ನಾನು ರೈತರ ಪರ ಹೋರಾಟ ಮಾಡುತ್ತಿದ್ದೇನೆಯೇ ಹೊರತು ಯಾರೋ ಒಬ್ಬರ ವಿರುದ್ಧವಲ್ಲ ;ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ಮಂಡ್ಯ 21 ಜೂನ್ 2026
ಬಿಡದಿ ಟೌನ್ ಶಿಪ್ ಯೋಜನೆಯ ವಿಚಾರದಲ್ಲಿ ನಾನು ಹಾಲಿ ಮುಖ್ಯಮಂತ್ರಿ ವಿರುದ್ಧ ವೈಯಕ್ತಿಕ ನೆಲೆಗಟ್ಟಿನಲ್ಲಿ ಹೋರಾಟ ಮಾಡುತ್ತಿಲ್ಲ. ಭೂಮಿ ಕರೆದುಕೊಳ್ಳುತ್ತಿರುವ ರೈತರ ಪರವಾಗಿ ದನಿ ಎತ್ತಿದ್ದೇನೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
ಮಂಡ್ಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು; ನನ್ನ ಹೋರಾಟಕ್ಕೆ ವೈಯಕ್ತಿಕ ನೆಲೆಗಟ್ಟಿನ ಲೇಪ ಹಾಗೂ ಜಾತಿ ವಿಚಾರವನ್ನು ತಿಳಿದು ತರುವ ಪ್ರಯತ್ನವನ್ನು ಕೆಲವರು ಮಾಡುತ್ತಿದ್ದಾರೆ. ಮಾಡುತ್ತಿರುವ ಅನ್ಯಾಯವನ್ನು ಮುಚ್ಚಿಟ್ಟುಕೊಳ್ಳಲು ಇಂತಹ ವಿಚಾರಗಳನ್ನು ಮುನ್ನಡೆಗೆ ತರುವುದು ಸರಿಯಲ್ಲ. ಇವರೆಲ್ಲ ಸೇರಿ ರೈತರ ಭೂಮಿಯನ್ನು ರಿಯಲ್ ಎಸ್ಟೇಟ್ ದಂಧೆಕೋರರಿಗೆ ಕೊಡಲು ಕೊಳ್ಳೆ ಹೊಡೆಯಲು ಹೊರಟಿದ್ದಾರೆ. ಇದನ್ನು ತಡೆಯಲು ನಾನು ರೈತರ ಜೊತೆ ಸೇರಿ ಹೋರಾಟಕ್ಕೆ ಇಳಿದಿದ್ದೇನೆ ಎಂದರು.
ಟೌನ್ ಶಿಪ್ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಅವರ ಹಿಂಬಾಲಕರು ಸುಳ್ಳಿನ ಸರಮಾಲೆಯನ್ನೇ ಸೃಷ್ಟಿ ಮಾಡುತ್ತಿದ್ದಾರೆ. ನಾನು ರೆಡ್ ಜೋನ್ ತೆಗೆಯಲಿಲ್ಲ ಏಕೆ ಎಂದು ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ಅದೇ ಪಕ್ಷದ ಕೆಲವರು ಕುಮಾರಸ್ವಾಮಿ ಅವರು ರೆಡ್ ಜೂನ್ ಮಾಡಿದ್ದರಿಂದಲೇ ಬಿಡದಿ ಭಾಗದಲ್ಲಿ ರೈತರ ಭೂಮಿ ಉಳಿದುಕೊಂಡಿದೆ ಇಲ್ಲವಾಗಿದ್ದಿದ್ದರೆ ಈ ವೇಳೆಗೆ ಇಡೀ ಭೂಮಿಯಲ್ಲ ರಿಯಲ್ ಎಸ್ಟೇಟ್ ಕುಳಗಳ ಪಾಲಾಗುತ್ತಿತ್ತು ಎಂದು ಹೇಳಿದ್ದಾರೆ. ಇದರಲ್ಲಿ ಯಾವುದು ಸತ್ಯ ಎಂಬುದನ್ನು ಜನರೇ ಅರ್ಥ ಮಾಡಿಕೊಂಡಿದ್ದಾರೆ ಎಂದು ಸಚಿವರು ಹೇಳಿದರು.