರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳಾದ ಪಿ.ವೈ.ನಾಯಕ, ಪ್ರಾದೇಶಿಕ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಸುಮನಾ.ಯು ಹುಬ್ಬಳ್ಳಿ (ಗ್ರಾ) / ಹು-ಧಾ ನಗರ ಸಾರಿಗೆ ವಿಭಾಗಗಳ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಎಚ್.ರಾಮನಗೌಡರ, ಎಂ.ಸಿದ್ಧಲಿಂಗೇಶ, ಉಪ ಮುಖ್ಯ ಸಂಚಾರ ವ್ಯವಸ್ಥಾಪಕರು, ಜಿ.ವಿಜಯಕುಮಾರ, ಹಾಗೂ ಅಧಿಕಾರಿಗಳಾದ ಎಂ.ಬಿ.ಕಪಲಿ, ಪಿ.ಆರ್.ಕಿರಣಗಿ, ಜಿ.ಶ್ರೀನಾಥ, ಆರ್.ಎಂ.ರಾಜೇಂದ್ರ ಮತ್ತು ಸಂಸ್ಥೆಯ ಸಿಬ್ಬಂದಿಗಳ ಮಕ್ಕಳು ಉಪಸ್ಥಿತರಿದ್ದರು. ವಿರೂಪಾಕ್ಷ ಕಟ್ಟೀಮನಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು.






