ಸಾರ್ವಜನಿಕರು ಕೈಮಗ್ಗ ಉತ್ಪನ್ನವನ್ನು ಖರೀದಿಸುವ ಮೂಲಕ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಿ:ಸಚಿವ ಶಿವಾನಂದ ಪಾಟೀಲ
ಬೆಂಗಳೂರು,ಜ. 6 -ಸಾರ್ವಜನಿಕರು ಕೈಮಗ್ಗ ಉತ್ಪನ್ನವನ್ನು ಖರೀದಿಸುವ ಮೂಲಕ ಕೈಮಗ್ಗ ನೇಕಾರರನ್ನು ಪ್ರೋತ್ಸಾಹಿಸಬೇಕೆಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ಇಂದು ಅಭಿವೃದ್ಧಿ ಆಯುಕ್ತರು (ಕೈಮಗ್ಗ) ಜವಳಿ ಮಂತ್ರಾಲಯ, ಭಾರತ ಸರ್ಕಾರ, ನವದೆಹಲಿ, ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಸಹಕಾರಿ ಕೈಮಗ್ಗ ನೇಕಾರರ ಮಹಾಮಂಡಳ ನಿ. (ಕಾವೇರಿ ಹ್ಯಾಂಡಲೂಮ್ಸ್) ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಾಲಹಳ್ಳಿ ಮುಖ್ಯರಸ್ತೆ ಹೆಚ್.ಎಂ.ಟಿ.ಮೈದಾನದಲ್ಲಿ
ಹಮ್ಮಿಕೊಂಡಿದ್ದ ಗಾಂಧಿ ಬುನ್ಕರ್ ಮೇಳ “ಹರ್ಷಕಲಾ” ರಾಷ್ಟ್ರೀಯ ಕೈಮಗ್ಗ ಮೇಳ-2025ರ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರಾಷ್ಟ್ರೀಯ ಕೈಮಗ್ಗ ಮೇಳವು ಕೇಂದ್ರ ಸರ್ಕಾರದ ಮಹತ್ತರ ಕಾರ್ಯಕ್ರಮವಾಗಿದೆ.
ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಪ್ರೋತ್ಸಾಹಿಸಲು ಮಾರುಕಟ್ಟೆ ವೇದಿಕೆಯನ್ನು ಕಲ್ಪಿಸಲು ಗಾಂಧಿ ಬುನ್ಕರ್ ಮೇಳ “ಹರ್ಷಕಲಾ” ರಾಷ್ಟ್ರೀಯ ಕೈಮಗ್ಗ ಮೇಳವನ್ನು ಜನವರಿ 5 ರಿಂದ 19ರ ವರೆಗೆ ಆಯೋಜಿಸಲಾಗಿದೆ ಎಂದರು.
ರಾಷ್ಟ್ರದ ವಿವಿಧ ರಾಜ್ಯಗಳ ಕರಕುಶಲತೆಯನ್ನು ಒಂದೇ ಸೂರಿನಡಿ ತಂದು ರಾಜ್ಯದ ಜನತೆಗೆ ಪರಿಚಯಿಸಲು ಸುವರ್ಣ ಅವಕಾಶ ದೊರಕಿದೆ. ಹೊರ ರಾಜ್ಯದಲ್ಲಿ ಸಿಗುವ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತದೆ. ನೇಕಾರರು ತಾಂತ್ರಿಕ ನೈಪುಣ್ಯತೆಯಲ್ಲಿ ಸಿದ್ಧಡಿಸಿರುವ ಉಡುಪುಗಳು, ಸೀರೆಗಳು, ಇತರೆ ವಸ್ತುಗಳು ರಿಯಾಯಿತಿ ದರದಲ್ಲಿ ದೊರೆಯಲಿದ್ದು , ಬೆಂಗಳೂರು ಜನರಿಗೆ ಇದು ದೊಡ್ಡ ಅವಕಾಶ. ಈ ಮೇಳದಲ್ಲಿ 80 ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಮುಂದಿನ ವರ್ಷಇನ್ನೂ 20 ಮಾರಾಟ ಮಳಿಗೆಗಳನ್ನು ತೆರೆಯ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.
ರಾಷ್ಟ್ರೀಯ ಕೈಮಗ್ಗ ಮೇಳವು ಜಾಗತಿಕ ಮಾರುಕಟ್ಟೆಯಲ್ಲಿ ಕೈಮಗ್ಗ ಉತ್ಪನ್ನಗಳು ಯಾಂತ್ರೀಕೃತ ಗಿರಣಿಗಳ ಉತ್ಪನ್ನಗಳೊಂದಿಗೆ ಸ್ಪರ್ಧಿಸಿ ಮಾರುಕಟ್ಟೆಯನ್ನು ಉತ್ತಮ ಪಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ಈ ಮೇಳದಲ್ಲಿ ದೇಶದ ವಿವಿಧ ರಾಜ್ಯಗಳ ಹಾಗೂ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಕೈಮಗ್ಗ ಸಂಘ ಸಂಸ್ಥೆಗಳು ಉತ್ಪಾದಿಸುವ ವಿವಿಧ ಪಾರಂಪರಿಕ ಉತ್ಪನ್ನಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ ಎಂದರು.
ಸರ್ಕಾರವು ನೇಕಾರರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ನೇಕಾರರ ಸಮ್ಮಾನ್ ಯೋಜನೆಯಡಿ ನೀಡಲಾಗಿತ್ತಿದ್ದ ಎರಡು ಸಾವಿರ ರೂಗಳನ್ನು ಐದುಸಾವಿರ ರೂ.ಗಳಿಗೆ ಹೆಚ್ಚಿಸಲಾಗಿದೆ. ಇದರಿಂದ 1.40 ಲಕ್ಷ ನೇಕಾರರು ಇದರ ಪ್ರಯೋಜನ ಪಡೆದಿದ್ದಾರೆ. ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದರು.
ನೇಕಾರರನ್ನು ಪ್ರೋತ್ಸಾಹಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, 2024 ರಿಂದ 2029 ರ ವರೆಗೆ ಹೊಸ ನೇಕಾರ ನೀತಿ ಜಾರಿ ಮಾಡಲಾಗುವುದು. ನೇಕಾರರು ಇದರ ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸದೃಡರಾಗಬೇಕೆಂದರು.
ಮೇಳದಲ್ಲಿ ಪಾರಂಪರಿಕ ಹಾಗೂ ನೊಂದಾಯಿತ ಮೊಳಕಾಲ್ಮೂರು ಸೀರೆಗಳು, ಇಲಕಲ್ ಸೀರೆಗಳು ಉಡುಪುಗಳು ಸೇರಿದಂತೆ ಇನ್ನೂ ಇತರೆ ಉತ್ತಮ ಕೈಮಗ್ಗ ಉತ್ಪನ್ನಗಳು ದೊರೆಯಲಿವೆ ಎಂದರು.
ಕಾರ್ಯಕ್ರಮದಲ್ಲಿ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆಯ ನಿರ್ದೇಶಕರಾದ ಶ್ರೀಮತಿ ಕೆ.ಜ್ಯೋತಿ, ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳದ ಅಧ್ಯಕ್ಷ ಬಿ.ಜೆ.ಗಣೇಶ್ ಹಾಗೂ ಇತರರು ಉಪಸ್ಥಿತರಿದ್ದರು.