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರ ಅಧಿಕಾರ ಅವಧಿಯಲ್ಲಿ ರಾಷ್ಟ್ರದ ಎಲ್ಲೆಡೆ ವಿಶೇಷ ಕೈಗಾರಿಕಾ ವಲಯಗಳನ್ನು (SEZ) ಸ್ಥಾಪಿಸಲು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವ ನೀತಿಯನ್ನು ಜಾರಿಗೆ ತಂದರು. ಅದೇ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ನಾನು ಬಿಡದಿ ಸೇರಿದಂತೆ ಐದು ಕಡೆಗಳಲ್ಲಿ ಟೌನ್ ಶಿಪ್ ಗಳನ್ನು ಮಾಡಿ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಮಾಡಲು ಯೋಜನೆ ರೂಪಿಸಿದ್ದು ನಿಜ. ಆದರೆ ಭೂಮಿಯನ್ನು ಕೊಡಲು ರೈತರು ಕಡಾ ಖಂಡಿತವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ನಾನು ಆ ಯೋಜನೆಯನ್ನು ಅಲ್ಲಿಗೇ ಕೈ ಬಿಟ್ಟೆ. ಅಂದು ನಾನು ಆ ನಿರ್ಧಾರ ತೆಗೆದುಕೊಂಡ ಕಾರಣಕ್ಕೆ ರೈತರ ಭೂಮಿ ಉಳಿದುಕೊಂಡಿತು. ಈಗ ಆ ಭೂಮಿಗೆ ಬಂಗಾರಕ್ಕೂ ಮಿಗಿಲಾದ ಬೆಲೆ ಬಂದಿದೆ. ಅದಕ್ಕಾಗಿ ಅದರ ಮೇಲೆ ಭೂಗಳ್ಳರ ಕಣ್ಣು ಬಿದ್ದಿದೆ. ಈ ಸರ್ಕಾರ ಅವರಿಗೆ ರೈತರಿಂದ ಭೂಮಿಯನ್ನು ಕಿತ್ತುಕೊಡಲು ಹೊರಟಿದೆ. ಇದನ್ನಷ್ಟೇ ನಾವು ಪ್ರಶ್ನಿಸುತ್ತಿದ್ದೇವೆ. ಅದನ್ನು ಹೊರತುಪಡಿಸಿ ಕಾಂಗ್ರೆಸ್ ನಾಯಕರು ಜನರ ದಿಕ್ಕು ತಪ್ಪಿಸಲು ಸುಳ್ಳಿನ ಕಥೆ ಕಟ್ಟುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.
2006-07ರಲ್ಲಿ ಇದೇ ವಿಷಯದ ಬಗ್ಗೆ ವಿಧಾನಸಭೆಯಲ್ಲಿ ಮೂರು ದಿನಗಳ ಕಾಲ ಸುಧೀರ್ಘ ಚರ್ಚೆ ನಡೆಯಿತು. ಆ ಚರ್ಚೆಯಲ್ಲಿ ಇವತ್ತಿನ ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಾಲಿ ಮುಖ್ಯಮಂತ್ರಿ ಕೂಡ ಭಾಗಿಯಾಗಿದ್ದರು. ಆ ಸಂದರ್ಭದಲ್ಲಿ ಏನೇನು ಚರ್ಚೆ ಆಗಿದ್ದು ಎಂಬುದು ಇವರಿಗೆ ಗೊತ್ತಿಲ್ಲವೇ? ಎಲ್ಲವೂ ದಾಖಲೆಗಳಲ್ಲಿ ಸೇರಿದೆ, ಅದನ್ನು ತೆಗೆಸಿ ನೋಡುವುದಕ್ಕೆ ಇವರಿಗೆ ಏನು ಸಮಸ್ಯೆ? ಎಂದು ಸಚಿವ ಕುಮಾರಸ್ವಾಮಿ ಅವರು ಪ್ರಶ್ನಿಸಿದರು.
