ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಕಟ್ಟುವ ಷಡ್ಯಂತ್ರ ಮಾಡಬೇಡಿ ನಾಗೇಂದ್ರ ರಾಜೀನಾಮೆ ಪಡೆದು ಚರ್ಚೆಗೆ ಅವಕಾಶ ಮಾಡಿಕೊಡಿ: ವಿಜಯೇಂದ್ರ ಒತ್ತಾಯ
ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಕಟ್ಟುವ ಷಡ್ಯಂತ್ರ ಮಾಡಬೇಡಿ
ನಾಗೇಂದ್ರ ರಾಜೀನಾಮೆ ಪಡೆದು ಚರ್ಚೆಗೆ ಅವಕಾಶ ಮಾಡಿಕೊಡಿ: ವಿಜಯೇಂದ್ರ ಒತ್ತಾಯ
ಬೆಂಗಳೂರು: ರಾಜ್ಯ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ತಕ್ಷಣ ನಾಗೇಂದ್ರರ ರಾಜೀನಾಮೆ ಪಡೆಯಲಿ ಹಾಗೂ ಬರ, ಕೆಪಿಎಸ್ಸಿ ಹಗರಣ ಮತ್ತಿತರ ಸಮಸ್ಯೆಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.
ಸಚಿವ ನಾಗೇಂದ್ರರ ರಾಜೀನಾಮೆಗೆ ಆಗ್ರಹಿಸಿ ಇಂದು ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಬಿಜೆಪಿಯ ಕಾರ್ಯಕರ್ತರು ಎರಡು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ- ಜೆಡಿಎಸ್ ಒಟ್ಟಾಗಿ ಸದನದ ಒಳಗೆ ಭ್ರಷ್ಟ ಸಚಿವ ನಾಗೇಂದ್ರ ಕೈಬಿಡಲು ಹೋರಾಟ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಭ್ರಷ್ಟಾಚಾರ ಮಾಡಿದ ನಾಗೇಂದ್ರರನ್ನು ಕಂಡರೆ ಸಿಎಂಗೆ ಭಯವೇಕೆ ಎಂದು ಪ್ರಶ್ನಿಸಿದರು. ಭ್ರಷ್ಟಾಚಾರಕ್ಕೆ ಜಾತಿಯ ಬಣ್ಣ ಕಟ್ಟುವ ಷಡ್ಯಂತ್ರ ಮಾಡಬೇಡಿ ಎಂದು ತಿಳಿಸಿದರು.
ದುಡ್ಡು ಹೊಡೆಯಬೇಕಾದರೆ ನಾಗೇಂದ್ರ ಅವರು ಯೋಚನೆ ಮಾಡಬೇಕು ಎಂದು ಹೇಳಿದರು. ಸದನ ನಡೆದು ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ಆಗಲು ನಾಗೇಂದ್ರರ ರಾಜೀನಾಮೆ ಪಡೆಯಲಿ ಎಂದು ಒತ್ತಾಯಿಸಿದರು. ಕಿವಿಗೆ ಹೂ ಮುಡಿಸುವ ಕೆಲಸ ಮಾಡಬೇಡಿ ಎಂದು ಆಗ್ರಹಿಸಿದರು.
ಖಜಾನೆಗೆ ಹಣ ಬರಲಿ- ಆರ್.ಅಶೋಕ್
ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಾತನಾಡಿ, ದಲಿತರ ಹಣ ಅವರಿಗೇ ಖರ್ಚಾಗಲು ಅದು ಖಜಾನೆಗೆ ಬರಬೇಕಿದೆ. ಅದಕ್ಕಾಗಿ ಬಿಜೆಪಿ- ಜೆಡಿಎಸ್‍ನ ನಾವು ಹೋರಾಟ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಒಬ್ಬ ವ್ಯಕ್ತಿಗಾಗಿ ನೀವ್ಯಾಕೆ ಸದನ ಹಾಳು ಮಾಡುತ್ತೀರಿ? ಬೇರೆ ಯಾರೂ ದಲಿತರಿಲ್ಲವೇ? ಇನ್ನೂ 10-12 ಜನ ನಿಮ್ಮ ಪಕ್ಷದ ಎಸ್‍ಟಿ ಶಾಸಕರಿದ್ದಾರೆ. ನಾಗೇಂದ್ರರ ರಾಜೀನಾಮೆ ಪಡೆದು ಅವರನ್ನು ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸಿದರು. ಶಾಸಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.







Comments
Leave a Comment