ಇವಿ ಚಾರ್ಜಿಂಗ್ ಮೂಲಸೌಕರ್ಯಕ್ಕೆ ₹10,900 ಕೋಟಿ ಉಕ್ಕಿನ ಕ್ಷೇತ್ರದಲ್ಲಿಯೂ ಇಂಗಾಲ ಹೊರಸೂಸುವಿಕೆ ತಗ್ಗಿಸಲು ಕ್ರಮ
ನವದೆಹಲಿ: ವಾಹನ ಮಾಲಿನ್ಯ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸುವ ಹಿನ್ನೆಲೆಯಲ್ಲಿ ಕಳೆದ ಅಕ್ಟೋಬರ್ 1ರಿಂದ ಜಾರಿಗೆ ಬಂದಿರುವ PM E-DRIVE ಯೋಜನೆಯು ಹೆಚ್ಚು ಪರಿಣಾಮಕಾರಿ ಎಂದು ಕೇಂದ್ರದ ಭಾರೀ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.
ನವದೆಹಲಿಯಲ್ಲಿ ಸೋಮವಾರ 'ಫೈನಾನ್ಶಿಯಲ್ ಟೈಮ್ಸ್' ಪತ್ರಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು; ಎಲೆಕ್ಟ್ರಿಕ್ ವಾಹನಗಳ ಬಳಕೆ ಉತ್ತೇಜಿಸುವುದರ ಜತೆಗೆ ಇವಿ ಚಾರ್ಜಿಂಗ್ ಮೂಲಸೌಕರ್ಯವನ್ನು ಪ್ರೋತ್ಸಾಹಿಸಲು ₹10,900 ಕೋಟಿಗಳ ಯೋಜನೆ ರೂಪಿಸಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಈ ಯೋಜನೆಯ ಮೂಲಕ ವಾಹನ ಮಾಲಿನ್ಯವನ್ನು ಶೂನ್ಯ ಮಟ್ಟಕ್ಕೆ ತರಲು ಸಾಮೂಹಿಕ ಸಾರಿಗೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲಾಗುವುದು. ಹಾಗೂ ಅದಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ದೊಡ್ಡ ಮಟ್ಟದ ಪ್ರಯತ್ನ ನಡೆಸಲಾಗಿದೆ. ಪ್ರಧಾನಿ ಮೋದಿ ಅವರು ಈ ಯೋಜನೆಗೆ ಆದ್ಯತೆಯ ಮೇರೆಗೆ ಉತ್ತೇಜನ ಕೊಡುತ್ತಿದ್ದಾರೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು.
ಮುಂದಿನ ಐದು ವರ್ಷಗಳಲ್ಲಿ ಇವಿ ವಾಹನಗಳ ಮೂಲಸೌಕರ್ಯಕ್ಕೆ ದೊಡ್ಡ ಮಟ್ಟದ ಹಣಕಾಸಿನ ಬೆಂಬಲ ಕೊಡಲಾಗುತ್ತಿದೆ. ಮೂಲಸೌಕರ್ಯ ಸೃಷ್ಟಿ ಮತ್ತು ಸುಧಾರಣೆಗಾಗಿ ಈ ವರ್ಷದ ಬಜೆಟ್‌ನಲ್ಲಿ ಜಿಡಿಪಿಯ ಶೇ.3.4ರಷ್ಟು, ಅಂದರೆ ₹11,11,111 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.
ಉಕ್ಕಿನ ಕ್ಷೇತ್ರದಲ್ಲಿಯೂ ವಾಯು ಮಾಲಿನ್ಯವನ್ನು ಗಣನೀಯ ಮಟ್ಟಕ್ಕೆ ತಗ್ಗಿಸುವ ನಿಟ್ಟಿನಲ್ಲಿ ಉಕ್ಕು ಸಚಿವಾಲಯದ ವತಿಯಿಂದ ಸಮರೋಪಾದಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಂಗಾಲದ ಹೊರಸೂಸುವಿಕೆಯಲ್ಲಿ ಉಕ್ಕು ಉದ್ಯಮದ ಪಾಲು 10-12%ರಷ್ಟಿದ್ದು,ಅದನ್ನು ಬಹುತೇಕ ತಡೆಯುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗುದ್ದೇವೆ. ಹೀಗಾಗಿ ಇಂಗಾಲೀಕರಣ ರಹಿತ ಉಕ್ಕಿನ ಸ್ಥಾವರಗಳ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ ಎಂದು ಅವರು ಹೇಳಿದರು.
'ಫೈನಾನ್ಶಿಯಲ್ ಟೈಮ್ಸ್' ಪತ್ರಿಕೆಯ ದಕ್ಷಿಣ ಏಷ್ಯಾ ಬ್ಯೂರೋ ಮುಖ್ಯಸ್ಥ ಜಾನ್ ರೀಡ್ ಉಪಸ್ಥಿತರಿದ್ದರು.