ನನ್ನ ಮತ್ತು ರೈತರ ಪ್ರಶ್ನೆಗಳಿಗೆ ಉತ್ತರಿಸಲಾಗದ ಕಾಂಗ್ರೆಸ್ ನಾಯಕರು ಈಗ ರೆಡ್ ಜೋನ್ ವಿಷಯವನ್ನು ಮುನ್ನೆಲೆಗೆ ತಂದು ಸುಳ್ಳು ಹೇಳುತ್ತಿದ್ದಾರೆ. ಅದರ ಬಗ್ಗೆ ಅವರ ಪಕ್ಷದ ಮಾಗಡಿ ಶಾಸಕರೇ ಸತ್ಯ ಹೇಳಿದ್ದಾರೆ. ನಾನು ರೈತರ ಭೂಮಿ ಉಳಿಸಿದೆ, ಈಗಿನ ಮುಖ್ಯಮಂತ್ರಿ ರೈತರ ಭೂಮಿಯನ್ನು ಕಸಿದುಕೊಳ್ಳಲು ಹೊರಟಿದ್ದಾರೆ. ಒಂದು ಇಂಚು ಫಲವತ್ತಾದ ಭೂಮಿಯನ್ನು ವಶಕ್ಕೆ ಪಡೆಯುವುದಿಲ್ಲ ಎಂದು ಅಂದು ಕಲಾಭದಲ್ಲಿ ನೇರವಾಗಿ ಹೇಳಿದ್ದೆ. ಇವರು ಅದೇ ಭೂಮಿಯನ್ನು ಲಪಟಾಯಿಸಲು ಮುಂದಾಗಿದ್ದಾರೆ. ಇನ್ನು ಮುಖ್ಯಮಂತ್ರಿ ಡಿನೋಟಿಫಿಕೇಶನ್ ಮಾಡಿದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ನಾಟಕ ಮಾಡುತ್ತಿದ್ದಾರೆ. ನೀವು ಡಿನೋಟಿಫಿಕೇಶನ್ ಮಾಡಿ ಜೈಲಿಗೆ ಹೋಗಬೇಕಾದ ಅಗತ್ಯವಿಲ್ಲ. ರೈತರ ಹಿತಕ್ಕಾಗಿ ಇಡೀ ಯೋಜನೆಯನ್ನು ಕೈಬಿಡಿ. ಇಡೀ ರಾಜ್ಯದ ಜನರು ನಿಮ್ಮ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದನ್ನು ಬಿಟ್ಟು ಭೂಮಿಗೆ ಕನ್ನ ಹಾಕಿದ್ದೀರಿ ಎಂದು ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಡ ರೈತರ ಕಷ್ಟಗಳ ಜೊತೆ ಚೆಲ್ಲಾಟ ಆಡಬೇಡಿ. ಚಿಕ್ಕುಗಳನ್ನು ಪ್ರದರ್ಶನ ಮಾಡುವ ಮೂಲಕ ಅವರನ್ನು ಅಪಮಾನ ಮಾಡಬೇಡಿ. ರೈತರು ಭೂಮಿಯನ್ನು ನಂಬಿ ಬದುಕು ಕಟ್ಟಿಕೊಳ್ಳುವ ಜನ. ಜನರಿಗೆ ಅನ್ನ ಕೊಡುವ ಅನ್ನದಾತರು. ಅಂತವರನ್ನು ಹಣದ ಮೂಲಕ ಚೆಕ್ಕುಗಳ ಮೂಲಕ ಅವಮಾನ ಮಾಡುವ ಕೆಲಸ ಮಾಡಬೇಡಿ. ಚೆಕ್ಕುಗಳ ಪ್ರದರ್ಶನ ನಿಮ್ಮ ದರ್ಪವಲ್ಲದೆ ಬೇರೇನೂ ಅಲ್ಲ. ಆಗಿರುವ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಆ ಜನರೇ ನಿಮಗೆ ತಕ್ಕ ಶಾಸ್ತಿ ಮಾಡುತ್ತಾರೆ ಎಂದು ಅವರು ಗುಡುಗಿದರು.
ಮಾಗಡಿ ಶಾಸಕರು ಚಕ್ ವಿತರಣೆ ಮಾಡಿದ ಕ್ರಮವನ್ನು ಕಟು ಶಬ್ದಗಳಲ್ಲಿ ಟೀಕಿಸಿದ ಸಚಿವ ಕುಮಾರಸ್ವಾಮಿ ಅವರು; ಹಣವನ್ನು ನಿಮ್ಮ ಮನೆಯಿಂದ ತಂದು ಕೊಡುತ್ತಿಲ್ಲ. ಹುಡುಕೋದಿಂದ ಸಾವಿರಾರು ಕೋಟಿ ರೂಪಾಯಿ ಸಾಲ ತಂದು ನಾಟಕ ಮಾಡುತ್ತಿದ್ದೀರಿ. ಈಗೇನೋ ಸಾಲ ತಂದು ಡ್ರಾಮಾ ಮಾಡಿ ಹೋಗಿಬಿಡುತ್ತೀರಿ. ಆಮೇಲೆ ಬಂದವರು ಏನು ಮಾಡಬೇಕು? ಇಷ್ಟು ದೊಡ್ಡ ಪ್ರಮಾಣದ ಸಾಲವನ್ನು ತೀರಿಸುವುದು ಹೇಗೆ? ರಾಜ್ಯದ ಹಣಕಾಸು ಪರಿಸ್ಥಿತಿಯ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬ ಎಳ್ಳಷ್ಟು ಕಾಳಜಿ ಎಚ್ಚರಿಕೆ ಇವರಿಗೆ ಬೇಡವೇ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಕೈಗಾರಿಕೆಗಳನ್ನು ಮಾಡಬೇಡಿ ಅಥವಾ ಟೌನ್ ಶಿಪ್ ಗಳನ್ನು ನಿರ್ಮಾಣ ಮಾಡಬೇಡಿ ಎಂದು ನಾನು ಹೇಳುತ್ತಿಲ್ಲ. ರಾಜ್ಯದಲ್ಲಿ ಬೇಕಾದಷ್ಟು ಒಣಭೂಮಿ ಇದೆ. ನೀರಾವರಿಗೆ ಯೋಗ್ಯವಲ್ಲದ ಜಾಗ ಬಹಳಷ್ಟಿದೆ. ಅಲ್ಲಿ ಹೋಗಿ ಟೌನ್ ಶಿಪ್ ಯೋಜನೆಗಳನ್ನು ಜಾರಿ ಮಾಡಿ. ಆದರೆ ಫಲವತ್ತಾದ ನೀರಾವರಿ ಭೂಮಿಗೆ ಏಕೆ ಬೇಕು? ಜನ ಹುಡುಕ್ತಿಲ್ಲ ಎಂದರು ರಾಕ್ಷಸಿ ಪ್ರವೃತ್ತಿಯಿಂದ ಅವರ ಏಕೈಕ ಜೀವನಾಧಾರವಾದ ಭೂಮಿಯನ್ನು ಕಿತ್ತುಕೊಳ್ಳಲು ಏಕೆ ಹೊರಟಿದ್ದೀರಿ. ಇದರಿಂದ ನಿಮಗೆ ಒಳ್ಳೆಯದಾಗುವುದಿಲ್ಲ ಎಂದು ಸಚಿವರು ಹೇಳಿದರು.
000
ಮೇಕೆದಾಟು ಎರಡು ರಾಜ್ಯಗಳಿಗೆ ಅನುಕೂಲಕರ; ತಕರಾರು ಮಾಡುವುದು ಸರಿಯಲ್ಲ
ಮಂಡ್ಯ 21 ಜೂನ್ 2026
ಕರ್ನಾಟಕದಲ್ಲಿ ಬರ ಪರಿಸ್ಥಿತಿ ಸೃಷ್ಟಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಹೀಗಿದ್ದರೂ ನೆರೆಯ ತಮಿಳುನಾಡು ಕಾವೇರಿ ವಿಚಾರದಲ್ಲಿ ಖ್ಯಾತ ತೆಗೆದಿರುವುದು ಸರಿಯಲ್ಲ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ತೀವ್ರ ಬೇಸರ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವರು; ತಮಿಳುನಾಡು ಕ್ಯಾತೆ ತೆಗೆಯುತ್ತಿರುವುದು ಇದೇ ಮೊದಲಲ್ಲ. ಕಳೆದ 50 ವರ್ಷದಿಂದಲೂ ಕಾವೇರಿ ವಿಚಾರದಲ್ಲಿ ಸಮಸ್ಯೆ ಸೃಷ್ಟಿ ಮಾಡುತ್ತಿದೆ. ತಮಿಳುನಾಡು ರಾಜ್ಯಕ್ಕೆ ನಿಗದಿಗಿಂತ ಎರಡು ಪಟ್ಟು ನೀರು ಕೊಟ್ಟಿದ್ದು ಇದೆ. ಅವರು ಅದನ್ನು ನೆನಪು ಮಾಡಿಕೊಳ್ಳುವುದಿಲ್ಲ. ಜಲಾಶಯಗಳು ತುಂಬಿದಾಗ ಯಥೇಚ್ಛವಾಗಿ ಆ ರಾಜ್ಯಕ್ಕೆ ನೀರು ಹರಿದು ಹೋಗಿದೆ. ಮಳೆ ಆಗದೆ ಜಲಾಶಯಗಳು ಖಾಲಿ ಬಿದ್ದಾಗ ಆ ರಾಜ್ಯವು ನಮ್ಮ ಮೇಲೆ ನೀರಿಗಾಗಿ ಒತ್ತಡ ಇರುವುದು ಸೂಕ್ತವಲ್ಲ ಎಂದು ಹೇಳಿದರು.
ವಾಸ್ತವ ಪರಿಸ್ಥಿತಿಯನ್ನು ತಮಿಳುನಾಡಿನವರು ಅರ್ಥ ಮಾಡಿಕೊಳ್ಳಬೇಕು. ನೆರೆಹೊರೆ ರಾಜ್ಯಗಳಲ್ಲಿ ವಾಸ ಮಾಡುವ ನಾವು ನಾವು ಅಣ್ಣ ತಮ್ಮಂದಿರ ರೀತಿ ಇರಬೇಕು. ಒಕ್ಕೂಟ ವ್ಯವಸ್ಥೆಯಲ್ಲಿ ತಿಕ್ಕಾಟ ನಡೆಸುವುದು ಸರಿಯಲ್ಲ. ಇರುವ ಪರಿಸ್ಥಿತಿಯನ್ನು ಅರಿತು ಪರಸ್ಪರ ಹಂಚಿಕೊಂಡು ನಡೆದರೆ ಎರಡು ರಾಜ್ಯಗಳಿಗೂ ಉತ್ತಮ ಎಂಬುದನ್ನು ತಮಿಳುನಾಡು ತಿಳಿದುಕೊಳ್ಳಬೇಕು. ಹೊರತುಪಡಿಸಿ ಕಾಲು ಕೆರೆದು ಜಗಳಕ್ಕೆ ಬರುವುದು ಒಳ್ಳೆಯ ನಡೆ ಅಲ್ಲ ಎಂದು ಕುಮಾರಸ್ವಾಮಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕಕ್ಕೆ ಎಲ್ಲಾ ಕಡೆಗಳಿಂದಲೂ ನಿರಂತರವಾಗಿ ಅನ್ಯಾಯ ಆಗುತ್ತದೆ. ನಮ್ಮ ರಾಜ್ಯದ ಜನರ ಹಣದಲ್ಲಿ ಕೃಷ್ಣರಾಜಸಾಗರ, ಕಬಿನಿ, ಹಾರಂಗಿ, ಹೇಮಾವತಿ ಸೇರಿದಂತೆ ಎಲ್ಲಾ ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಹಣದಲ್ಲಿ ಕಷ್ಟಪಟ್ಟು ಅಣೆಕಟ್ಟೆ ಕಟ್ಟಿಕೊಂಡರೆ ಅವುಗಳನ್ನು ಪಕ್ಕದ ರಾಜ್ಯಗಳಿಗೆ ನೀರು ಬೀಳುವ ಯಂತ್ರಗಳನ್ನಾಗಿ ಮಾಡಿಕೊಂಡಿದ್ದೇವೆ. ಅಂತಹ ಪರಿಸ್ಥಿತಿ ಸೃಷ್ಟಿಯಾಗಲು ರಾಜ್ಯದ ವೈಫಲ್ಯವು ಇದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.
ದೇವೇಗೌಡರು ಈ ದೇಶದ ಪ್ರಧಾನಿ ಆಗುವವರೆಗೂ ನೀರಾವರಿ ವಿಷಯದಲ್ಲಿ ಆಗಿದ್ದ ಅನ್ಯಾಯ ಸರಿಪಡಿಸುವ ಕೆಲಸಗಳು ಆಗಿರಲಿಲ್ಲ. ಈ ರಾಜ್ಯದ ವಿಧಾನಸಭೆಯ ಸದಸ್ಯರಾಗಿದ್ದಾಗಲೇ ಅವರು ಸದನದ ಒಳಗೆ ಮತ್ತು ಹೊರಗೆ ನಿರಂತರ ಹೋರಾಟ ಮಾಡಿ ಕಬಿನಿ, ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟುಗಳ ನಿರ್ಮಾಣಕ್ಕೆ ಕಾರಣಿಭೂತರಾದರು. ಕೆಲವರು ಇದೇ ವಿಷಯವನ್ನು ರಾಜಕೀಯಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿರುವುದು ಜನರಿಗೆ ಮಾಡುತ್ತಿರುವ ಅನ್ಯಾಯವಾಗಿದೆ. ನಮ್ಮ ಡ್ಯಾಂಗಳು ಪಕ್ಕದ ತಮಿಳುನಾಡಿಗೆ ನೀರು ಬಿಡುವ ಡ್ಯಾಂಗಳಾಗಿ ಬದಲಾಗಿವೆ ಎಂದು ಅವರು ದೂರಿದರು.
ಮೇಕೆದಾಟು ಯೋಜನೆಗೆ ತಮಿಳುನಾಡು ಅಡ್ಡಗಾಲು ಹಾಕುವ ನಡೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ನಮ್ಮ ರಾಜ್ಯದ ಪಾಲಿನ ನೀರನ್ನು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕಿದೆ. ಅತಿ ಮುಖ್ಯವಾಗಿ ಬೆಂಗಳೂರಿನ ಕುಡಿಯುವ ನೀರಿನ ಅಗತ್ಯಕ್ಕೆ ಈ ಅಣೆಕಟ್ಟೆ ನಿರ್ಮಾಣ ಅತ್ಯಂತ ಅಗತ್ಯವಾಗಿದೆ. ಈಗಾಗಲೇ ರಾಜ್ಯವು ಕೇಂದ್ರ ಸರ್ಕಾರಕ್ಕೆ ಯೋಜನಾ ಸಮಗ್ರ ವರದಿ (DPR) ಸಲ್ಲಿಸಿದೆ. ತಮಿಳುನಾಡು ರಾಜ್ಯದ ಸಹಮತ ಅಗತ್ಯವಿದೆ ಎಂದು ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಹೇಳಿದರು.
ಮೇಕೆದಾಟು ಅನುಷ್ಠಾನಕ್ಕೆ ಬಂದರೆ ಎರಡು ರಾಜ್ಯಗಳಿಗೆ ಲಾಭವಾಗಲಿದೆ. ಅಣೆಕಟ್ಟುಗಳಲ್ಲಿ ನೀರು ತುಂಬಿದ ಮೇಲೆ ಹೆಚ್ಚುವರಿ ನೀರು ಆ ರಾಜ್ಯಕ್ಕೆ ಹರಿದು ಹೋಗುತ್ತದೆ. ಅದನ್ನು ತಡೆಯಲು ಆಗುವುದಿಲ್ಲ. ಈ ಸರಳ ವಿಚಾರವನ್ನು ತಮಿಳುನಾಡು ಕಗ್ಗಂಟನ್ನಾಗಿ ಮಾಡುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಕುಡಿಯುವ ನೀರಿಗೆ ಮೇಕೆದಾಟು ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದೇವೆ ಎಂದು ನಾವು ಪದೇ ಪದೇ ಹೇಳುತ್ತಿದ್ದೇವೆ. ಅಷ್ಟೇ ಏಕೆ ಡಿಪಿಆರ್ ನಲ್ಲಿಯು ನಮೂದಿಸಿದ್ದೇವೆ. ವಸ್ತುಸ್ಥಿತಿ ಹೀಗಿದ್ದ ಮೇಲೆ ನರರಾಜ್ಯ ತಕರಾರು ಮಾಡುತ್ತಿರುವುದು ಸರಿಯಲ್ಲ. ತಮಿಳುನಾಡಿನ ರಾಜಕೀಯ ಪಕ್ಷಗಳು ಕರ್ನಾಟಕದ ಮೇಲೆ ದಬ್ಬಾಳಿಕೆ ನಡೆಸುವುದನ್ನು ನಿಲ್ಲಿಸಬೇಕು ಎಂದು ಅವರು ತೀಕ್ಷ್ಣವಾಗಿ ಪ್ರಶ್ನೆ ಒಂದಕ್ಕೆ ಉತ್ತರಿಸಿದರು.
ನೀಟ್ ಪರೀಕ್ಷಾರ್ಥಿಗಳಿಗೆ ಶುಭಕೋರಿದ ಕೇಂದ್ರ ಸಚಿವರು
ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ನೀಡುವ ನೀಟ್ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಶುಭ ಕೋರಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಪರೀಕ್ಷೆಯನ್ನು ಸುಸೂತ್ರವಾಗಿ ಯಾವುದೇ ಸಮಸ್ಯೆ ಇಲ್ಲದಂತೆ ನಡೆಸಲು ಕೇಂದ್ರ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕಳೆದ ಎರಡು ವರ್ಷದಲ್ಲಿ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ. ಕೆಲವು ದಿನಗಳ ಹಿಂದೆ ನಡೆದ ಘಟನೆಯಿಂದ ಪರೀಕ್ಷಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಅವರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದೆ. ವಿಶೇಷವೆಂದರೆ ಪ್ರಧಾನಮಂತ್ರಿಗಳ ಕಾರ್ಯಾಲಯವೇ ಈ ಬಗ್ಗೆ ನಿಗಾ ವಹಿಸಿದೆ. ಯಾವುದೇ ಗೊಂದಲಕ್ಕೆ ಅವಕಾಶ ಕೊಡದಂತೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಪರೀಕ್ಷೆಗಳು ನಡೆಸುವ ಸಂದರ್ಭದಲ್ಲಿ ಹಲವಾರು ಬಾರಿ ಗೊಂದಲಗಳು ಆಗಿವೆ. ಹಿಂದಿನ ಅನುಭವಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಬಾರಿ ಸಾಕಷ್ಟು ಮುಂಜಾಗ್ರತೆ ವಹಿಸಲಾಗಿದೆ. ವೈದ್ಯಕೀಯ ಕೋರ್ಸ್ ಗಳನ್ನು ಪಡೆಯಲು ಪರೀಕ್ಷೆ ಬರೆದಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿ ಎಂದು ಸಚಿವರು ಹಾರೈಸಿದರು.




Comments
Leave a Comment